ಜನರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಲು ಸಾರ್ವಜನಿಕರ ಒತ್ತಾಯ
ಮಾಣಿ: ಬಂಟ್ವಾಳ ತಾಲೂಕಿನ ಶಂಭೂರು ಅಣೆಕಟ್ಟಿನಿಂದ ಪುತ್ತೂರು,ಸುಳ್ಯ ಕಡೆಗೆ ನೀರು ಸರಬರಾಜು ಮಾಡುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಬಹುಗ್ರಾಮ ನೀರಿನ ಯೋಜನೆ ಪ್ರಾರಂಭ ಆಗಿ ಕಾಮಗಾರಿ ಆರಂಭಗೊಂಡಿದೆ. ಆದರೆ ಗ್ರಾಮೀಣ ಭಾಗದ ಕಿರಿದಾದ ರಸ್ತೆ ಬದಿಯಲ್ಲಿ ಬೃಹದಾಕಾರದ ಪೈಪ್ ಗಳು ಹಾದು ಹೋಗುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಮಾಣಿ – ಲಕ್ಕಪ್ಪಕೋಡಿ-ಅರ್ಬಿ- ಕಡಮಡ್ಕ ಮೂಲಕ ಬರಿಮಾರು ಸಂಪರ್ಕ ರಸ್ತೆಯಾಗಿದ್ದರೂ ಅದು ಇಂದಿಗೂ ಕಚ್ಚಾ ರಸ್ತೆಯಾಗಿ ಉಳಿದಿದೆ. ಮಳೆ ಬಂದರೆ ಕೆಸರು ಮಯವಾಗಿ ರಸ್ತೆಯಲ್ಲಿ ವಾಹನ ಸಂಚಾರವೇ ದುಸ್ತರವಾಗುತ್ತದೆ. ಆದರೆ ಇದೀಗ ಅದೇ ರಸ್ತೆಯಲ್ಲಿ ಬೃಹತ್ ಪ್ರಮಾಣದ ಪೈಪ್ ಲೈನ್ ಹಾದು ಹೋದರೆ ಮತ್ತಷ್ಟು
ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಯೋಜನೆ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಪಾದಚಾರಿಗಳ ಸಹಿತ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.