ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಆದರ್ಶನಗರ- ದರ್ಬೆ ರಸ್ತೆಯ ಕಜೆ ಎಂಬಲ್ಲಿ ಗುಡ್ಡ ಕುಸಿತದ ಮಣ್ಣನ್ನು ರಸ್ತೆ ಬದಿ ಹಾಕಲಾಗಿದ್ದು, ಮಳೆ ಬಂದಾಗ ಈ ಮಣ್ಣೆಲ್ಲಾ ಕರಗಿ ರಸ್ತೆಯಲ್ಲೇ ಹರಿಯುತ್ತಿದ್ದು, ರಸ್ತೆಯು ಸಂಪೂರ್ಣ ಕೆಸರುಮಯವಾಗಿ ಸಂಚಾರಕ್ಕೆ ತೊಡಕಾಗಿದೆ. ಕೆಲವು ದಿನಗಳಿಂದ ಈ ಸಮಸ್ಯೆಯಿದ್ದರೂ ಇದಕ್ಕೆ ಪರಿಹಾರ ಕಂಡುಕೊಳ್ಳದ ಗ್ರಾ.ಪಂ. ಮೇಲೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಳೆಗಾಲದ ಆರಂಭದಲ್ಲಿ ಇಲ್ಲಿ ರಸ್ತೆ ಬದಿಯ ತಡೆಗೋಡೆಯೊಂದು ಧರೆ ಸಹಿತ ಕುಸಿದು ಬಿದ್ದಿತ್ತು. ಮಳೆಗಾಲ ಮುಗಿಯುತ್ತಾ ಬಂದಾಗ ಮಣ್ಣೊಳಗೆ ಸಿಲುಕಿ ಹೋಗಿದ್ದ ಈ ತಡೆಗೋಡೆಯ ಬಳಿಯ ಮಣ್ಣನ್ನು ತೆಗೆಯಲಾಗಿದ್ದು, ಅದನ್ನು ರಸ್ತೆ ಬದಿಯಲ್ಲಿಯೇ ರಾಶಿ ಹಾಕಲಾಗಿದೆ. ಮಳೆ ಬಂದಾಗ ಈ ಮಣ್ಣು ಮಳೆ ನೀರಿನೊಂದಿಗೆ ಕರಗಿ ರಸ್ತೆ ಮೇಲೆಯೇ ಹರಿಯತ್ತಿದೆ. ಮೊದಲೇ ಇಳಿಜಾರಾದ ಈ ರಸ್ತೆಯು ಕೆಸರು ಮಣ್ಣು ಹರಿದು ಸಂಪೂರ್ಣ ಕೆಸರುಮಯವಾಗುತ್ತಿದ್ದು, ಮಳೆ ಬಂದ ಸಮಯದಲ್ಲಿ ಸಂಚರಿಸಲು ಕಷ್ಟ ಪಡುವ ಸ್ಥಿತಿ ಎದುರಾಗಿದೆ. ವಾಹನಗಳು ಸಾಗುವಾಗ ಕೆಸರಿನಲ್ಲಿ ಜಾರಿ ಅವಘಡವಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಸಿಲು ಬಂದಾಗ ಈ ಮಣ್ಣು ಒಣಗಿ ಘನ ವಾಹನಗಳು ಸಂಚರಿಸುವಾಗ ಸಂಪೂರ್ಣ ಈ ಪರಿಸರ ಧೂಳುಮಯವಾಗುತ್ತಿದೆ. ಈ ಬಗ್ಗೆ ಗ್ರಾ.ಪಂ.ಗೆ ಮೌಖಿಕವಾಗಿ ತಿಳಿಸಿದ್ದರೂ, ಈವರೆಗೆ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೂಡಲೇ ಸಾರ್ವಜನಿಕ ರಸ್ತೆಯ ಬದಿ ಹಾಕಿರುವ ಈ ಮಣ್ಣನ್ನು ತೆರವುಗೊಳಿಸಬೇಕು ಹಾಗೂ ಚರಂಡಿಯನ್ನು ಬಿಡಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಯೂ ಹಾಳು!
ಆದರ್ಶನಗರದಿಂದ ತಾಳೆಹಿತ್ಲುವಿನವರೆಗೆ ಈ ರಸ್ತೆಗೆ ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದ ಅವಧಿಯಲ್ಲಿ ‘ನಮ್ಮೂರು- ನಮ್ಮ ರಸ್ತೆ’ ಅನುದಾನದಲ್ಲಿ ಡಾಮರು ಕಾಮಗಾರಿ ನಡೆಸಲಾಗಿತ್ತು. ಆದರೆ ಕಜೆಯಲ್ಲಿ ಕುಸಿದ ತಡೆಗೋಡೆಯನ್ನು ಸರಿಯಾಗಿ ಜೋಡಿಸಲು ಹಿಟಾಚಿಗಳು ಪ್ರಯತ್ನಿಸಿದ್ದು, ಇದರಿಂದ ಇಲ್ಲಿ ಡಾಮರು ರಸ್ತೆ ಕೂಡಾ ಈಗ ಕಿತ್ತುಹೋಗುವಂತಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.