ಭಾರತೀಯರು ಜಗತ್ತಿಗೆ ನೀಡಿದ ಕೊಡುಗೆ ಶ್ರೇಷ್ಠ: ಡಾ. ಕಲ್ಲಡ್ಕ ಪ್ರಭಾಕರ ಭಟ್
ಉಪ್ಪಿನಂಗಡಿ: ಭಾರತೀಯರು ಜಗತ್ತಿಗೆ ಏನನ್ನು ನೀಡಿದ್ದಾರೋ ಅದೆಲ್ಲವೂ ಶ್ರೇಷ್ಠವಾಗಿದೆ. ಅಪರೇಶನ್ ಸಿಂಧೂರದ ಕಾರ್ಯಾಚರಣೆಯಲ್ಲಿ ತಾಂತ್ರಿಕತೆ ಮತ್ತು ವೈಜ್ಞಾನಿಕತೆಯ ಬಳಕೆಯೊಂದಿಗೆ ಹೊಸತನದ ಯುದ್ಧ ಶೈಲಿಯನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಭಾರತದ ಸಾಮರ್ಥ್ಯವನ್ನು ವಿಶ್ವವೇ ಬೆರಗು ಕಣ್ಣುಗಳಿಂದ ನೋಡುವಂತಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.

ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ – ಸಮಾಜಕ್ಕಾಗಿ ನಮ್ಮ ಕೊಡುಗೆ ಏನು ಎಂಬ ಚಿಂತನೆಯೊಂದಿಗೆ ಕಾರ್ಯಾಚರಿಸುವ ಮೂಲಕ ಇಡೀ ರಾಜ್ಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘವು 85 ಸಂಸ್ಥೆಗಳೊಂದಿಗೆ ಮುನ್ನಡೆಯುತ್ತಿದೆ. ಕಾಲೇಜಿನಿಂದ ಬಿಡುಗಡೆಗೊಂಡ ಪ್ರಕೃತಿ ದತ್ತ ಔಷಧಗಳ ವಿವರವುಳ್ಳ ಪುಸ್ತಕವನ್ನು ಉಲ್ಲೇಖಿಸಿ, ಅಜ್ಜಿ ಮದ್ದು ಎನ್ನುವ ಭಾರತೀಯ ಪರಂಪರಾಗತ ಔಷಧದಲ್ಲಿ ರಾಸಾಯನಿಕ ಬೆರೆಸುತ್ತಿರಲಿಲ್ಲ. ಆದರೆ ಕಾಪ್ ಸಿರಪ್ ಎನ್ನುವ ಔಷಧದಲ್ಲಿ ರಾಸಾಯನಿಕ ಬೆರಸಿದ ಫಲವಾಗಿ 23 ಮಕ್ಕಳು ಸಾವನ್ನಪ್ಪುವ ಸ್ಥಿತಿ ಉಂಟಾಯಿತು. ಜಗತ್ತಿಗೆ ಜ್ಞಾನದ ಬೆಳಕು ನೀಡಿದ, ಬದುಕಿನ ಸೌಂದರ್ಯವನ್ನು ತಿಳಿಸಿದ ನಮ್ಮ ಶ್ರೇಷ್ಠ ಪರಂಪರೆಯ ಹಿನ್ನೆಲೆ ನಮ್ಮದೆಂಬ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ, ವೈದ್ಯಕೀಯ ಪದವೀಧರರೂ ಆಗಿರುವ ಡಾ. ಶ್ರೀರಾಮ್ ಕೈಲಾರ್ ಮಾತನಾಡಿ, ನಾವು ಜಗತ್ತಿನ ಎಲ್ಲೆಡೆಗೆ ಹೋದರೂ ನಮ್ಮ ಜನ್ಮ ಭೂಮಿಯ ಉನ್ನತಿಗಾಗಿ ನಮ್ಮ ತನು ಮನ ಧನ ಸಮರ್ಪಿತವಾಗಬೇಕೆಂದರು.
ತಮ್ಮ ಕಲಿಕಾ ಅವಧಿಯಲ್ಲಿ ಸರ್ವಾಂಗೀಣ ಸಾಧನೆ ತೋರಿದ ಪ್ರಾಪ್ತಿ ಪಿ.ವಿ. ಅವರಿಗೆ ಇಂದ್ರಧನುಷ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅವರ ಹೆತ್ತವರ ಸಹಿತ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಹೆಚ್.ಕೆ. ಪ್ರಕಾಶ್ ಸ್ವಾಗತಿಸಿ, ವರದಿ ವಾಚಿಸಿದರು. ಕಾಲೇಜು ವಿದ್ಯಾರ್ಥಿ ನಾಯಕ ಪ್ರಾಂಜಲ್ ನಾಯಕ್ ವಂದಿಸಿದರು.