ವರದಿ: ದೀಪು ಉಬಾರ್, ಉಪ್ಪಿನಂಗಡಿ
ಉಪ್ಪಿನಂಗಡಿ: ಬಿ.ಸಿ.ರೋಡ್ – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಉಪ್ಪಿನಂಗಡಿ ಭಾಗದಲ್ಲಿ ಅಪೂರ್ಣ ಹಂತದಲ್ಲಿದೆ. ಇದರಿಂದಾಗಿ ಹತ್ತಾರು ಸಮಸ್ಯೆಗಳು ಉದ್ಭವಿಸಿದ್ದು, ಈ ಭಾಗದ ಜನತೆ ಹಾಗೂ ವಾಹನ ಸವಾರರನ್ನು ಹೈರಾಣಾಗಿಸಿದೆ.

ಅಡ್ಡಾದಿಡ್ಡಿ ಸಾಗಿಬರುವ ವಾಹನಗಳು:
34 ನೆಕ್ಕಿಲಾಡಿಯಲ್ಲಿ ಅಂಡರ್ಪಾಸ್ ಕಾಮಗಾರಿ ನಡೆದಿದ್ದರೂ, ಸರ್ವಿಸ್ ರಸ್ತೆಗಳ ಕೆಲಸ ಅಪೂರ್ಣ ಹಂತದಲ್ಲಿದೆ. ಆದ್ದರಿಂದ ಬೊಳುವಾರು ಕಡೆಯಿಂದ ಬರುವ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಅಂಡರ್ಪಾಸ್ ಮೂಲಕ ಮತ್ತೊಂದು ರಸ್ತೆಯಲ್ಲಿ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ವಾಹನಗಳು ನೇರವಾಗಿ ಹೆದ್ದಾರಿಗೆ ನುಗ್ಗುತ್ತವೆ. ಇಲ್ಲಿ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ಭಾಗಶಃ ಮುಗಿದಿದ್ದು, ಕುಮಾರಧಾರ ನದಿಯ ಒಂದು ಸೇತುವೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಉಪ್ಪಿನಂಗಡಿ ಕಡೆಯಿಂದ ಸಾಗಿ ಬರುವ ವಾಹನಗಳು ನೆಕ್ಕಿಲಾಡಿ ಜಂಕ್ಷನ್ನಿಂದ ಸ್ವಲ್ಪ ದೂರದ ತನಕ ಏಕಮುಖ ಸಂಚಾರವನ್ನು ಪಡೆಯಬೇಕಾಗಿದೆ. ಮತ್ತೊಂದು ಹೆದ್ದಾರಿಯಲ್ಲಿ ಬಿ.ಸಿ.ರೋಡ್ನಿಂದ ಉಪ್ಪಿನಂಗಡಿ ಕಡೆಗೆ ಬರುವ ವಾಹನಗಳು ಸಾಗಿ ಬರುತ್ತವೆ. ಆದರೆ ನೆಕ್ಕಿಲಾಡಿ ಜಂಕ್ಷನ್ನಲ್ಲಿ ಎರಡೂ ಹೆದ್ದಾರಿಗಳ ಮಧ್ಯೆ ಯಾವುದೇ ಡಿವೈಡರ್ ಅಳವಡಿಸದೇ ಉದ್ದಕ್ಕೆ ತೆರೆದಿಟ್ಟಿದ್ದು, ಆದ್ದರಿಂದಾಗಿ ಇಲ್ಲಿ ಯಾವುದೇ ಸ್ಥಳದಿಂದಲಾದರೂ ವಾಹನಗಳಿಗೆ ಹೆದ್ದಾರಿಗೆ ಬಂದು ಯಾವ ಕಡೆಗಾದರೂ ತಿರುವು ಪಡೆದುಕೊಳ್ಳಲು ಸಾಧ್ಯ. ಇನ್ನೊಂದು ಕಡೆಯಿಂದ ಪುತ್ತೂರು ಕಡೆಯಿಂದ ಬರುವ ವಾಹನಗಳು ಕೂಡಾ ಹೆದ್ದಾರಿಗೆ ನೇರ ಪ್ರವೇಶ ಪಡೆಯುತ್ತವೆ. ಗ್ರಾ.ಪಂ. ಇರುವ ಬದಿಯಿಂದ ಬರುವ ವಾಹನಗಳು ಕೂಡಾ ನೇರವಾಗಿ ಹೆದ್ದಾರಿಯನ್ನು ಪ್ರವೇಶಿಸುತ್ತವೆ. ಹೆದ್ದಾರಿಯ ಎರಡೂ ಬದಿಗಳಿಂದಲೂ ಏಕಾಏಕಿ ಹೆದ್ದಾರಿಗೆ ನುಗ್ಗಲು ಇಲ್ಲಿ ವಾಹನಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಹೆದ್ದಾರಿಯಲ್ಲಿ ರಣವೇಗದಲ್ಲಿ ವಾಹನಗಳು ಸಾಗಿ ಬರುವ ಸಂದರ್ಭದಲ್ಲಿ ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ನಾಲ್ಕು ದಿಕ್ಕುಗಳಿಂದಲೂ ವಾಹನಗಳು ಹೆದ್ದಾರಿಗೆ ಬರುತ್ತಿದ್ದು, ವಾಹನ ಸವಾರರ ಗೊಂದಲಕ್ಕೂ ಕಾರಣವಾಗುತ್ತದೆ. ಇದೇ ಸ್ಥಿತಿ ಕೂಟೇಲು ಬಳಿಯೂ ಇದೆ. ಇಲ್ಲಿ ಸರ್ವಿಸ್ ರಸ್ತೆಯ ಕಾಮಗಾರಿ ಈಗಷ್ಟೇ ನಡೆಯುತ್ತಿದ್ದು, ಇದರಿಂದ ಒಂದು ಭಾಗದ ಸರ್ವಿಸ್ ರಸ್ತೆಯನ್ನು ಮುಚ್ಚಲಾಗಿದೆ. ಇದರಿಂದ ಉಪ್ಪಿನಂಗಡಿ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಸಾಗುವ ವಾಹನಗಳು ಏಕಮುಖ ಸಂಚಾರದ ಹೆದ್ದಾರಿಯನ್ನು ದಾಟಿ ನೆಲ್ಯಾಡಿ ಕಡೆಯಿಂದ ಬರುವ ವಾಹನಗಳ ಏಕಮುಖ ಹೆದ್ದಾರಿಯನ್ನು ದಾಟಿ ಅದೇ ಹೆದ್ದಾರಿಯಲ್ಲಿ ಸ್ವಲ್ಪ ದೂರದ ತನಕ ವಿರುದ್ಧ ದಿಕ್ಕಿನಲ್ಲಿ ಸಾಗಿ ಮತ್ತೊಂದು ಬದಿಯ ಸರ್ವಿಸ್ ರಸ್ತೆಯನ್ನು ಪ್ರವೇಶಿಸಬೇಕಾಗಿದೆ. ಈ ಸರ್ವಿಸ್ ರಸ್ತೆ ಕೂಡಾ ಅಗಲ ಕಿರಿದಾಗಿದ್ದು, ಆ ಕಡೆ, ಈ ಕಡೆಯಿಂದ ಎರಡು ಘನ ವಾಹನಗಳು ರಸ್ತೆಯಲ್ಲಿ ಬಂದರೆ ಇಕ್ಕಟ್ಟಾದ ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಸಂಕಷ್ಟಪಡಬೇಕಾದ ಸ್ಥಿತಿಯಿದೆ. ಇನ್ನು 34 ನೆಕ್ಕಿಲಾಡಿ ಮತ್ತು ಕೂಟೇಲು ಬಳಿ ಅವೈಜ್ಞಾನಿಕವಾಗಿ ವಾಹನಗಳಿಗೆ ಹೆದ್ದಾರಿ ಪ್ರವೇಶಿಸಲು ಅನುವು ಮಾಡಿಕೊಟ್ಟಿರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಧೂಳು, ಕೆಸರು:
ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯಲ್ಲಿ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು, ಅದರ ಎರಡೂ ಬದಿಗೆ ಸರ್ವಿಸ್ ರಸ್ತೆಗಳಿವೆ. ಆದರೆ ಇಲ್ಲಿ ಸರ್ವಿಸ್ ರಸ್ತೆಯ ಕಾಮಗಾರಿ ಇನ್ನೂ ನಡೆದಿಲ್ಲ. ಈ ರಸ್ತೆಯಿಡೀ ಅಗಣಿತ ಗುಂಡಿಗಳಿದ್ದು, ಅದನ್ನು ಮುಚ್ಚುವ ಸಲುವಾಗಿ ಸಿಮೆಂಟ್ ಮಿಶ್ರಿತ ಜಲ್ಲಿ ಹುಡಿಯನ್ನು ಕಾಮಗಾರಿ ಗುತ್ತಿಗೆದಾರ ಸಂಸ್ಥೆಯು ಹಾಕುತ್ತಿದೆ. ಆದರೆ ಬಿಸಿಲಾವರಿಸಿದ ತಕ್ಷಣ ಇದರ ಸಿಮೆಂಟ್ ಮಿಶ್ರಣ ಒಣಗಿ ಹೋಗುತ್ತಿದ್ದು, ವಾಹನಗಳು ಸಂಚರಿಸುವಾಗ ಇಡೀ ಪ್ರದೇಶ ಜಲ್ಲಿಹುಡಿ ಮಿಶ್ರಿತ ಧೂಳಿನಿಂದ ಆವರಿಸುತ್ತದೆ. ಇದರಿಂದಾಗಿ ಇಲ್ಲಿನ ಹಲವರು ಅನಾರೋಗ್ಯದಿಂದ ಬಳಲುವಂತಾಗಿದೆ. ಸಿಮೆಂಟ್ ಮಿಶ್ರಣ ಹೋಗಿ ಉಳಿದ ದೊಡ್ಡ ದೊಡ್ಡ ಜಲ್ಲಿಕಲ್ಲುಗಳು ದ್ವಿಚಕ್ರ ವಾಹನ ಸವಾರರಿಗೆ ಸಂಕಟವನ್ನು ತಂದೊಡ್ಡಿವೆ. ಇನ್ನು ಧೂಳು ಬರದಿರಲೆಂದು ಈ ರಸ್ತೆಗೆ ನೀರು ಹಾಕಿದರೆ ರಸ್ತೆಯಿಡೀ ಕೆಸರುಮಯವಾಗಿ ಪಾದಚಾರಿ ಹಾಗೂ ದ್ವಿಚಕ್ರ ಸವಾರರು ಕೆಸರ ನೀರಿನ ಪ್ರೋಕ್ಷಣೆ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ.
ದಿನಕ್ಕೊಂದು ಪಥ ಬದಲಾವಣೆ:
ಒಮ್ಮೆ ಮುಟ್ಟಿದ ಕಾಮಗಾರಿಯನ್ನು ಮುಗಿಸಿ ಮತ್ತೆ ಬೇರೆ ಕಡೆ ಕಾಮಗಾರಿ ನಡೆಸಲು ಈ ಗುತ್ತಿಗೆದಾರ ಸಂಸ್ಥೆ ಮುಂದಾಗುತ್ತಿಲ್ಲ. ಇದರಿಂದಾಗಿ ಒಂದು 200-300 ಮೀಟರ್ನಷ್ಟು ಹೆದ್ದಾರಿ ಕಾಮಗಾರಿ ನಡೆದರೆ, ಮುಂದಿನ ಕಾಮಗಾರಿ ಬಾಕಿಯಾಗಿರುತ್ತದೆ. ಒಂದೋ ಎರಡು ತಿಂಗಳು ಬಿಟ್ಟು ಮತ್ತೆ ಆ ಕಾಮಗಾರಿಯನ್ನು ನಡೆಸಲಾಗುತ್ತದೆ. ಇದರಿಂದಾಗಿ ಹೆದ್ದಾರಿಯ ಪಥ ದಿನಕ್ಕೊಂದು ಕಡೆಗೆ ಬದಲಾವಣೆಯಾಗಿರುತ್ತದೆ. ಇಂದು ಹೋದ ದಾರಿ ನಾಳೆ ಮುಚ್ಚಿ ಬೇರೆ ದಾರಿಯ ಮೂಲಕ ಬರಬೇಕಾಗುತ್ತದೆ. ಇದು ಕೂಡಾ ವಾಹನ ಸವಾರರಿಗೆ ಗೊಂದಲವನ್ನುಂಟು ಮಾಡುತ್ತದೆ.
ಕಳಪೆ ಕಾಮಗಾರಿ:
34 ನೆಕ್ಕಿಲಾಡಿ ಗ್ರಾಮದ ಒಂಟಿತಾಳಿ ಎಂಬಲ್ಲಿ ತಡೆಗೋಡೆ ಕಾಮಗಾರಿಯು ಕಳಪೆಯಾಗಿರುವ ದೂರು ವ್ಯಕ್ತವಾಗಿದೆ. ಈಗಾಗಲೇ ಇಲ್ಲಿನ ತಡೆಗೋಡೆಯು ತಳಭಾಗದಿಂದ ಸ್ವಲ್ಪ ಮೇಲಕ್ಕೆ ಸಂಪೂರ್ಣ ರಸ್ತೆಯತ್ತ ಜಾರಿ ನಿಂತಿದೆ. ಇನ್ನು 34 ನೆಕ್ಕಿಲಾಡಿಯಲ್ಲಿ ಎತ್ತರಿಸಿದ ರಸ್ತೆಗೆ ಅಳವಡಿಸಿರುವ ಸಿಮೆಂಟ್ ಇಟ್ಟಿಗೆಗಳಲ್ಲಿ ಬಿರುಕು ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕರ ದೂರಿನ ಬಳಿಕ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ, ಬಿರುಕು ಇದ್ದ 17 ಇಟ್ಟಿಗೆಗಳಿಗೆ ಸಿಮೆಂಟ್ನಲ್ಲಿ ತೇಪೆ ಹಾಕಿ ತೆರಳಿದ್ದಾರೆ.
ಸರ್ವಿಸ್ ರಸ್ತೆಯ ಕಾಮಗಾರಿಗೆ ಆಗ್ರಹ:
ಮೊದಲಾಗಿ ಈ ಭಾಗದಲ್ಲಿ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ನಡೆಸಬೇಕು. ಅದನ್ನು ಪೂರ್ತಿಗೊಳಿಸಿದ ಬಳಿಕ ಉಳಿದ ಕಾಮಗಾರಿ ನಡೆಸಬೇಕು ಎಂಬ ಆಗ್ರಹ ಈ ಭಾಗದ ಜನತೆಯದ್ದಾಗಿದೆ.ಒಟ್ಟಿನಲ್ಲಿ ಅಪೂರ್ಣ ಹಂತದಲ್ಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನ ಸವಾರರು, ಈ ಭಾಗದ ಜನತೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಪ್ರತಿಭಟನೆಯೊಂದೇ ದಾರಿ
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಧೂಳು, ಕೆಸರು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಇಲ್ಲಿನ ಜನರು ಅನುಭವಿಸುವಂತಾಗಿದೆ. ಸರ್ವಿಸ್ ರಸ್ತೆಯ ಕಾಮಗಾರಿಯನ್ನು ನಡೆಸಿ ಇವರು ಮುಂದಿನ ಕಾಮಗಾರಿ ನಡೆಸಬೇಕಾಗಿತ್ತು. ಆದರೆ ಎಲ್ಲಾ ಕಡೆ ಇಲ್ಲಿ ಅರ್ಧಂಬರ್ಧ ಕಾಮಗಾರಿಗಳಾಗಿವೆ. ನಮ್ಮ ತಾಳ್ಮೆಗೂ ಮಿತಿ ಇದೆ. ಇದೇ ರೀತಿ ಜನರನ್ನು ಸಮಸ್ಯೆಗೆ ಸಿಲುಕಿಸಿದರೆ ರಸ್ತೆಯಲ್ಲಿ ಧರಣಿ ನಡೆಸಿ ಪ್ರತಿಭಟಿಸುವುದು ನಮಗೆ ಅನಿವಾರ್ಯ
| ರೂಪೇಶ್ ರೈ ಅಲಿಮಾರ್
ದ.ಕ. ಜಿಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ (ಸಾಮೂಹಿಕ ನಾಯಕತ್ವ)
ಒಂಟಿತಾಳಿಯಲ್ಲಿ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ. ನೆಕ್ಕಿಲಾಡಿಯಲ್ಲಿ ಎತ್ತರಿಸಿದ ರಸ್ತೆಯ ಸಿಮೆಂಟ್ ಇಟ್ಟಿಗೆಗಳಲ್ಲಿ ಬಿರುಕು ಕಂಡು ಬಂದಿದೆ. ಇದಕ್ಕೆ ಯಾರು ಹೊಣೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ನಡೆದ ಕಳಪೆ ಕಾಮಗಾರಿ ಮತ್ತು ಅವ್ಯವಸ್ಥೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ಈಗಾಗಲೇ ಲಿಖಿತ ದೂರು ನೀಡಲಾಗಿದೆ. ಆದರೆ ಸ್ಪಂದನೆ ಮಾತ್ರ ದೊರೆತಿಲ್ಲ.
ಶಬೀರ್ ಅಹಮ್ಮದ್, ಸಾಮಾಜಿಕ ಕಾರ್ಯಕರ್ತರು
ಅವೈಜ್ಞಾನಿಕ ವಾಹನ ಸಂಚಾರಕ್ಕೆ ಅವಕಾಶ ಬೇಡ
34 ನೆಕ್ಕಿಲಾಡಿ ಜಂಕ್ಷನ್ನಲ್ಲಿ ಅವೈಜ್ಞಾನಿಕವಾಗಿ ನಾಲ್ಕು ಕಡೆಗಳಿಂದ ಹೆದ್ದಾರಿಗೆ ವಾಹನಗಳು ನುಗ್ಗಿ ಬರುವುದರಿಂದ ಅಪಘಾತವಾಗುವ ಸಂಭವವಿದೆ. ಆದ್ದರಿಂದ ಡಿವೈಡರ್ ಕಾಮಗಾರಿ ಆಗುವ ತನಕ ಕಾಯುವುದಕ್ಕಿಂತ ಬ್ಯಾರಿಕೇಡ್ ಅಡ್ಡವಿಟ್ಟಾದರೂ ಎಲ್ಲೆಲ್ಲಿಂದ ಸಾಗಿ ಬರುವ ವಾಹನಗಳನ್ನು ನಿರ್ಬಂಧಿಸಲಿ. ವಾಹನಗಳಿಗೆ ಹೆದ್ದಾರಿಯುದ್ದಕ್ಕೂ ವಿಶಾಲವಾದ ಜಾಗ ಬಿಡುವುದಕ್ಕಿಂತ ಒಂದು ಕಡೆ ಮಾತ್ರ ಕ್ರಮಬದ್ಧವಾಗಿ ಜಾಗ ನೀಡಲಿ. ಸರ್ವಿಸ್ ರಸ್ತೆಯ ಸೇರಿದಂತೆ ಪೇಟೆಯ ಬಳಿಯ ಕಾಮಗಾರಿಗಳನ್ನು ಮುಗಿಸುವಲ್ಲಿ ಮೊದಲ ಆದ್ಯತೆ ನೀಡಬೇಕು.
| ಅನಿ ಮಿನೇಜಸ್, ಅಧ್ಯಕ್ಷರು, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್
ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ಸರ್ವಿಸ್ ರಸ್ತೆಗಳಲ್ಲಿ ಅಲ್ಲಲ್ಲಿ ಮಣ್ಣಿನ ರಾಶಿ, ಜಲ್ಲಿಗಳ ರಾಶಿ, ಗಟ್ಟಿಯಾದ ಸಿಮೆಂಟ್ ಕಾಂಕ್ರೀಟ್ನ ರಾಶಿ, ಸಿಮೆಂಟ್ನ ಬ್ಯಾರಿಕೇಡ್ಗಳು ಹೀಗೆ ಹಲವು ಅನುತ್ಪಾದಕ ವಸ್ತುಗಳು ಅಸ್ತವ್ಯಸ್ತವಾಗಿ ಬಿದ್ದಿದೆ. ಅದನ್ನು ತೆಗೆಯಬೇಕು. ನೆಕ್ಕಿಲಾಡಿಯಿಂದ ಬರುವ ಪಾದಚಾರಿಗಳು ಈಗ ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆದುಕೊಂಡು ಬರಬೇಕಾದ ಸ್ಥಿತಿ ಇದೆ. ಆದ್ದರಿಂದ ಪಾದಚಾರಿಗಳಿಗೆ ಹಾಗೂ ಸೈಕಲ್ ಸವಾರರಿಗೆ ಅನುಕೂಲವಾಗುವ ಹಾಗೆ ಕುಮಾರಧಾರ ನದಿಯ ಹಳೆ ಸೇತುವೆಯನ್ನು ದುರಸ್ತಿಪಡಿಸಿ, ಅಪಾಯ ಸಂಭವಿಸದಂತೆ ಸೇತುವೆಯ ಬದಿಗಳಿಗೆ ಕಬ್ಬಿಣದ ನೆಟ್ ಅಳವಡಿಸಿ ಸೇತುವೆಯ ಉಪಯೋಗಪಡೆದುಕೊಳ್ಳಲು ಸರಕಾರ ಚಿಂತಿಸಬೇಕು. ಉಪ್ಪಿನಂಗಡಿ ಅಂಡರ್ಪಾಸ್ ಬಳಿ ದಾರಿ ದೀಪವನ್ನು ಹಾಕಬೇಕು. ಹೆದ್ದಾರಿಯನ್ನು ಹತ್ತಿ ಇಳಿಯಲು ಇಂದ್ರಪ್ರಸ್ಥ ಶಾಲೆ ಬಳಿ ಹಾಗೂ ನಟ್ಟಿಬೈಲ್ ಬಳಿ ಮೆಟ್ಟಿಲುಗಳನ್ನು ಮಾಡಬೇಕು. ಧೂಳಿನ ಸಮಸ್ಯೆಗೆ ನಿರಂತರ ನೀರು ಹಾಕುತ್ತಿರಬೇಕು.
ಕೈಲಾರ್ ರಾಜಗೋಪಾಲ ಭಟ್, ಸಾಮಾಜಿಕ ಕಾರ್ಯತರ್ಕರು