ಶಾಸಕ ಅಶೋಕ್ ರೈ ಮನವಿಗೆ ಸ್ಪಂದನೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಹಿ.ಪ್ರಾ. ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಆಯ್ಕೆಯಾಗಿದ್ದು, ಪುತ್ತೂರು ಶಾಸಕ ಅಶೋಕ್ ರೈ ಮನವಿಗೆ ಶಿಕ್ಷಣ ಇಲಾಖೆ ಸ್ಪಂದನೆ ನೀಡಿದೆ.
ಉಪ್ಪಿನಂಗಡಿಯ ಸರಕಾರಿ ಹಿ ಪ್ರಾ ಶಾಲೆ, ನೆಟ್ಟಣಿಗೆ ಮುಡ್ನೂರು ಸರಕಾರಿ ಹಿ ಪ್ರಾ ಶಾಲೆ ಹಾಗೂ ಬಜತ್ತೂರು ಸರಕಾರಿ ಹಿ ಪ್ರಾ ಶಾಲೆ ಇನ್ನು ಮುಂದೆ ಕೆಪಿಎಸ್ ಸ್ಕೂಲ್ ಆಗಿ ಪರಿವರ್ತನೆಯಾಗಲಿದೆ. ಒಟ್ಟು ಎಂಟು ಶಾಲೆಗಳನ್ನು ಅರ್ಹತಾ ಪಟ್ಟಿಗೆ ಕಳುಹಿಸಲಾಗಿದ್ದು, ಮೊದಲ ಹಂತದಲ್ಲಿ ಮೂರು ಶಾಲೆಗಳನ್ನು ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ.
ಎಲ್ಕೆಜಿಯಿಂದ ಆಂಗ್ಲ ಮಾಧ್ಯಮ
ಕೆಪಿಎಸ್ ಸ್ಕೂಲ್ ಗಳಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿ ತನಕ ಒಂದೇ ಸೂರಿನಡಿ ಶಿಕ್ಷಣ ದೊರೆಯಲಿದೆ. ಎಲ್ಕೆಜಿಯಿಂದ ಆರಂಭಗೊಂಡು ದ್ವಿತೀಯ ಪಿಯುಸಿ ತನಕ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತದೆ. ಗ್ರಾಮೀಣ ಭಾಗದ ಶಾಲೆಗಳನ್ನು ಸರಕಾರ ಕೆಪಿಎಸ್ ಸ್ಕೂಲ್ಗೆ ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲೇ ಪಡೆಯಬಹುದಾಗಿದೆ. ಈ ಹಿಂದೆ ಪುತ್ತೂರಿನಲ್ಲಿ ಕುಂಬ್ರ ಮತ್ತು ಕೆಯ್ಯೂರು ಸರಕಾರಿ ಹಿ ಪ್ರಾ ಶಾಲೆಗಳನ್ನು ಕೆಪಿಎಸ್ ಸ್ಕೂಲ್ಗೆ ಆಯ್ಕೆ ಮಾಡಲಾಗಿತ್ತು. ಇದೀಗ ಇನ್ನೂ ಮೂರು ಶಾಲೆಗಳನ್ನು ಸೇರ್ಪಡೆ ಮಾಡುವುದರ ಜೊತೆಗೆ ಒಟ್ಟು 5 ಶಾಲೆಗಳು ಕೆಪಿಎಸ್ ಮಾದರಿ ಶಾಲೆಯಾಗಿ ಪರಿವರ್ತನೆಯಾಗಲಿದೆ.
ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್ : ಅಶೋಕ್ ರೈ
ಪ್ರತೀ ಗ್ರಾಮಕ್ಕೆ ಒಂದರಂತೆ ಕೆಪಿಎಸ್ ಸ್ಕೂಲ್ ನೀಡಬೇಕು ಎಂದು ಸರಕಾರಕ್ಕೆ ಈಗಾಗಲೇ ಮನವಿಯನ್ನು ಸಲ್ಲಿಸಿದ್ದೇನೆ. ಗ್ರಾಮಕ್ಕೊಂದು ಕೆಪಿಎಸ್ ಮಾದರಿ ಶಾಲೆಯನ್ನು ನೀಡಿದ್ದಲ್ಲಿ ಪ್ರತೀ ಗ್ರಾಮೀಣ ಮಗುವಿಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಸುಲಭವಾಗುತ್ತದೆ. ಮಕ್ಕಳ ಸಂಖ್ಯೆ ತೀರಾ ಕಡಿಮೆ ಇರುವ ಶಾಲೆಗಳನ್ನು ಮುಖ್ಯ ಶಾಲೆಯ ಜೊತೆ ಮರ್ಜ್ ಮಾಡುವ ಕೆಲಸವನ್ನೂ ಸರಕಾರ ಮಾಡಲಿದೆ. ಇದರಿಂದ ಶಾಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಬಹುದಾಗಿದೆ. ಒಂದೇ ಸೂರಿನಡಿ ಎಲ್ಲಾ ಶಿಕ್ಷಣವೂ ದೊರೆಯುವ ಕಾರಣಕ್ಕೆ ಶೈಕ್ಷಣಿಕ ಕ್ರಾಂತಿಯೂ ಉಂಟಾಗಬಹುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಬಸ್ ವ್ಯವಸ್ಥೆ ಮಾಡಲಾಗುತ್ತದೆ
ಗ್ರಾಮಕ್ಕೊಂದು ಕೆಪಿಎಸ್ ಮಾದರಿ ಶಾಲೆಯನ್ನು ಪ್ರಾರಂಭಿಸಿ ಅಕ್ಕಪಕ್ಕದ ಊರುಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈಗಾಗಲೇ ಪುತ್ತೂರಿನ ಒಂದೆರಡು ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಯಶಸ್ಸು ಕಂಡಿದೆ. ಮುಂದೆ ಗ್ರಾಮಕ್ಕೊಂದು ಕೆಪಿಎಸ್ ಬಂದಲ್ಲಿ ಇದೇ ರೀತಿಯ ವ್ಯವಸ್ಥೆಯು ಮುಂದುವರೆಯುತ್ತದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಸಚಿವರಿಗೆ ಅಭಿನಂದನೆ
ತನ್ನ ಕ್ಷೇತ್ರಕ್ಕೆ ಮೂರು ಕೆಪಿಎಸ್ ಮಾದರಿ ಶಾಲೆಯನ್ನು ಮಂಜೂರು ಮಾಡಿದ್ದಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಶಾಸಕ ಅಶೋಕ್ ರೈ ಅಭಿನಂದನೆ ಸಲ್ಲಿಸಿದ್ದು, ಬಾಕಿ ಇರುವ ಐದು ಶಾಲೆಗಳನ್ನು ಶೀಘ್ರ ಈ ಪಟ್ಟಿಗೆ ಸೇರಿಸಬೇಕು ಎಂದು ಈ ಸಂದರ್ಭದಲ್ಲಿ ಸಚಿವರಿಗೆ ಶಾಸಕರು ಮನವಿ ಮಾಡಿದರು.