ಪುತ್ತೂರು:ಕಳೆದ ಎರಡೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದೇನೆ.ಕೇವಲ ಅನುದಾನ ಬಂದರೆ ಸಾಕಾಗುವುದಿಲ್ಲ ಮುಂದೆ ಎಲ್ಲಾ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಆಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬನ್ನೂರು ಜೈನರಗುರಿ ಮಾರ್ನಡ್ಕದಲ್ಲಿ ರೂ.7 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮ್ಯಾಟ್ರಿಕ್ ವಿದ್ಯಾರ್ಥಿನಿಯರ ವಸತಿ ಗೃಹಕ್ಕೆ ಅವರು ಅ.14ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ವಸತಿಗೃಹ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ.ಅದರಲ್ಲಿ 15 ಸಾವಿರ ಚದರ ಅಡಿಯಲ್ಲಿ 4 ಮಹಡಿಯ ಕಟ್ಟಡ, 1.ಕಿ.ಮೀ ಕಾಂಕ್ರೀಟ್ ರಸ್ತೆ, ಆವರಣಗೋಡೆ, ಸೋಲಾರ್ ಸಿಸ್ಟಮ್ ಮಾಡಲಾಗುತ್ತದೆ.ಪುತ್ತೂರಿನಲ್ಲಿ ಸುಮಾರು 9 ಹಾಸ್ಟೇಲ್ಗಳಿವೆ.ಹಿರೇಬಂಡಾಡಿಯಲ್ಲಿ ಸುಮಾರು 22 ಕೋಟಿ ರೂಪಾಯಿಯ ಹಾಸ್ಟೇಲ್ಗೆ ಟೆಂಡರ್ ಆಗಿದೆ.ಎರಡೂವರೆ ವರ್ಷದಲ್ಲಿ ಪುತ್ತೂರಿಗೆ ಅನುದಾನ ತರುವಲ್ಲಿ ಸತತ ಪ್ರಯತ್ನ ಮಾಡಿದ್ದೇವೆ.ನಾವು ನಮ್ಮ ಕೆಲಸವನ್ನು ರಿವ್ಯಾಲ್ಯೂವೇಷನ್ ಮಾಡುತ್ತಿದ್ದೇವೆ.ಇಷ್ಟರ ತನಕ ನಿರಂತರ ಸರಕಾರದಿಂದ ಅನುದಾನ ತರುವ ಕೆಲಸ ಮಾಡಿದ್ದೇವೆ. ಮುಂದೆ ಅದನ್ನು ಇಂಪ್ಲಿಮೆಂಟೇಷನ್ ಮಾಡುವಲ್ಲಿ ಗಮನ ಕೊಡುತ್ತೇವೆ ಎಂದು ಹೇಳಿದ ಶಾಸಕರು,ಬರೇ ಅನುದಾನ ಬಂದಿದೆ ಎಂದು ಹೇಳಿದರೆ ಸಾಲದು ಇನ್ನು ಶಿಲಾನ್ಯಾಸವೂ ಆಗಬೇಕು ಉದ್ಘಾಟನೆಯೂ ಆಗಬೇಕು.ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸ ಮಾಡಬೇಕು ಎಂದರು.ಈಗಾಗಲೇ ಕುಡಿಯುವ ನೀರಿನ ಯೋಜನೆಯ 1,006 ಕೋಟಿ ರೂ.ಅನುದಾನದ ಕೆಲಸ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿಗಳು ಕೋರ್ಟ್ ಕಟ್ಟಡದ ಉದ್ಘಾಟನೆಗೆ ಬರುವಾಗ ಮೆಡಿಕಲ್ ಕಾಲೇಜು ಆಸ್ಪತ್ರೆಗೂ ಶಿಲಾನ್ಯಾಸ ಮಾಡಲಿದ್ದಾರೆ.ಅ.20ಕ್ಕೆ ಮುಖ್ಯಮಂತ್ರಿಗಳು ಪುತ್ತೂರಿಗೆ ಬಂದಾಗ ಮೆಡಿಕಲ್ ಕಾಲೇಜಿಗೆ 1 ಸಾವಿರ ಕೋಟಿ ಅನುದಾನಕ್ಕೆ ಮನವಿ ಮಾಡಲಿದ್ದೇವೆ.ಈಗಾಗಲೇ 400 ಕೋಟಿಯ ಬೇಡಿಕೆ ಇಟ್ಟಿದ್ದೇವೆ.ಪುತ್ತೂರಿನ ಅಭಿವೃದ್ದಿಗಾಗಿ ಮಹಾಲಿಂಗೇಶ್ವರ ದೇವಸ್ಥಾನ,ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ, ಕ್ರೀಡಾಂಗಣಕ್ಕೆ 9.5 ಕೋಟಿ ಅನುದಾನ, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿಗೆ ರಾತ್ರಿ ಮಕ್ಕಳಿಗೆ ಆಡಲು ರೂ. 1 ಕೋಟಿ ವೆಚ್ಚದಲ್ಲಿ ಪೆಡ್ಲೈಟ್ ವ್ಯವಸ್ಥೆ, ರೂ.1 ಕೋಟಿಯಲ್ಲಿ ಜಿಮ್ ವ್ಯವಸ್ಥೆ, ಪುತ್ತೂರಿನಲ್ಲಿ ತಲಾ ರೂ.1 ಕೋಟಿ ರೂಪಾಯಿಯಲ್ಲಿ 2 ವೃತ್ತಗಳ ಅಭಿವೃದ್ಧಿ, ಕಬಕದಿಂದ ವಿಟ್ಲಕ್ಕೆ ಚತುಷ್ಪಥ ರಸ್ತೆ ಹೀಗೆ ಅಭಿವೃದ್ಧಿ ಕಾರ್ಯ ನಿರಂತರ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಮಾಡಿದ ಕೆಲಸಕ್ಕೆ ವ್ಯಾಲ್ಯೂವೇಷನ್ ಮಾಡಿ ಅಂಕ ಕೊಡಿ:
ಪುತ್ತೂರಿನ ಜನರು ನಿಮ್ಮನ್ನು ಸ್ವೀಕಾರ ಮಾಡಿದ್ದಾರ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದರು.ಪುತ್ತೂರಿನ ಜನ ಅಭಿವೃದ್ಧಿ ಕೆಲಸವನ್ನು ನೋಡಿ ಸ್ವೀಕಾರ ಮಾಡಿದ್ದಾರೋ ಇಲ್ಲವೋ ಎಂದು ಗೊತ್ತಿಲ್ಲ.ಆದರೆ ನಾನು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದ್ದೇನೆ ಅದಕ್ಕೆ ಮಾರ್ಕ್ ಹಾಕುವುದು ಪುತ್ತೂರಿನ ಜನ ಎಂದು ಹೇಳಿದ ಅಶೋಕ್ ಕುಮಾರ್ ರೈ,25 ವರ್ಷಗಳ ದಾಖಲೆ ನೋಡಲಿ.ಹಿಂದಿನ ಶಾಸಕರು ಮಾಡಿದ್ದ ಎಲ್ಲಾ ಕೆಲಸಗಳನ್ನು ನೋಡಲಿ.ನಾನು ಐದು ವರ್ಷದಲ್ಲಿ ಮಾಡಿದ ಕೆಲಸವನ್ನು ನೋಡಿ ಇದರಲ್ಲಿ ವ್ಯಾಲ್ಯೂವೆಷನ್ ಮಾಡಿ ಮಾರ್ಕ್ ಕೊಡಿ.ಮತ್ತೆ ಆಶೀರ್ವಾದ ಮಾಡಿ.ಯಾರಿಗೂ ಅನ್ಯಾಯ ಮಾಡದೆ ಕೆಲಸವನ್ನು ಮಾಡಿದ್ದೇನೆ.ಈ ಬಾರಿ ಕೇವಲ ರಸ್ತೆಗಾಗಿ 125 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ.ಪುತ್ತೂರಿನ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡಲು ಜನರು ಆಶೀರ್ವಾದ ಮಾಡಿದ್ದಾರೆ.ಅದನ್ನು ಖಂಡಿತವಾಗಿ ಮಾಡಿಕೊಂಡು ಬರುತ್ತಿದ್ದೇನೆ.ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಹಾಕಿದ ವ್ಯಕ್ತಿಯೊಬ್ಬರು ಗೊತ್ತಿಲ್ಲದೆ ತಪ್ಪು ಮಾಡಿದ್ದೇನೆ ಕ್ಷಮಿಸಿ ಎಂದು ನನ್ನ ಮನೆಗೆ ಬಂದರು.ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ.ಪುತ್ತೂರಿಗೆ ಏನು ಅನ್ಯಾಯ ಮಾಡಿದ್ದೇನೆ.ಒಂದು ವೇಳೆ ಅನ್ಯಾಯ ಮಾಡಿದರೆ ಕಮೆಂಟ್ ಹಾಕಿ ಎಂದಿದ್ದೆ.ಅದಕ್ಕೆ ಅವರು ಬಹಳ ಬೇಸರ ಪಟ್ಟು ಪಶ್ಚಾತ್ತಾಪ ಪಟ್ಟರು. ನಾನು ನನಗಾಗಿ ಮೆಡಿಕಲ್ ಕಾಲೇಜು, ಹಾಸ್ಟೇಲ್ ಇತರ ಕೆಲಸ ಮಾಡುತ್ತಿಲ್ಲ.ಎಲ್ಲವೂ ಪುತ್ತೂರಿನವರಿಗಾಗಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವಿಶೇಷ ಯೋಚನೆ, ಬಹಳಷ್ಟು ಯೋಜನೆ ಶಾಸಕರದ್ದು:
ಮಾಜಿ ಜಿ.ಪಂ.ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಅವರು ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಅವರು ಬಹಳ ವಿಶೇಷ ಯೋಚನೆಯಿಂದ ಬಹಳಷ್ಟು ಯೋಜನೆಗಳನ್ನು ಹಾಕಿದ್ದಾರೆ. ಪ್ರಥಮ ಬಾರಿ ಶಾಸಕರಾದವರಿಗೆ ಇನ್ನೂ ವಿಧಾನಸೌಧ ಪರಿಚಯಕ್ಕೆ ಸಮಯ ಹೋಗಿರಬಹುದು.ಆದರೆ ನಮ್ಮ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಪುತ್ತೂರಿನ ಸಮಾಜದ ಋಣವನ್ನು ತೀರಿಸುವ ನಿಟ್ಟಿನಲ್ಲಿ ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ.ಇವೆಲ್ಲ ಯೋಚನೆ ಅವರ ವಿಶೇಷ ಬುದ್ದಿವಂತಿಕೆಯಿಂದ ಮಾತ್ರ ಬರಲಿದೆ.ಅವರು ಕೋಟ್ಯಾಂತರ ಅನುದಾನ ತಂದ ಇಚ್ಚಾಶಕ್ತಿಯ ಶಾಸಕರು.ಗ್ಯಾರೆಂಟಿಯಿಂದಾಗಿ ಹಣ ಇಲ್ಲ ಎಂದು ಹೇಳುವವರಿದ್ದಾರೆ.ಆದರೆ ಇಚ್ಚಾಶಕ್ತಿ ಇದ್ದರೆ ಕೋಟಿ ಕೋಟಿ ಅನುದಾನ ತರಲು ಸಾಧ್ಯ ಎಂದು ಅಶೋಕ್ ಕುಮಾರ್ ರೈ ತೋರಿಸಿಕೊಟ್ಟಿದ್ದಾರೆ ಎಂದರಲ್ಲದೆ,ಅ.20ರಂದು ನಡೆಯುವ ಅಶೋಕ ಜನಮನದಲ್ಲಿ ಶಾಸಕರ ಶಕ್ತಿ ಪ್ರದರ್ಶನ ಆಗಬೇಕು ಎಂದರು.
ನಮ್ಮೊಳಗೆ ಬೂಟಾಟಿಕೆ ನಾಟಕ ಮಾಡುವವರಿದ್ದಾರೆ:
ಅಶೋಕ್ ಕುಮಾರ್ ರೈ ಅವರನ್ನು ಹೊಗಳುವುದನ್ನು ಪ್ರಶ್ನೆ ಮಾಡುವವರಿದ್ದಾರೆ.ನಮ್ಮ ಶಾಸಕರು ಮಾಡಿದ ಕೆಲಸವನ್ನು ಹೇಳದಿದ್ದರೆ ಮತ್ಯಾರು ಹೇಳಬೇಕು ಎಂದು ನಾನು ಅವರನ್ನು ಕೇಳುತ್ತೇನೆ.ಪ್ರಶ್ನೆ ಮಾಡುವವರು ಬೂಟಾಟಿಕೆಯ ನಾಟಕ ಮಾಡುವವರು.ಅವರು ವಿಟ್ಲದ ಕಾರ್ಯಕ್ರಮವೊಂದರಲ್ಲಿ ಶಾಸಕ ಅಶೋಕ್ ಕುಮಾರ್ ರೈ ಬಂದಾಗ ಮೊದಲು ಕಾರಿನ ಬಳಿ ಹೋಗಿ ಕೈ ಹಿಡಿದು ಕರೆದುಕೊಂಡು ಬರುತ್ತಾರೆ.ಈ ಬೂಟಾಟಿಕೆಯ ನಾಟಕವನ್ನು ವೇದಿಕೆಯಲ್ಲಿದ್ದ ನಾನು ಗಮನಿಸಿದ್ದೇನೆ ಎಂದು ಎಮ್.ಎಸ್ ಮಹಮ್ಮದ್ ಹೇಳಿದರು.
ಪುತ್ತೂರಿನಲ್ಲಿ ಅಭಿವೃದ್ಧಿಯ ಪರ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ ಪುತ್ತೂರಿನಲ್ಲಿ ಅಭಿವೃದ್ಧಿಯ ಪರ್ವ ಆಗುತ್ತಿದೆ.ಶಾಸಕರ ಪಾದರಸದ ಚಲನೆಯಿಂದ ಎಲ್ಲರೂ ನಿಬ್ಬೆರಗಾಗಿದ್ದಾರೆ. ಅಽಕಾರಿಗಳು ಕೂಡ ಎಲರ್ಟ್ ಆಗಿದ್ದಾರೆ. ಪಕ್ಷದ ಕಾರ್ಯಕಾರಿಣಿಯಲ್ಲೂ ಪಕ್ಷಕ್ಕಾಗಿ ಅವರ ತುಡಿತವನ್ನು ಎಲ್ಲಾ ಕಾರ್ಯಕರ್ತರು ಮೆಚ್ಚಿಕೊಂಡಿದ್ದಾರೆ.ಮುಂದೆ ಬರುವ ಕಾಂಗ್ರೆಸ್ ಭವನ ಅಶೋಕ್ ಕುಮಾರ್ ರೈ ನೇತೃತ್ವದಲ್ಲೇ ಉದ್ಘಾಟನೆ ಆಗಲಿದೆ ಎಂದರು.ಅ.20ರಂದು ಕರ್ನಾಟಕದ ಕಣ್ಮಣಿ ಸಿದ್ದರಾಮಯ್ಯ ಅವರು ಬರುವ ಸಂದರ್ಭ ಪುತ್ತೂರಿನ ಕಣ್ಮಣಿ ಅಶೋಕ್ ಕುಮಾರ್ ರೈ ಅವರಿಗೆ ನಾವೆಲ್ಲ ಶಕ್ತಿ ತುಂಬುವ ಕೆಲಸ ಆಗಬೇಕೆಂದರು.
ಶಾಸಕರ ಬದ್ಧತೆ ಕೆಲಸದ ಮೇಲಿನ ಪ್ರೀತಿ:
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ ಅಶೋಕ್ ಕುಮಾರ್ ರೈ ಅವರಿಗೆ ಕೋಟಿ ಅನುದಾನ ತರುವುದು ಲೆಕ್ಕನೇ ಅಲ್ಲ.ಅವರ ಬದ್ಧತೆ ಎಷ್ಟೆಂದು ನೋಡಿದರೆ ಅವರ ಕೆಲಸದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.ಅಶೋಕ ಜನಮನ ಕಾರ್ಯಕ್ರಮದಲ್ಲಿ ಎಲ್ಲರೂ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಶಾಸಕರಿಗೆ ಅಭಿನಂದನೆ:
ರೂ.7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯಾರ್ಥಿನಿಯರ ನಿಲಯಕ್ಕೆ ಅನುದಾನ ತರಿಸಿದ್ದಕ್ಕಾಗಿ ಶಾಸಕರಿಗೆ ಬನ್ನೂರು ಕಾಂಗ್ರೆಸ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಸಮಾಜ ಕಲ್ಯಾಣ ಅಧಿಕಾರಿ ಸುನಿತಾ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಽಕಾರಿ ರಾಜೇಶ್ ರೈ, ಯೂತ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಎನ್ಎಸ್ಯುಐ ರಾಜ್ಯ ಸಮಿತಿಯ ಫಾರೂಕ್ ಬಾಯಬ್ಬೆ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರಬ್ಬರ್ ಬೆಳೆಗಾರರ ಯೂನಿಯನ್ ಅಧ್ಯಕ್ಷ ಪ್ರಸಾದ್ಕೌಶಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ವಲಯ ಅಧ್ಯಕ್ಷ ರೋಶನ್ ರೈ ಬನ್ನೂರು, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದರ್ಣಪ್ಪ ಮೂಲ್ಯ, ಸದಸ್ಯ ಚಂದ್ರಾಕ್ಷ ಬಿ.ಎನ್, ರೈ ಎಸ್ಟೇಟ್ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪಕ್ಷದ ಮುಖಂಡರಾದ ರೋಶನ್ ರೈ, ಶಿವರಾಮ ಆಳ್ವ, ಎಂ ಬಿ ಇಸ್ಮಾಯಿಲ್,ಶಬೀರ್ ಕೆಂಪಿ, ಯು ಟಿ ಇರ್ಷಾದ್,ದಾವೂದ್ ಬನ್ನೂರು, ಸಾಹಿರಾ, ಗಿರೀಶ್ ರೈ, ಲೋಕೇಶ್ ಅಲ್ಮುಡ, ಬಶೀರ್ ಪರ್ಲಡ್ಕ, ನಝೀರ್ ಮಠ, ನಾಸಿರ್ ಕೋಲ್ಪೆ ಗುತ್ತಿಗೆದಾರ ಅವಿನಾಶ್, ಸಲಾಂ ಸಂಪ್ಯ. ಹಾರಿಸ್ ಸಂಟ್ಯಾರ್, ಹಕೀಂ ಬೊಳುವಾರು, ಅಬೂಬಕ್ಕರ್ ಮುಲಾರ್, ಸುದರ್ಶನ್ ಪಡಿಯಾರ್, ವಿಕ್ರಂ ರೈ , ಶಶಿಧರ್ ಬನ್ನೂರು, ಪೂರ್ಣೇಶ್ ಭಂಡಾರಿ, ಗಣೇಶ್ ಶೆಟ್ಟಿ ,ನವೀನ್ ರೈ ಬನ್ನೂರು, ಫಾರೂಕ್ ಪೆರ್ನೆ, ಅಖಿಲ್ ಕಲ್ಲಾರೆ, ಸನತ್ ರೈ, ಪ್ರಜ್ವಲ್ ರೈ ತೊಟ್ಲ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಶಿಲಾನ್ಯಾಸ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
ಕೆಲಸದ ಪ್ರೀತಿ ತೋರಿಸಿದ ಶಾಸಕರು
ಸಾಮಾನ್ಯವಾಗಿ ಜನಪ್ರತಿನಿಧಿಗಳು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತೋರಿಕೆಗೆ ಫಲಕ ಅನಾವರಣ ಅಥವಾ ಅಡಿಗಲ್ಲಿಗೆ ಮೇಲಿನಿಂದಲೇ ಹಾಲು ಎರೆದು ಹೋಗುತ್ತಾರೆ.ಆದರೆ ಶಾಸಕ ಅಶೋಕ್ ಕುಮಾರ್ ರೈ ಅವರು ಅಡಿಗಲ್ಲು ಇಡಲು ಇಟ್ಟ ಗುಂಡಿಯೊಳಗೆ ಇಳಿದು ಹಾಲು, ಜೇನು ತುಪ್ಪ ಎರೆದು, ಕಲ್ಲುಗಳನ್ನು ತಾನೇ ಇಟ್ಟು, ಅದಕ್ಕೆ ಸಿಮೆಂಟ್ ಸಾರಣೆ ಮಾಡಿದ ಬಳಿಕ ಅವರು ತೆಂಗಿನ ಕಾಯಿ ಒಡೆದು ವಿಧಿವತ್ತಾಗಿ ಶಿಲಾನ್ಯಾಸ ನೆರವೇರಿಸಿದರು.ಅರ್ಚಕ ಶಿವಪ್ರಸಾದ್ ಭಟ್ ಅವರು ಆರತಿ ಬೆಳಗಿದರು
ಪುತ್ತೂರಿನಲ್ಲಿ ಸರಿಯಾದ ಆಸ್ಪತ್ರೆಯಿಲ್ಲದೆ ಮಗುವಿನ ಮೃತ್ಯು
ಹೆಜ್ಜೇನು ದಾಳಿಯಿಂದ ಮಗು ಮೃತಪಟ್ಟಿರುವುದು ಪುತ್ತೂರಿನಲ್ಲಿ ಸರಿಯಾದ ಆಸ್ಪತ್ರೆಯಿಲ್ಲದ ಕಾರಣ.ಮಗು ಆಸ್ಪತ್ರೆಯಲ್ಲಿ ದಮ್ ಕಟ್ಟುತ್ತದೆ ಎಂದು ಬೆಳಗ್ಗಿನ ತನಕ ಕೂಗಿದೆ.ಮೊದಲೇ ಮಂಗಳೂರಿಗೆ ಕಳುಹಿಸುತ್ತಿದ್ದರೆ ಮಗುವಿನ ಜೀವ ಉಳಿಯುತ್ತಿತ್ತು.ಆ ತಾಯಿಗೆ ಒಂದೇ ಒಂದು ಮಗು ಏಳು ವರ್ಷದ ಬಳಿಕ ಹರಕೆಯಿಂದ ಹುಟ್ಟಿರುವ ಮಗು ಅದು.ಈಗ ಜೀವ ಹೋಗಿದೆ. ನಮ್ಮತ್ರ ಒಳ್ಳೆಯ ಆಸ್ಪತ್ರೆ ಇರುತ್ತಿದ್ದರೆ ಆ ಮಗು ಬದುಕುತ್ತಿತ್ತು.ಇದನ್ನು ಪ್ರಶ್ನೆ ಮಾಡುವವರಿಲ್ಲ.ಹಾಗಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಅಗತ್ಯವಾಗಿ ಬೇಕು
-ಅಶೋಕ್ ಕುಮಾರ್ ರೈ, ಶಾಸಕರು
ಬನ್ನೂರು ಮಣಿಪಾಲವಾಗಲಿದೆ
ಬನ್ನೂರಿನಲ್ಲಿ ಮೆಡಿಕಲ್ ಕಾಲೇಜು ಆದರೆ 7,500 ಮಂದಿಗೆ ಕೆಲಸ ಆಗುತ್ತದೆ.ಫಿಜಿಯೋಥೆರಪಿ ಕಾಲೇಜು, ನರ್ಸಿಂಗ್ ಕಾಲೇಜು, ಆಯುರ್ವೇದಿಕ್ ಕಾಲೇಜು, ಅದಕ್ಕೆ ಬೇಕಾದ ಹಾಸ್ಟೆಲ್ ಆಗುತ್ತದೆ.ಸುಮಾರು 10 ಸಾವಿರ ಮಂದಿ ಹೊರಗಿನಿಂದ ಬರುತ್ತಾರೆ.ಅವರ ಜೊತೆ ಅವರ ಮನೆಯವರು ಬರುತ್ತಾರೆ.ಈ ವೇಳೆ ಅಲ್ಲಿ ಬಾಡಿಗೆ ವಸತಿ ಕಟ್ಟಡಗಳು ನಿರ್ಮಾಣಕ್ಕೆ ಅವಕಾಶ ಆಗುತ್ತದೆ.ಎಷ್ಟೋ ಹೊಟೇಲ್ ಅಂಗಡಿಯವರಿಗೆ, ಟ್ಯಾಕ್ಸಿಗಳಿಗೆ ಪ್ರಯೋಜನ ಆಗುತ್ತದೆ.ಇಂತಹ ಅಭಿವೃದ್ದಿಯ ಕೆಲಸ ಆದಾಗ ಮುಂದಿನ 15 ವರ್ಷದಲ್ಲಿ ಬನ್ನೂರು ಮಣಿಪಾಲ ಆಗಲಿದೆ.ಸುಮ್ಮನೆ ಕೂತರೆ ಆಗುವುದಿಲ್ಲ. ಸರಿಯಾದ ಶಾಸಕರು ಇಲ್ಲಿ ಇದ್ದರೆ ಮಾತ್ರ ಆಗಲಿದೆ.ಬನ್ನೂರು ಅನ್ನು ಮುಂದಿನ ದಿನ ಮಣಿಪಾಲಕ್ಕೆ ಹೋಲಿಕೆ ಮಾಡಬಹುದು. ಪುತ್ತೂರಿನ ಅಭಿವೃದ್ಧಿ ಒಂದೇ ನನ್ನ ಕನಸು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಯಾವ ಅನುದಾನ ಎಲ್ಲಿ, ಹೇಗೆ ತರಬೇಕೆನ್ನುವ ತಾಕತ್ತಿರುವ ಶಾಸಕರು:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಪುತ್ತೂರು ಹತ್ತಾರು ವಿಚಾರದಲ್ಲಿ ರಾಜ್ಯದಲ್ಲಿ ಹೆಸರುವಾಸಿಯಾಗಿದೆ.ಅದಕ್ಕೆ ಕಾರಣ ನಮ್ಮ ಶಾಸಕರು.ಜಾಗ ಇಲ್ಲದಿದ್ದರೂ, ಪ್ರಸ್ತಾಪ ಮಾಡದಿದ್ದರೂ ಪುತ್ತೂರಿನ ಅಗತ್ಯತೆಯನ್ನು ಅವರು ಸಂಪೂರ್ಣವಾಗಿ ಅರಿತು ಎಲ್ಲೆಲ್ಲಿ ಏನೇನು ಆಗಬೇಕು, ರಾಜ್ಯದಲ್ಲಿ ಪುತ್ತೂರನ್ನು ಹೇಗೆ ಗುರುತಿಸಬೇಕೆಂಬ ಶೈಲಿ, ಯಾವ ಅನುದಾನ ಹೇಗೆ ತರಬೇಕು ಎಂಬ ಧೈರ್ಯ ಮತ್ತು ತಾಕತ್ತು ಇರುವ ಶಾಸಕರೆಂದರೆ ಅದು ನಮ್ಮ ಅಶೋಕ್ ಕುಮಾರ್ ರೈ.ಜನ ಮೆಚ್ಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.ಮುಂಡೂರಿನಲ್ಲಿ ಸರ್ವಸುಸಜ್ಜಿತ ಕ್ರೀಡಾಂಗಣ ಆಗುತ್ತದೆ ಎಂಬುದು ನಾವು ಕನಸು ಮನಸಿನಲ್ಲೂ ಕಂಡಿರಲಿಲ್ಲ.ಆದರೆ ಅವರು ಅದನ್ನು ಮಾಡಿ ತೋರಿಸಿದ್ದಾರೆ.ಆರ್ಟಿಒ ಟ್ರ್ಯಾಕ್, ಕೆಎಮ್ಎಫ್ ಘಟಕ ಜೊತೆಗೆ ಮಹತ್ವದ ಯೋಜನೆಯಾದ ಮೆಡಿಕಲ್ ಕಾಲೇಜು ಇವೆಲ್ಲ ತಂದು ಕೊಡುತ್ತಿರುವ ಶಾಸಕರನ್ನು ನಾವು ಹೊಗಳುವುದಲ್ಲ.ಅವರು ಕೆಲಸ ಮಾಡುತ್ತಾರೆ ಅದನ್ನು ನಾವು ಹೇಳಲೇ ಬೇಕು ಎಂದರು.ಅಶೋಕ ಜನಮನ ಕಾರ್ಯಕ್ರಮಕ್ಕೆ ಎಲ್ಲರನ್ನು ಕರೆ ತರುವಂತೆ ಅವರು ವಿನಂತಿಸಿದರು.
ಎಂಎಸ್ ಮಹಮ್ಮದ್, ಹೇಮನಾಥ ಶೆಟ್ಟಿಯವರಿಗೆ ಸರಕಾರದಿಂದ ಸ್ಥಾನಮಾನ
ಎಂ.ಎಸ್ ಮಹಮ್ಮದ್ ಮತ್ತು ಕಾವು ಹೇಮನಾಥ ಶೆಟ್ಟಿಯವರಿಗೆ ಸರಕಾರದಿಂದ ಒಳ್ಳೆಯ ಸ್ಥಾನಮಾನ ಕೊಡಿಸುವ ಪ್ರಯತ್ನದಲ್ಲಿದ್ದೇನೆ.ಸ್ಥಾನಮಾನಕ್ಕೆ ಅವರು ಮೊದಲೇ ಅರ್ಹರು.ನಾನು ಕಾಲೇಜಿನಲ್ಲಿರುವಾಗಲೇ ಹೇಮನಾಥ ಶೆಟ್ಟಿಯವರು ಕಾಂಗ್ರೆಸ್ ನಾಯಕರು.ಹಾಗಾಗಿ ಮುಂದಿನ ದಿನ ಒಂದು ಕಡೆ ಅಭಿವೃದ್ದಿ ಪರ್ವ ಇನ್ನೊಂದು ಕಡೆ ನಮ್ಮವರಿಗೆ ಅಽಕಾರವನ್ನು ಕೊಡಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ
-ಅಶೋಕ್ ಕುಮಾರ್ ರೈ, ಶಾಸಕರು
ಒಂದು ರೂ.ಕೊಡದೆ ಕಮೆಂಟ್ ಹಾಕುತ್ತಾರೆ…..
ಜನಮನ ಕಾರ್ಯಕ್ರಮ ಶ್ರೀಮಂತಿಕೆ ತೋರಿಸಲೆಂದು, ದರ್ಬಾರ್ಗೆ, ಓಟ್ ಕೇಳಲು ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದರು.ಮನುಷ್ಯನಿಗೆ ಸ್ವಾಭಾವಿಕ ನಂಜಿ ಇರುತ್ತದೆ.ಹಾಗಾಗಿ ಕಮೆಂಟ್ ಹಾಕುತ್ತಾರೆ.ಕಮೆಂಟ್ ಹಾಕುವವರು 5 ಜನರಿಗೆ ಏನಾದರೂ ಸಹಾಯ ಮಾಡಲಿ ಎಂದು ಹೇಳಿದ ಶಾಸಕ ಅಶೋಕ್ ಕುಮಾರ್ ರೈ ಅವರು, ನನ್ನಿಂದ ಜಾಸ್ತಿ ದುಡ್ಡು ಇದ್ದವರು ಪುತ್ತೂರಿನಲ್ಲಿ ಇದ್ದಾರೆ.ರೂ.3.40 ಕೋಟಿ ಬಟ್ಟಲು ತಟ್ಟೆಗೆ ಕೊಡಲಿಕ್ಕಿತ್ತು.ಅದಕ್ಕೆ ನಮ್ಮ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿಯವರಿಂದ 15 ಲಕ್ಷ ರೂಪಾಯಿ ಸಾಲ ಪಡೆದು ಬಿಲ್ ಕಳುಹಿಸಿದ್ದು.ನಾನು ಒಂದು ತಿಂಗಳಿಗೆ 35 ಲಕ್ಷ ರೂಪಾಯಿ ಇಡಬೇಕು.ಎಷ್ಟು ಕಷ್ಟ ಪಡುತ್ತೇನೆಂದು ಮಹಾಲಿಂಗೇಶ್ವರನಿಗೆ, ಮಹಿಷಮರ್ದಿನಿ ಮತ್ತು ನನಗೆ ಗೊತ್ತು.ಆದರೂ ಚಿವುಟುವುದನ್ನು ನೋಡುವಾಗ ಒಮ್ಮೊಮ್ಮೆ ಮುಸುಂಟಿಗೆ ಪಟಾಲ ಕೊಡುವ ಅಂತ ಕಾಣುತ್ತದೆ.ಒಂದು ರೂಪಾಯಿ ಕೊಡದೆ ಕಮೆಂಟ್ ಹಾಕುತ್ತಾರೆ.ಆದರೆ ನಾನು ಅಹಂಕಾರ ತೋರಿಸಲು ಅಲ್ಲ.ಪ್ರೀತಿ ವಿಶ್ವಾಸ, ಧನ್ಯತೆ ತೋರಿಸಲು ಈ ಸೇವೆ ಮಾಡುತ್ತೇನೆ.ಇದರಲ್ಲಿ ನನಗೆ ಪುಣ್ಯ ಸಿಗುತ್ತದೆ.ಇದರಲ್ಲಿ ಪುಣ್ಯ ಸಿಗದಿದ್ದರೆ ನಾನು ಇವತ್ತು ಶಾಸಕನಾಗಿರಲು ಸಾಧ್ಯನೇ ಇರುತ್ತಿರಲಿಲ್ಲ.ನನ್ನನ್ನು ತುಳಿಯುವಂಥದ್ದು ಎಲ್ಲಾ ಆಗಿದೆ.ಆದರೆ ನನಗೆ ಕನಸಿತ್ತು. ಶಾಸಕನಾಗಿ ಬಡವರ ಕೆಲಸ ಮಾಡಬೇಕೆಂದು. ಹಾಗೇ ಇವತ್ತು ಶಾಸಕನಾಗಿದ್ದೇನೆ.ಋಣ ತೀರಿಸುವ ಕೆಲಸ ಮಾಡುತ್ತೇನೆ.ಹಾಗಾಗಿ ಎಲ್ಲರೂ ಜನಮನ ಕಾರ್ಯಕ್ರಮಕ್ಕೆ ಬನ್ನಿ. ಇತರರನ್ನು ಕರೆತನ್ನಿ ಎಂದು ಹೇಳಿದರು.