ಪುತ್ತೂರು: ಅ.12 ರಂದು ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದ ತೆಂಕಿಲ ನೂಜಿ ಕುಟ್ಟಿಬೆಟ್ಟುಯಲ್ಲಿನ ಪರಿಸರ ಜೊತೆಗೆ ಕೆಲವು ಮನೆಯೊಳಗೆ ನೀರು ಹರಿದು ಮನೆ ಹಾಗೂ ಪರಿಸರ ಸುತ್ತಲೂ ಕೊಳಚೆ ತುಂಬಿದ ಘಟನೆ ನಡೆದಿದೆ.

ಭಾರಿ ಸುರಿದ ಮಳೆಯಿಂದ ತೆಂಕಿಲ ನೂಜಿಯಲ್ಲಿನ ತೋಡು ಮುಳುಗಿ ತೋಡಿನ ಎತ್ತರ ಮಟ್ಟದಲ್ಲಿ ಬಿರುಸಿನಿಂದ ನೀರು ಹರಿದ ಪರಿಣಾಮ ಸ್ಥಳೀಯ ಲ್ಯಾನ್ಸಿ ಡಿ’ಸೋಜರವರ ಕಂಪೌಂಡ್ ಕುಸಿದು ಕಂಪೌಂಡಿನ ಕಲ್ಲುಗಳು ದೂರಕ್ಕೆ ಎಸೆಯಲ್ಪಟ್ಟಿರುತ್ತದೆ. ಮಾತ್ರವಲ್ಲ ನೀರು ಮನೆಯೊಳಗೆ ನುಗ್ಗಿದ್ದು ಮನೆ ತುಂಬಾ ಕೊಳಚೆ ನೀರು ಆಕ್ರಮಿಸಿತ್ತು. ಅಲ್ಲದೆ ಸ್ಥಳೀಯ ಕೆಲವು ಮನೆಗಳ ಅಂಗಳಕ್ಕೆ ನೀರು ಹರಿದಿದ್ದು ಮನೆ ಮಂದಿಗೆ ಕೊಳಚೆ ನೀರನ್ನು ತೆರವುಗೊಳಿಸಲು ಹರಸಾಹಸ ಪಟ್ಟಿದ್ದರು. ಕುಟ್ಟಿಬೆಟ್ಟು ಪರಿಸರದಲ್ಲಿ ಬೃಹತ್ ಗಿಡಗಂಟಿಗಳ ನಡುವೆ ತೋಡು ಇದ್ದು ಈ ತೋಡಿನಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಈ ಸಮಸ್ಯೆ ಉದ್ಭವಿಸಿದೆ ಮಾತ್ರವಲ್ಲ ಈ ಭಾಗದಲ್ಲಿ ಖಾಲಿ ಜಾಗಗಳಿದ್ದು ಮನೆ ನಿರ್ಮಿಸುವವರಿಗೆ ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲ ಎಂದು ಸ್ಥಳೀಯರು ಸುದ್ದಿಗೆ ತಿಳಿಸಿದ್ದಾರೆ.