ಪುತ್ತೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಆಯೋಗವು ನಡೆಸುತ್ತಿರುವ ಸಮೀಕ್ಷೆ ಪ್ರಗತಿ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಮಂಗಳವಾರ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ. ಸಮೀಕ್ಷೆ ಇಂದು ಮುಗಿಯಬೇಕಿತ್ತು. ಆದರೆ ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಕೊಪ್ಪಳ ಶೇ.97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.67 ರಷ್ಟು ಆಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿದ್ದಾರೆ. ಈ ಮನವಿ ಪುರಸ್ಕರಿಸಿ ಅ.18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ್ದೇವೆ” ಎಂದು ಹೇಳಿದ್ದಾರೆ. ಅ.12ನೇ ತಾರೀಕಿನಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ ಎಂದು ಸಿಎಂ ಹೇಳಿದರು.