ಗ್ರಾಮೀಣ, ನಗರ ಪ್ರತ್ಯೇಕ ಸಮಿತಿ ರಚನೆ | ಅಂತಿಮ ಪಟ್ಟಿಯಲ್ಲಿ 8 ಮಂದಿ ಹೆಸರು
ಪುತ್ತೂರು: ಮೆಸ್ಕಾಂ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿರುವ ವಿಧಾನಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಅವರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಯ ಅವಧಿ ಮುಕ್ತಾಯಗೊಂಡಿದ್ದು ಶೀಘ್ರವೇ ಜಿಲ್ಲಾಧ್ಯಕ್ಷತೆ ಬದಲಾವಣೆ ಖಚಿತವಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆಗೆ ಪಕ್ಷದ ಹಿರಿಯ ಮತ್ತು ಯುವ ನಾಯಕರ ನಡುವೆ ಬಿಗ್ ಫೈಟ್ ತೆರೆಮರೆಯಲ್ಲಿ ನಡೆಯುತ್ತಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಮಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಮಿಥುನ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹಾಗೂ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಕೆಪಿಸಿಸಿ ಸಂಯೋಜಕ ಹೇಮನಾಥ್ ಶೆಟ್ಟಿ ಕಾವು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ ಮತ್ತು ಯುವ ಮುಂದಾಳು ಕಿರಣ್ ಬುಡ್ಲೆಗುತ್ತು ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿಗೆ ಕಳುಹಿಸಿ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮೂಲ ಉದ್ದೇಶದೊಂದಿಗೆ ಜಿಲ್ಲಾಧ್ಯಕ್ಷತೆಗೆ ಎಐಸಿಸಿಗೆ ಕಳುಹಿಸಿಕೊಟ್ಟ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯದ ಉದ್ದೇಶದೊಂದಿಗೆ ಬಂಟ, ಬಿಲ್ಲವ, ಮುಸ್ಲಿಂ, ಕ್ರಿಶ್ಚಿಯನ್, ಒಕ್ಕಲಿಗ ಸಮುದಾಯವನ್ನು ಗಣನೆಗೆ ತೆಗೆದುಕೊಂಡು ಹೆಸರು ಅಂತಿಮಗೊಳಿಸಲಾಗಿದೆ. ಈ 8 ಮಂದಿಯ ಪೈಕಿ ಈರ್ವರ ಹೆಸರನ್ನು ನಗರ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷತೆ ಹುದ್ದೆಗೆ ಅಂತಿಮಗೊಳಿಸಲು ಪಕ್ಷ ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ಗೆ ಈಗಾಗಲೇ ನಗರ ಮತ್ತು ಗ್ರಾಮೀಣ ವಿಭಾಗಕ್ಕೆ ಪ್ರತ್ಯೇಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು ಅದೇ ಮಾದರಿಯಲ್ಲಿ ಜಿಲ್ಲಾ ಕಾಂಗ್ರೆಸ್ನಲ್ಲೂ ಇಬ್ಬರು ಅಧ್ಯಕ್ಷರನ್ನು ನೇಮಿಸುವುದು ಖಚಿತವಾಗಿದೆ. ರಾಜ್ಯದ ಬೆಂಗಳೂರು, ಬೆಳಗಾವಿ, ಧಾರವಾಡ, ಮೈಸೂರು, ಬಳ್ಳಾರಿ ಸೇರಿದಂತೆ ಪಾಲಿಕೆ ವ್ಯಾಪ್ತಿಗಳಲ್ಲಿ ಈ ಹಿಂದೆಯೇ ನಗರ ಮತ್ತು ಗ್ರಾಮೀಣ ಭಾಗಕ್ಕೆ ಪ್ರತ್ಯೇಕ ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ. ಅದೇ ಮಾದರಿಯಲ್ಲಿ ದ.ಕ. ಜಿಲ್ಲೆಯಲ್ಲೂ ಇಬ್ಬರು ಅಧ್ಯಕ್ಷರನ್ನು ನೇಮಿಸುವ ಬಗ್ಗೆ ನಿರ್ಧರಿಸಲಾಗಿದೆ. ಸಾಮಾಜಿಕ ನ್ಯಾಯ, ಪಕ್ಷ ನಿಷ್ಠೆ ಮತ್ತು ಹಿರಿತನದ ಆಧಾರದಲ್ಲಿ ಎಐಸಿಸಿಯು ನೂತನ ಜಿಲ್ಲಾ ಅಧ್ಯಕ್ಷರುಗಳನ್ನು ಶೀಘ್ರ ಆಯ್ಕೆ ಮಾಡಲಿದೆ ಎಂದು ಮಾಹಿತಿ ಲಭ್ಯವಾಗಿದೆ.