ಪುತ್ತೂರು: ಕೊಂಬೆಟ್ಟು ಕ್ರೀಡಾಂಗಣದಲ್ಲಿ ಕಳೆದ 3ವರೆ ತಾಸುಗಳಿಂದ ಬದ್ರುನ್ನಿಸಾ ಮಡಿಲಲ್ಲಿ ಬೆಚ್ಚಗೆ ಮಲಗಿ, ಶುಭ ರೈ ಆರೈಕೆಯಲ್ಲಿ ಹೆತ್ತಬ್ಬೆಗಾಗಿ ಕಾಯುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಕೊನೆಗೂ ಹೆತ್ತತಾಯಿಯ ಕೈಸೇರಿದೆ.
ಸುದ್ದಿ ವೆಬ್ ಸೈಟ್ ನಲ್ಲಿ ಮಗು ಹೆತ್ತವರಿಗಾಗಿ ಕಾಯುತ್ತಿರುವ ವರದಿ ಪ್ರಕಟವಾಗುತ್ತಲೆ ವಿಷಯ ತಿಳಿದ ಹೆತ್ತ ತಾಯಿ ಮಗುವಿನ ಬಳಿ ಓಡೋಡಿ ಬಂದಿದ್ದಾರೆ.ಕಳೆದ ಮೂರುವರೆ ಗಂಟೆಯಿಂದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಈ ಹೆಣ್ಣುಮಗುವನ್ನು ಹೆತ್ತವರು ಊಟ ಮಾಡಿ ಬರುವುದಾಗಿ ಹೇಳಿ ಬೇರೊಬ್ಬರ ಕೈಗಿತ್ತು ಹೊರನಡೆದಿದ್ದರು. ಆದರೆ ಕಳೆದ ಮೂರುವರೆ ಗಂಟೆಯಿಂದ ಮಗುವಿನ ತಾಯಿ ಹಿಂದಿರುಗಿ ಬಾರದಿದ್ದಾಗ ಆತಂಕಗೊಂಡು ಸಂಘಟಕರು ವಿಷಯ ತಿಳಿದು ಮಗುವಿನ ತಾಯಿ ಎಲ್ಲಿದ್ದರು ವೇದಿಕೆ ಬಳಿ ಬರುವಂತೆ ಕರೆ ನೀಡಿದ್ದರು. ಅದಾಗ್ಯೂ ಹೆತ್ತವರು ಬಾರದಿದ್ದಾಗ ಶುಭಾ ರೈ ಮತ್ತು ಬದ್ರುನ್ನಿಸಾ ಮಗುವನ್ನು ಸಂತೈಸಿ ಲಾಲನೆಯಲ್ಲಿ ತೊಡಗಿದ್ದರು. ಕೊನೆಗೂ ವಿಷಯ ತಿಳಿದು ಮಗುವಿನ ಬಳಿಗೆ ಬಂದ ಮಹಿಳೆಗೆ ಸಂಘಟಕರು ಮತ್ತು ಬದ್ರುನ್ನಿಸಾ ಬುದ್ದಿಮಾತು ಹೇಳಿ ಮಗುವನ್ನು ಹಸ್ತಾಂತರಿಸಿದ್ದಾರೆ. ಸುರಿವ ಮಳೆಯ ನಡುವೆ ಹೆತ್ತ ತಾಯಿಯ ಮಡಿಲು ಸೇರುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ.