ಕಡಬ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ವಿಜಯ ದಶಮಿ ಉತ್ಸವ ಅ.2ರಂದು ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಮಂಗಳೂರು ವಿಭಾಗದ ಸಹ ಕಾರ್ಯವಾಹ ಸುಧೀರ್ ಸಿದ್ದಾಪುರ ಅವರು ಮಾತನಾಡಿ, ಅಸುರೀ ಶಕ್ತಿಯನ್ನು ದೈವಿ ಶಕ್ತಿಯು ದಮನಿಸಿದ ದಿನವನ್ನು ನಾವು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ. ಸಮಾಜದಲ್ಲಿನ ಅಸುರೀ ಶಕ್ತಿಯನ್ನು ದಮನಿಸುವ ಕಾರ್ಯ ಆಗಬೇಕಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪಸೃತೆಯನ್ನು ತೊಲಗಿಸಿ ಸಮೃದ್ಧ ಹಿಂದೂ ಶಕ್ತಿಯಾಗಿ ಹೊರ ಹೊಮ್ಮಬೇಕು. ಸಂಘದ ಆಶಯವಾಗಿರುವ ಪಂಚ ಪರಿವರ್ತನೆಗೆ ನಾವೇಲ್ಲರೂ ಕಾರ್ಯಕರ್ತರಾಗಿ ದುಡಿಯಬೇಕಿದೆ ಎಂದು ಹೇಳಿದರು. ಕಕ್ಕೆನಡ್ಕ ಆದಿಮೊಗೇರ್ಕಳ ದೈವಸ್ಥಾನದ ಮುಖ್ಯಸ್ಥ, ಪಿಜಿನ ಮುಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ ಸಿದ್ದಾಂತಗಳನ್ನು ನಾನು ಮೆಚ್ಚಿಕೊಂಡಿದ್ದು, ಸಮಾಜದಲ್ಲಿನ ಮೇಲು ಕೀಳು ಎಂಬ ಭೇಧ ಭಾವವನ್ನು ಅಳಿಸಲು ಸಂಘವು ಕಟಿಬದ್ದವಾಗಿರುವುದು ಶ್ಲಾಘನಿಯ ಎಂದು ಹೇಳಿದರು. ಉತ್ಸವದಲ್ಲಿ ಸುಮಾರು 584 ಸ್ವಯಂ ಸೇವಕರು ಪಾಲ್ಗೊಂಡಿದ್ದರು.