ಪುತ್ತೂರು: ದೇಶದ ಪರಮೋಚ್ಛ ನ್ಯಾಯಪೀಠದ ಮುಖ್ಯ ನ್ಯಾಯಮೂರ್ತಿಯ ಉನ್ನತ ಸ್ಥಾನದಲ್ಲಿ ಇರುವವರು ಭೋಷನ್ ರಾಮಕೃಷ್ಣ ಗವಾಯಿಯವರು. ಇಲ್ಲಿಯವರೆಗೆ 52 ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಈ ಹುದ್ದೆ ಅಲಂಕರಿಸಿದ ದಲಿತ ವರ್ಗಕ್ಕೆ ಸೇರಿದ ಎರಡನೆಯವರು. ಇಂತಹ ಒಂದು ಘನತೆವೆತ್ತ ಹುದ್ದೆಯಲ್ಲಿರುವವರ ಮೇಲೆಯೇ ಚಪ್ಪಲಿ(ಶೂ) ಎಸೆಯಲು ಪ್ರಯತ್ನಿಸಿದ್ದು ಬಹಳ ಆತಂಕಕಾರಿ ಘಟನೆ. ಈ ಕೃತ್ಯವೆಸಗಿರುವ ವ್ಯಕ್ತಿ ಡಾ.ರಾಕೇಶ್ ಕಿಶೋರ್ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿಸುವಂತೆ ಕ್ರಿಶ್ಚಿಯನ್ ಯೂನಿಯನ್ ಇದರ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನಸ್ ಅವರು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ಡಾ. ರಾಕೇಶ್ ಕಿಶೋರ್ ಅವರು ಉನ್ನತ ವ್ಯಾಸಂಗ ಮಾಡಿರುವ 70 ವರ್ಷ ದಾಟಿರುವ ಅಪಾರ ಜೀವನ ಅನುಭವವಿರುವ ಒಬ್ಬ ನ್ಯಾಯವಾದಿ. ಒಬ್ಬ ನ್ಯಾಯವಾದಿಯಾಗಿ ತನ್ನ ಪ್ರತಿರೋಧಕ್ಕೆ ಇತರ ಯಾವುದೇ ನ್ಯಾಯಿಕ ಮಾರ್ಗವನ್ನು ಅನುಸರಿಸದೆ ಇಂತಹ ಹಿಂಸಾತ್ಮಕ ಮತ್ತು ಅತ್ಯಂತ ನೀಚ ಮಾರ್ಗವನ್ನು ಅನುಸರಿಸಿರುವುದು ಬಹಳ ಆತಂಕಕಾರಿ ಬೆಳವಣಿಗೆ.
ಇಂತಹ ಒಬ್ಬ ನ್ಯಾಯವಾದಿಯೇ ಇಂತಹ ಒಂದು ಮಾರ್ಗ ಅನುಸರಿಸುವುದಾದರೆ ಇದು ಅತ್ಯಂತ ಅಪಾಯಕಾರಿ ಸೂಚನೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಥವಾ ನ್ಯಾಯಧೀಶರ ಬಗ್ಗೆ ಅಸಮಧಾನ ಇದ್ದರೆ ಮರು ವಿಚಾರಣೆ ಕೋರುವ ಅಥವಾ ಇತರ ನ್ಯಾಯಿಕ ಮಾರ್ಗಗಳನ್ನು ಅನುಸರಿಸುವ ಅವಕಾಶ ಇದ್ದರೂ ಈ ಮಾರ್ಗ ಅನುಸರಿಸಿರುವುದು ಭವಿಷ್ಯದ ಭಾರತದ ಬಗ್ಗೆ ಆತಂಕ ಉಂಟು ಮಾಡುವ ವಿಚಾರ, ದೇಶದಲ್ಲಿ ಈ ರೀತಿ ಬೀದಿ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಒಂದು ವರ್ಗವಿದ್ದು ಇಂತಹ ವರ್ಗ ಕಾನೂನಿಗೆ ಸವಾಲಾಗುತ್ತಿರುವುದನ್ನು ನಾವು ನೋಡುತ್ತಾ ಇದ್ದೇವೆ. ಇದರ ಹಿಂದೆ ಒಂದು ಮನೋಸ್ಥಿತಿ ಇದೆ. ಇದು ಇಡೀ ವ್ಯವಸ್ಥೆಯನ್ನು ಆವರಿಸಿಕೊಳ್ಳುವ ಒಂದು ಭಯವು ಕಂಡು ಬರುತ್ತಿದೆ.
ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಯಾವುದೇ ರಾಜಕೀಯ ಪಕ್ಷದ ಜತೆ ಸಂಬಂಧ ಹೊಂದಿರುವುದಿಲ್ಲ.ಆದರೆ ರಾಜಕೀಯ ಪಕ್ಷದವೊಂದರ ಬೆಂಬಲಿಗರು ಇದನ್ನು ಖಂಡಿಸುವ ಬದಲು ಬೆಂಬಲಿಸುತ್ತಿದ್ದಾರೆ. ಜಸ್ಟೀಸ್ ಗವಾಯಿಯವರ ಪೂರ್ವಜರು ಅಂಬೇಡ್ಕರ್ ರವರಿಗೆ ನಿಕಟವರ್ತಿಗಳಾಗಿದ್ದು ದಲಿತೋದ್ಧಾರದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು. ವಕೀಲ ವೃತ್ತಿಯಲ್ಲಿ ಜಾತಿ-ಧರ್ಮವನ್ನು ಬದಿಗೊತ್ತಿ ಮಾಡುವಂತದ್ದು. ವಕೀಲ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬ ಇಷ್ಟೊಂದು ಜನಾಂಗ ದ್ವೇಷಿಯಾಗಿರುವುದು ನಂಬಲಸಾಧ್ಯ ವಿಚಾರ. ಇಂತವರನ್ನು ಹುಡುಕಿ ಕಠಿನ ಶಿಕ್ಷೆ ನೀಡುವ ಅಗತ್ಯತೆ ಇದೆ. ಡಾ.ರಾಕೇಶ್ ಕಿಶೋರ್ ರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸುತ್ತಿದ್ದೇವೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕ್ರಿಶ್ಚಿಯನ್ ಯೂನಿಯನ್ನ ಗೌರವ ಸಲಹೆಗಾರ ಜೋರೋಮಿಯಸ್ ಪಾಯಸ್, ಉಪಾಧ್ಯಕ್ಷ ವಾಲ್ಟರ್ ಡಿಸೋಜ, ನಿಯೋಜಿತ ಅಧ್ಯಕ್ಷ ಜೋಕಿಂ ಲೂಯಿಸ್, ಕಾರ್ಯಕಾರಿ ಸಮಿತಿ ಸದಸ್ಯ ವಲೇರಿಯನ್ ಡಿಸೋಜ ಉಪಸ್ಥಿತರಿದ್ದರು.