ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನಸಹಕಾರ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ನಿಧನ

0

ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿದ್ದ ಶಶಿಧರ ರಾವ್ ಬೊಳಿಕ್ಕಲ(73ವ)ರವರು ಕೆಲ ದಿನಗಳ ಅಸೌಖ್ಯದಿಂದಾಗಿ ಅ.೧೩ರಂದು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ನಿಧನರಾದರು.
ಹಲವು ವರ್ಷಗಳ ಕಾಲ ಪುತ್ತೂರಿನಲ್ಲಿ ನ್ಯಾಯವಾದಿಯಾಗಿ ವೃತ್ತಿ ನಿರ್ವಹಣೆ ಮಾಡಿದ್ದ ಅವರು ಬಳಿಕ ವೃತ್ತಿಗೆ ವಿದಾಯ ಹಾಡಿ ಪೂರ್ಣಪ್ರಮಾಣದಲ್ಲಿ ಕೃಷಿ ಹಾಗೂ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ೨೦೦೫ರಿಂದ ಸತತ ಐದನೇ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು.ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಸಹಕಾರಿ ಜೊತೆಗೆ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದರು.ಕೆಯ್ಯೂರು ಶ್ರೀ ದುರ್ಗಾ ಯುವಕ ಮಂಡಲ ಮತ್ತು ಬೊಳಿಕ್ಕಲ ಯುವಕ ಸಂಘದ ಗೌರವಾಧ್ಯಕ್ಷರಾಗಿ,ಅಂಕತಡ್ಕ ಪೂಂಜಿರೋಟು ಕೋಟಿ ಚೆನ್ನಯ ಬ್ರಹ್ಮಬೈದೇರ್ಕಳ ಗರಡಿಯ ಬ್ರಹಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಬೊಳಿಕ್ಕಲ ಗಣೇಶೋತ್ಸವ ಸಮಿತಿಯಲ್ಲಿಯೂ ಇವರು ತೊಡಗಿಸಿಕೊಂಡ ಬಳಿಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಆರಂಭಗೊಳ್ಳಲು ಕಾರಣಕರ್ತರಾಗಿದ್ದರು.ಕಾವು ಬುಶ್ರಾ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.ಮೃತರು ಪತ್ನಿ ಯಶೋಧ,ಪುತ್ರಿ ಶ್ರೀನಿಧಿ,ಅಳಿಯ ನಾಗಾನಂದ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.
ಅ.14ರಂದು ಅಂತ್ಯಕ್ರಿಯೆ:
ಮೃತರ ಅಂತ್ಯಸಂಸ್ಕಾರ ಅ.14ರಂದು ಕೆಯ್ಯೂರು ಬೊಳಿಕ್ಕಲ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here