ಪುತ್ತೂರು: ಮುಂಡೂರು-ತಿಂಗಳಾಡಿ ರಸ್ತೆಯ ಕೂಡುರಸ್ತೆ ಎಂಬಲ್ಲಿ ರಸ್ತೆ ದುರಸ್ತಿಗೆಂದು ರಸ್ತೆಗೆ ಜಲ್ಲಿ ಹಾಕಿ ಅನೇಕ ತಿಂಗಳುಗಳೇ ಕಳೆದರೂ ಜಲ್ಲಿ ಹಾಕಿ ಹೋದವರು ಅತ್ತ ವಾಪಸ್ ಬಾರದೇ ಇರುವ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ದುರಸ್ತಿಗೆಂದು ರಸ್ತೆಗೆ ಜಲ್ಲಿ ಹಾಸಿದ್ದು ಬಹುತೇಕ ಜಲ್ಲಿ ಕಲ್ಲುಗಳು ಎದ್ದು ಹೋಗಿರುವ ಪರಿಣಾಮ ಕೆಲವು ದ್ವಿಚಕ್ರ ವಾಹನಗಳ ಟಯರ್ ಪಂಕ್ಚರ್ ಕೂಡಾ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಳೆ ನಿಂತ ಬಳಿಕ ರಸ್ತೆ ದುರಸ್ತಿ ಮಾಡುತ್ತಾರೆ ಎನ್ನುವ ಭರವಸೆ ಸಾರ್ವಜನಿಕರಿಗಿದ್ದರೂ ಕೂಡಾ ಇದೀಗ ಮಳೆ ನಿಂತ ಬಳಿಕವೂ ಅದನ್ನು ದುರಸ್ತಿ ಮಾಡದೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ರಸ್ತೆ ದುರಸ್ತಿ ಮಾಡಲು ಆಗದಿದ್ದರೆ ಹಾಕಿರುವ ಜಲ್ಲಿಯನ್ನಾದರೂ ತೆರವುಗೊಳಿಸಿ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ. ರಸ್ತೆ ರಿಪೇರಿ ಮಾಡಲು ಜಲ್ಲಿಕಲ್ಲು ಹಾಸಿ ಹೋಗಿ ಅನೇಕ ತಿಂಗಳುಗಳೇ ಕಳೆದರೂ ದುರಸ್ತಿ ಮಾಡದೇ ಬಿಟ್ಟಿರುವುದು ಸರಿಯಲ್ಲ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ ತಿಳಿಸಿದ್ದಾರೆ.