ಟಿಂಟ್ ಗ್ಲಾಸ್ ವ್ಯಾಮೋಹ, ವಾಹನಗಳಲ್ಲಿ ಹೆಚ್ಚುತ್ತಿರುವ ಟಿಂಟ್ ಗ್ಲಾಸ್ ಬಳಕೆ

0

ನಿಯಮ ಉಲ್ಲಂಘನೆಗೆ ಪೊಲೀಸರು ಹಾಕಬೇಕಿದೆ ದಂಡನೆ..! ಸಾರ್ವಜನಿಕರ ಆಗ್ರಹ


ಪುತ್ತೂರು: ವಾಹನಗಳ ಕಿಟಕಿಗೆ ಟಿಂಟ್ ಗ್ಲಾಸ್ ಅಳವಡಿಕೆಗೆ ನಿಗದಿತ ಮಿತಿ ವಿಧಿಸಿದ್ದರೂ ನಿಯಮ ಮೀರಿ ಕಾರುಗಳಿಗೆ ಕಡು ಬಣ್ಣದ ಗ್ಲಾಸ್ ಅಳವಡಿಸುವ ವ್ಯಾಮೋಹ ಹೆಚ್ಚುತ್ತಿದ್ದು ಅದರಲ್ಲೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಟಿಂಟೆಡ್ ಗ್ಲಾಸ್ ಅಳವಡಿಸಿ ಯಾವುದೇ ಭಯವಿಲ್ಲದೆ ತಿರುಗಾಡುತ್ತಿರುವುದು ಕಂಡು ಬರುತ್ತಿದ್ದರೂ ಸಂಚಾರಿ ಪೊಲೀಸರು ಮಾತ್ರ ಇನ್ನು ಕಾರ್ಯಾಚರಣೆಗೆ ಇಳಿದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗ್ರಾಮಾಂತರ ಸೇರಿದಂತೆ ನಗರ ಪ್ರದೇಶಗಳಲ್ಲಿ ಟಿಂಟೆಡ್ ಗ್ಲಾಸ್ ಅಳವಡಿಕೆಯ ವಾಹನಗಳು ಸಂಚರಿಸುತ್ತಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಬೈಕ್, ಸ್ಕೂಟರ್‌ಗಳಲ್ಲಿ ಸಂಚರಿಸುವವರು ಹೆಲ್ಮೆಟ್ ಹಾಕದಿದ್ದರೆ ಹಿಡಿದು ನಿಲ್ಲಿಸಿ ದಂಡ ವಿಧಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ.


ವಾಹನದ ಮುಂಭಾಗ ಮತ್ತು ಹಿಂಭಾಗದ ಗ್ಲಾಸ್‌ಗೆ ಕನಿಷ್ಠ ಶೇ.70 ರಷ್ಟು ಗೋಚರತೆ ಮತ್ತು ಬದಿಯ ಗ್ಲಾಸ್‌ಗಳಿಗೆ ಕನಿಷ್ಠ ಶೇ.50 ರಷ್ಟು ಗೋಚರತೆ ಇರಬೇಕು ಎಂದು ಕೇಂದ್ರ ಮೋಟಾರು ವಾಹನ ನಿಯಮದಲ್ಲಿ ಉಲ್ಲೇಖವಿದ್ದರೂ ಈ ನಿಯಮ ಉಲ್ಲಂಸಿದ್ದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಟ್ರಾಫಿಕ್ ಪೊಲೀಸರಿಗೆ ಕಾರು ಮಾಲೀಕರಿಗೆ ದಂಡ ವಿಧಿಸುವ ಅಧಿಕಾರ ಇದೆ. ಪೊಲೀಸ್ ಇಲಾಖೆ ಈಗಾಗಲೇ ಮಂಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದು ಟಿಂಟ್ ಗ್ಲಾಸ್ ಅಳವಡಿಸಿದ ಕಾರು ಮಾಲೀಕರ ವಿರುದ್ಧ ದಂಡನೆ ಕ್ರಮ ಕೈಗೊಂಡಿದೆ.


ಕಾರಿಗೆ ಕಡು ಕಪ್ಪು ಬಣ್ಣದ ಟಿಂಟ್ ಅಳವಡಿಸುವುದರಿಂದ ಒಳಗೆ ಯಾರು ಕುಳಿತಿದ್ದಾರೆ ಎಂಬುದು ಕಾಣುತ್ತಿಲ್ಲ. ಅದರಲ್ಲೂ ಹೆಚ್ಚಾಗಿ ಥಾರ್, ಬಿಎಂಡಬ್ಲ್ಯೂ, ಕ್ರೇಟಾ ಇತ್ಯಾದಿ ದುಬಾರಿ ಬೆಲೆಯ ಕಾರುಗಳಲ್ಲೇ ಹೆಚ್ಚಾಗಿ ಟಿಂಟೆಡ್ ಗ್ಲಾಸ್ ಇರುವುದು ಕಂಡು ಬರುತ್ತಿದೆ. ಗ್ರಾಮಾಂತರ ಪ್ರದೇಶದಲ್ಲೂ ಟಿಂಟೆಡ್ ಗ್ಲಾಸ್ ಅಳವಡಿಸಿದ ಕಾರು, ಜೀಪುಗಳು ಓಡಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರೀಕರು ಆರೋಪ ಮಾಡುತ್ತಿದ್ದಾರೆ.

ಹಿಂಬದಿ ಗ್ಲಾಸ್‌ಗೆ ಕಡು ಕಪ್ಪು ಬಣ್ಣದ ಟಿಂಟ್…!?
ಕೆಲವೊಂದು ಕಾರು, ಜೀಪುಗಳನ್ನು ಗಮನಿಸಿದರೆ ಹಿಂಬದಿ ಕಿಟಕಿಗೆ ಕಡು ಕಪ್ಪು ಬಣ್ಣದ ಟಿಂಟ್ ಅಳವಡಿಸಿರುವುದನ್ನು ಕಾಣಬಹುದಾಗಿದೆ. ಸರಕಾರದ ನಿಯಮ ಪ್ರಕಾರ ಶೇ.30 ರಿಂದ 40 ರಷ್ಟು ಮಾತ್ರ ಟಿಂಟ್ ಗ್ಲಾಸ್ ಅಳವಡಿಕೆಗೆ ಅವಕಾಶ ಇರುವುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರಿಂದ ಹೆಚ್ಚು ಪ್ರಮಾಣದಲ್ಲಿ ಟಿಂಟ್ ಗ್ಲಾಸ್ ಅಳವಡಿಸಿರುವುದು ಕಂಡು ಬರುತ್ತಿದೆ. ಅದರಲ್ಲೂ ಹಿಂಬದಿ ಗ್ಲಾಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಟಿಂಟ್ ಗ್ಲಾಸ್ ಅಳವಡಿಸಿರುವುದು ಕಂಡು ಬರುತ್ತಿದೆ.


‘ಕೇಂದ್ರ ಮೋಟಾರು ವಾಹನ ನಿಯಮ ಉಲ್ಲಂಸಿ ಟಿಂಟೆಡ್ ಗ್ಲಾಸ್ ಅಳವಡಿಕೆಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈಗಾಗಲೇ ಕಾರು ಸೇರಿದಂತೆ ಟಿಂಟೆಡ್ ಗ್ಲಾಸ್ ಅಳವಡಿಸಿದ ವಾಹನಗಳ ಮೇಲೆ ಕೇಸು ಹಾಕಿ ದಂಡನೆ ವಸೂಲು ಮಾಡುವ ಕೆಲಸ ಆಗುತ್ತಿದೆ.’
ಚಕ್ರಪಾಣಿ, ಪಿಎಸ್‌ಐ ಸಂಚಾರಿ ಪೊಲೀಸ್ ಠಾಣೆ ಪುತ್ತೂರು ನಗರ

LEAVE A REPLY

Please enter your comment!
Please enter your name here