ನೆಲ್ಯಾಡಿ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ಕಾಮಧೇನು ಗೋಶಾಲೆಯಲ್ಲಿ ಅ.22ರಂದು ಗೋಪೂಜೆ ನಡೆಯಿತು.
ದೇವಸ್ಥಾನದ ಅರ್ಚಕ ಗುರುರಾಜ ಉಪ್ಪಾರ್ಣ ಅವರ ಪೌರೋಹಿತ್ಯದಲ್ಲಿ ಅರ್ಚಕ ವೃಂದದ ಸಹಕಾರದಿಂದ ಗೋಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಕಾಮಧೇನು ಗೋಶಾಲೆಯಲ್ಲಿ ಪ್ರಸ್ತುತ ಸುಮಾರು 250ಕ್ಕೂ ಹೆಚ್ಚು ಗೋವುಗಳಿದ್ದು ಅವೆಲ್ಲವನ್ನು ವಿಶೇಷವಾಗಿ ಶುಚಿಗೊಳಿಸಿ, ಹೂಮಾಲೆಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮಹಿಳಾ ಭಕ್ತರು ಹಾಗೂ ಸೇವಾದಾರರು ಗೋವುಗಳ ಶೃಂಗಾರ ಕಾರ್ಯದಲ್ಲಿ ಭಾಗವಹಿಸಿದ್ದರು. ನಂತರ ಗೋವುಗಳಿಗೆ ದೋಸೆ, ಅವಲಕ್ಕಿ, ಪಂಚಕಜ್ಜಾಯ, ಬೆಲ್ಲ ಹಾಗೂ ವಿವಿಧ ಸವಿಯ ಖಾದ್ಯಗಳನ್ನು ನೀಡಲಾಯಿತು. ಪೂಜೆಯ ಬಳಿಕ ಗೋಶಾಲೆಯಲ್ಲಿ ದಿನನಿತ್ಯ ಶ್ರಮಿಸುತ್ತಿರುವ ನೌಕರರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಮತ್ತು ಉಷಾ ದಂಪತಿ ಗೋವಿನ ಪಾದ ತೊಳೆದು, ಹಣೆಗೆ ಅರಸಿನ ಕುಂಕುಮ ಹಚ್ಚಿ, ಹೂಮಾಲೆ ತೊಡಿಸಿ ಗೋವುಗಳಿಗೆ ಆರತಿ ಬೆಳಗಿದರು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಸಮಿತಿ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ಗೌಡ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಪ್ರಶಾಂತ್ ಮಚ್ಚಿನ, ಲೋಕೇಶ್ವರಿ ವಿನಯಚಂದ್ರ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ರೈ ಆರಂತಬೈಲು, ಕಾರ್ಯದರ್ಶಿ ಶ್ಯಾಮರಾಜ್, ಉದ್ಯಮಿ ಗಣೇಶ್ ಕಲಾಯಿ, ದಯಾನೀಶ್ ಕೊಕ್ಕಡ ಹಾಗೂ ಭಕ್ತರು, ದೇವಸ್ಥಾನದ ನೌಕರರು ಉಪಸ್ಥಿತರಿದ್ದರು.