ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 132ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಆಸಕ್ತರಿಗಾಗಿ ಮೂರು ವಿಶೇಷ ಅವಧಿಗಳು
ಚಿಂತಕರು ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ
ಪುತ್ತೂರು: ಭಾರತವು ಪಾಶ್ಚಾತ್ಯರ ಆಳ್ವಿಕೆಯಲ್ಲಿದ್ದ ಕಾಲಘಟ್ಟದಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವಕ್ಕೆ ಸಾರಿದವರು ಸ್ವಾಮಿ ವಿವೇಕಾನಂದರು. 1893ನೇ ಇಸವಿಯ ಸೆಪ್ಟೆಂಬರ್ 11 ರಂದು ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ 132ನೇ ವರ್ಷಾಚರಣೆಯ ಸಂದರ್ಭದಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು “ವಿವೇಕ ವಿಜಯ” ಎಂಬ ಶೀರ್ಷಿಕೆಯೊಂದಿಗೆ ವಿಶೇಷ ಉಪನ್ಯಾಸಗಳನ್ನು ಮೂರು ಅವಧಿಗಳಲ್ಲಿ ಅ.11 ಶನಿವಾರದಂದು ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.
ಉದ್ಘಾಟನೆ ಹಾಗೂ ಮೊದಲ ಅವಧಿ:
ಬೆಳಗ್ಗೆ 9.30 ಕ್ಕೆ ಸರಿಯಾಗಿ ವಿವೇಕಾನಂದ ಆವರಣದ ಕೇಶವ ಸಂಕಲ್ಪ ಸಭಾಭವನದಲ್ಲಿ ವಿವೇಕ ವಿಜಯ ವಿಶೇಷ ಉಪನ್ಯಾಸಗಳ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ ಅವರು ನೆರವೇರಿಸಲಿದ್ದಾರೆ. ಉದ್ಘಾಟನೆಯ ನಂತರ ನಡೆಯುವ ಮೊದಲ ಅವಧಿಯಲ್ಲಿ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾರತ ವಂದನಾ – ವಿವೇಕ ಚಿಂತನ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಅವರು ಉಪಸ್ಥಿತರಿರಲಿದ್ದಾರೆ. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಭಾಗವಹಿಸಲಿದ್ದಾರೆ.
ಎರಡನೇ ಅವಧಿ
ಎರಡನೇ ಅವಧಿಯು ಬೆಳಗ್ಗೆ 11.30ಕ್ಕೆ ಸರಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆಯಲಿದ್ದು, ಚಕ್ರವರ್ತಿ ಸೂಲಿಬೆಲೆಯವರು ಶಿಕ್ಷಕರನ್ನುದ್ದೇಶಿಸಿ ರಾಷ್ಟ್ರ ರಕ್ಷಣಾ – ವಿವೇಕ ಶಿಕ್ಷಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ಸುಮಾರು 250 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಎಂ. ಗೋಪಾಲಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಮೂರನೇ ಅವಧಿ
ಮೂರನೇ ಅವಧಿಯಲ್ಲಿ “ಸಿಂದೂರ – ಭಾರತದ ವಿಶ್ವರೂಪ ದರ್ಶನ” ಎಂಬ ವಿಷಯದ ಕುರಿತು ಪುತ್ತೂರು ಸಿಟಿಝನ್ ಫೋರಮ್ ನೇತೃತ್ವದಲ್ಲಿ ಆಸಕ್ತರಿಗಾಗಿ ವಿಶೇಷ ಅವಧಿ ಹಾಗೂ ಸಂವಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಸಂಜೆ 4.30 ಗಂಟೆಗೆ ಸರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ವಿಷಯ ಮಂಡನೆ ನಡೆಸಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನ ಮಹಾವೀರ ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್ ಡಾ. ಸಚಿನ್ ಶಂಕರ್ ಹಾರಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಅಖಂಡತೆಗೆ ದೇಶದ ಸಶಸ್ತ್ರ ಪಡೆಗಳ ಕೊಡುಗೆಯನ್ನು ಸ್ಮರಿಸುತ್ತಾ, ಭಾರತದ ಜಾಗತಿಕ ಶಕ್ತಿಯ ಪ್ರದರ್ಶನದ ವಿಷಯಗಳನ್ನು ಕೇಂದ್ರೀಕರಿಸಿ ಈ ಅವಧಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 81050 72386, 89719 24424 ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು.