ನೆಲ್ಯಾಡಿ: ಆಂಧ್ರಪ್ರದೇಶ ಮೂಲದ ಲಾರಿ ಚಾಲಕರೊಬ್ಬರು ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ಅಸ್ವಸ್ಥಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದವರು ಅಲ್ಲಿ ಮೃತಪಟ್ಟ ಘಟನೆ ಅ.9ರಂದು ನಡೆದಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆ ನಿವಾಸಿ ರಾಜಶೇಖರ ನಾಯ್ಡು(49ವ.)ಮೃತಪಟ್ಟವರಾಗಿದ್ದಾರೆ. ಇವರು ಲಾರಿ ಚಾಲಕರಾಗಿದ್ದು ಅ.7ರಂದು ಲಾರಿಯಲ್ಲಿ(ಕೆಎ 01, ಎಆರ್ 7209)ಚಾಲಕನಾಗಿ ಆಂಧ್ರಪ್ರದೇಶದಿಂದ ಮೂಡಬಿದ್ರೆಗೆ ಬಂದು ಲಾರಿಯಲ್ಲಿ ಮಣ್ಣು ಲೋಡು ಮಾಡಿಕೊಂಡು ವಾಪಾಸು ಹೋಗುತ್ತಿರುವಾಗ ಅ.9ರಂದು ತಡರಾತ್ರಿ ಉಪ್ಪಿನಂಗಡಿ ಗ್ರಾಮದ ಪಂಜಳ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಲಾರಿ ರಸ್ತೆ ಬದಿಗೆ ಹೋಗಿ ನಿಂತಿದ್ದನ್ನು ಸ್ಥಳೀಯರು ನೋಡಿ ಸ್ಥಳಕ್ಕೆ ಹೋಗಿದ್ದು, ಈ ವೇಳೆ ಚಾಲಕ ರಾಜಶೇಖರ ನಾಯ್ಡು ಅಸ್ವಸ್ಥಗೊಂಡಿದ್ದು, ಅವರನ್ನು ಉಪಚರಿಸಿ ಅಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ರಾತ್ರಿ 1.30ರ ವೇಳೆಗೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಪರಿಶೀಲನೆ ನಡೆಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಮೃತ ರಾಜಶೇಖರ ನಾಯ್ಡು ಪುತ್ರ ವಿವೇಕ್ ಚೌಧರಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.