ಟೀಕಿಸುವ ಭರದಲ್ಲಿ ಶ್ಲಾಘಿಸಬೇಕಾದ ವಿಚಾರಗಳು ಮರೆಯಾಗಬಾರದು!

0

ಪುತ್ತೂರಿನಲ್ಲಿ ನಡೆದ ಅಶೋಕ ಜನ ಮನ ಕಾರ್ಯಕ್ರಮ ಹಿಂದೆಂದಿಗಿಂತಲೂ ಹೆಚ್ಚು ಸುದ್ದಿಯಾಗಿದೆ. ಅದಕ್ಕೆ ಕಾರಣಗಳು ಎರಡು. ಮೊದಲನೆಯದ್ದು ನಾಡಿನ ಮುಖ್ಯಮಂತ್ರಿಗಳನ್ನೇ ಕರೆಸಿಕೊಂಡದ್ದು. ಎರಡನೆಯದು ಹನ್ನೊಂದು ಜನ ಅಸ್ವಸ್ಥರಾದದ್ದು. ಆದರೆ ಎರಡನೆಯ ಕಾರಣದ ಗದ್ದಲಗಳಲ್ಲಿ ಮೊದಲನೆಯ ಕಾರಣ ಸದ್ದಿಲ್ಲದೆ ಬದಿಗೆ ಸರಿದಿದೆ!

ನಿಜ, ಕಾರ್ಯಕ್ರಮವೊಂದನ್ನು ಆಯೋಜನೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಅಂಗಣವೊಂದರಲ್ಲಿ ಸೇರಬಹುದಾದ ಜನಸಂಖ್ಯೆ, ಅದನ್ನು ನಿಭಾಯಿಸಬೇಕಾದ ರೀತಿ, ಎದುರಾಗಬಹುದಾದ ಸವಾಲುಗಳು ಇವೆಲ್ಲವನ್ನೂ ಪೂರ್ವಯೋಜನೆ ಮಾಡಿಕೊಳ್ಳಲೇಬೇಕು. ಅಶೋಕ ಜನಮನದಲ್ಲಿ ಅವೆಲ್ಲವೂ ಆಗಿತ್ತು, ಆದರೆ ಮಳೆಯಿಂದಾಗಬಹುದಾದ ಸವಾಲುಗಳನ್ನೆದುರಿಸುವ ಬಗೆಗಿನ ಯೋಜನೆ ಸರಿಯಾಗಿ ಮಾಡಿಕೊಳ್ಳದಿದ್ದರೆ ಅಥವ ಮಾಡಿಕೊಂಡಿದ್ದ ಯೋಚನೆಯಂತೆ ನಿಭಾಯಿಸಲು ಅಸಾಧ್ಯವಾದದ್ದು ಒಟ್ಟು ಗೊಂದಲಗಳಿಗೆ ಕಾರಣವಾಗಿದೆ. ಸುದೈವದಿಂದ ಯಾರ ಪ್ರಾಣಕ್ಕೂ ಕುತ್ತು ಬಂದಿಲ್ಲ. ಕಾಲ್ತುಳಿತ ಘಟಿಸಿಲ್ಲ. ಇಬ್ಬರಿಗೆ ತುಸು ಹೆಚ್ಚು ಅನಿಸುವಂತಹ ಅಸ್ವಸ್ಥತೆ ಕಾಡಿದರೆ ಉಳಿದ ಒಂಬತ್ತೂ ಮಂದಿ ಶೀಘ್ರವಾಗಿ ಮತ್ತು ಕ್ಷೇಮವಾಗಿ ಮನೆ ತಲಪಿದ್ದಾರೆ.

ವಿರೋಧ ಪಕ್ಷದವರು ಅದರಲ್ಲೂ ವಿಶೇಷವಾಗಿ ಭಾಜಪ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದು ಸಹಜ ಕೂಡ. ತಮಗೆ ಸಿಗಬಹುದಾದ ಸಣ್ಣ ಸಣ್ಣ ಸದವಕಾಶಗಳನ್ನೂ ಸದ್ವಿನಿಯೋಗ ಮಾಡಿಕೊಳ್ಳಬೇಕಾದದ್ದು ವಿರೋಧ ಪಕ್ಷದ ಲಕ್ಷಣ. ಹಾಗೆ ನೋಡಿದರೆ ವಿಧಾನ ಸಭೆಯಲ್ಲಿನ ಭಾಜಪ ನಾಯಕರಿಗಿಂತ ಪುತ್ತೂರಿನ ನೇತಾರರು ಎಷ್ಟೋ ವಾಸಿ. ಸಿಕ್ಕ ಅವಕಾಶವನ್ನು ಗಟ್ಟಿ ಧ್ವನಿಯಲ್ಲೇ ಮಂಡಿಸಿದ್ದಾರೆ. ಅಷ್ಟರಮಟ್ಟಿಗೆ ಅವರ ಕೆಲಸ ಅವರು ನಿಭಾಯಿಸಿದ್ದಾರೆ ಎಂದು ಪುತ್ತೂರಿನ ನಾಯಕತ್ವದ ವಿಚಾರದಲ್ಲಿ ರೋಸಿಹೋಗಿರುವ ಕಾರ್ಯಕರ್ತರು ತುಸು ಖುಷಿ ಪಡಬಹುದು! ಈ ನಡುವೆ ಸಾಮಾಜಿಕ ಮಾಧ್ಯಮದಲ್ಲೂ ಕೆಲವರು ಸಿಕ್ಕಿದ್ದೆ ಚಾನ್ಸು ಅನ್ನುವಂತೆ ಅಶೋಕ್ ರೈ ಅವರ ಮೇಲೆ ಮುಗಿಬೀಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೋದವರನ್ನೂ ಮೂದಲಿಸುತ್ತಿದ್ದಾರೆ.

ಆದರೆ ಅಶೋಕ ಜನಮನ ಕಾರ್ಯಕ್ರಮದಲ್ಲಿ ಗಮನಿಸಲೇಬೇಕಾದ ಕೆಲವೊಂದು ಸಕಾರಾತ್ಮಕ ಅಂಶಗಳೂ ಘಟಿಸಿವೆ. ಗದ್ದಲದ ಮಧ್ಯೆ ಆ ಸಂಗತಿಗಳು ಮಾಸಿಹೋಗಬಾರದು. ಅಶೋಕ್ ರೈ ಅವರು ತಮ್ಮ ಟ್ರಸ್ಟ್‌ನ ದೀಪಾವಳಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಕರೆಸಿದ್ದು ತನ್ನ ಪ್ರತಿಷ್ಟೆ ಮೆರೆಯುವುದಕ್ಕಿಂತಲೂ, ಬಜೆಟ್‌ನಲ್ಲಿ ಮಂಡನೆಯಾದ ಮೆಡಿಕಲ್ ಕಾಲೇಜು ಯಾವ ಕಾರಣಕ್ಕೂ ಕೈತಪ್ಪಿಹೋಗಬಾರದೆಂಬುದಕ್ಕೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಪತ್ರಿಕೆಯ ಜಾಹೀರಾತುಗಳಲ್ಲಿ ಮೆಡಿಕಲ್ ಕಾಲೇಜು ನೀಡಿದ ಮುಖ್ಯಮಂತಿ ಎಂಬ ಉಲ್ಲೇಖಗಳಿರಬಹುದು, ಮುಖ್ಯಮಂತ್ರಿ ವೇದಿಕೆಗೆ ಬರುವಾಗ ಪುತ್ತೂರಿಗೆ ಮೆಡಿಕಲ್ ಕಾಲೇಜು ನೀಡಿದ… ಎಂದು ಮೆಡಿಕಲ್ ಕಾಲೇಜನ್ನೇ ಒತ್ತಿ ಒತ್ತಿ ಹೇಳುತ್ತಾ ಸಿದ್ಧರಾಮಯ್ಯನವರನ್ನು ಶ್ಲಾಘಿಸಿದ್ದಿರಬಹುದು,

ವೇದಿಕೆಯ ತುಂಬಾ ಮೆಡಿಕಲ್ ಕಾಲೇಜು ನೀಡಿದ ಧೀಮಂತ ನಾಯಕ, ಮೆಡಿಕಲ್ ಕಾಲೇಜು ಸರದಾರ ಎಂಬ ಹೋರ್ಡಿಂಗ್ಸ್ ಹಾಕಿದ್ದಿರಬಹುದು, ಅಶೋಕ್ ರೈ ಅವರು ತಮ್ಮ ಭಾಷಣದಲ್ಲಿ ಮೆಡಿಕಲ್ ಕಾಲೇಜು ನೀಡಿದ ಮುಖ್ಯಮಂತ್ರಿ ಎಂದು ಮತ್ತೆ ಮತ್ತೆ ಉಲ್ಲೇಖಿಸಿದ್ದಿರಬಹುದು ಇವೆಲ್ಲವೂ ಮೆಡಿಕಲ್ ಕಾಲೇಜಿನ ಭರವಸೆ ಈಡೇರಿಕೆಗಾಗಿ ಅಶೋಕ್ ರೈ ಇಟ್ಟ ಜಾಣ ನಡೆಗಳು. ಹೀಗೆ ಮುಖ್ಯಮಂತ್ರಿಗಳು ಕಣ್ಣು ಬಿಟ್ಟಲ್ಲಿ, ಕಿವಿ ಕೊಟ್ಟಲ್ಲೆಲ್ಲಾ ಮೆಡಿಕಲ್ ಕಾಲೇಜು ನೀಡಿದ, ಮೆಡಿಕಲ್ ಕಾಲೇಜು ನೀಡಿದ ಎಂದು ಕಾಣುವಂತೆ, ಕೇಳುವಂತೆ ಮಾಡಿ ಕೊನೆಗೆ ಸ್ವತಃ ಮುಖ್ಯಮಂತ್ರಿ ತನ್ನ ಭಾಷಣದಲ್ಲಿ ಮೆಡಿಕಲ್ ಕಾಲೇಜು ಕೊಟ್ಟೇ ಕೊಡುತ್ತೇನೆ ಎಂದು ಹೇಳುವಂತೆ ಮಾಡಿದ್ದು ಅಶೋಕ್ ರೈ ಸಾಧನೆಯಲ್ಲದೆ ಇನ್ನೇನು?

ಬಹುಶಃ ಮೆಡಿಕಲ್ ಕಾಲೇಜು ಬಗೆಗೆ ಮಾತುಕೊಡದೆ ಬೇರೆ ದಾರಿಯೇ ಇಲ್ಲ ಎಂದು ಮುಖ್ಯಮಂತ್ರಿಗಳಿಗೂ ಅನ್ನಿಸಿರಬಹುದು. ಅಂತಹ ವಾತಾವರಣ ನಿರ್ಮಿಸಿದ್ದಕ್ಕೆ, ಪುತ್ತೂರಿಗೆ ಮೆಡಿಕಲ್ ಕಾಲೇಜು ಬರುವ ಸಾಧ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಕ್ಕೆ ಅಶೋಕ್ ರೈ ಅವರಿಗೊಂದು ಅಭಿನಂದನೆಗಳನ್ನಾದರೂ ಹೇಳಬಾರದೇ? ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜು ಒದಗಿಸಿಕೊಡುವ ಮಾತುಗಳನ್ನಾಡುವಾಗ ಅಶೋಕ್ ರೈ ಅತ್ಯಂತ ಹೆಚ್ಚು ಖುಷಿಪಟ್ಟದ್ದು, ಇಡಿ ಜನಸಮುದಾಯವನ್ನುದ್ಧೇಶಿಸಿ ಎರಡೂ ಕೈಎತ್ತಿ ಚಪ್ಪಾಳೆ ತಟ್ಟಿ ಎಲ್ಲರೂ ಸಂಭ್ರಮಿಸುವಂತೆ ಸೂಕ್ಷ್ಮವಾಗಿ ಕರೆಕೊಟ್ಟದ್ದೆಲ್ಲ, ಅವರಿಗೆ ಮೆಡಿಕಲ್ ಕಾಲೇಜಿನ ಬಗೆಗಿರುವ ಬದ್ಧತೆಯನ್ನು ತೋರಿಸಿದೆ.

ಅಷ್ಟಕ್ಕೂ ಅಶೋಕ್ ರೈ ನಿರಂತರ ಶ್ರಮವಹಿಸುತ್ತಿರುವುದು, ಎಷ್ಟೇ ಕಷ್ಟವಾದರೂ ಸಾಧಿಸಿಯೇ ಸಾಧಿಸುತ್ತೇನೆ ಎಂದು ಹೊರಟಿರುವುದು ತನ್ನ ವೈಯಕ್ತಿಕ ಕೆಲಸಕ್ಕಲ್ಲ, ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕೆನ್ನುವ ಕಾರಣಕ್ಕೆ. ಹಿಂದಿನ ಯಾವ ಶಾಸಕರಿಗೂ ಆಗದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ವೈಯಕ್ತಿಕ ಕಾರ್ಯಕ್ರಮವನ್ನೂ ತನ್ನ ಕ್ಷೇತ್ರದ ಮೆಡಿಕಲ್ ಕಾಲೇಜಿನ ಸಾಕಾರಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಕೆಲವೊಂದು ಸಂಗತಿಗಳು ಬಜೆಟ್‌ನಲ್ಲಿ ಸೇರಿಕೊಂಡರೂ ಅನೇಕ ಸಲ ನಾನಾ ಕಾರಣಗಳಿಗಾಗಿ, ಮುಖ್ಯಮಂತ್ರಿಯ ಬದಲಾದ ಭಾವನೆಗಳಿಂದಾಗಿ ನಂತರದ ದಿನಗಳಲ್ಲಿ ಸಾಕಾರಗೊಳ್ಳದೇ ಇರುವ ಸಾಧ್ಯತೆಯೂ ಇರುತ್ತದೆ. ಹೀಗಿರುವಾಗ ಬಜೆಟ್‌ನಲ್ಲಿ ಘೋಷಿಸಿದ್ದಕ್ಕೆ ಬದ್ಧವಾಗಿರುವ ಅನಿವಾರ್ಯತೆಯನ್ನು ಮುಖ್ಯಮಂತ್ರಿಗೆ ತಂದೊಡ್ಡುವ ಕಾರ್ಯವನ್ನು ಮೊದಲ ಬಾರಿ ಶಾಸಕರಾಗಿರುವ ಅಶೋಕ್ ರೈ ಸೊಗಸಾಗಿಯೇ ಮಾಡಿದ್ದಾರೆ. ಈ ರೀತಿಯ ಬೆನ್ನತ್ತುವ ಗುಣವೇ ಅಶೋಕ್ ರೈ ಅವರನ್ನು ಇತರ ನಾಯಕರಿಗಿಂತ ಭಿನ್ನವಾಗಿಸಿದೆ.

ಕಾರ್ಯಕ್ರಮದ ತರುವಾಯ ಮುಖ್ಯಮಂತ್ರಿಗಳು ಅಶೋಕ್ ರೈ ಅವರಿಗೆ ಕರೆಮಾಡಿ ಕಾರ್ಯಕ್ರಮದ ಬಗೆಗೆ, ಸೇರಿರುವ ಅಪಾರ ಜನಸ್ತೋಮದ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಎಂಬಲ್ಲಿಗೆ ಮುಖ್ಯಮಂತ್ರಿ ಒಳ್ಳೆ ಮೂಡ್‌ನಲ್ಲೇ ಮರಳಿದ್ದಾರೆ ಎಂಬುದು ಸ್ಪಷ್ಟ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬರುವ ಸಾಧ್ಯತೆ ಮತ್ತಷ್ಟು ಗಾಢವಾದದ್ದೂ ಸತ್ಯ! ಹಾಗೆ ನೋಡಿದರೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿಗಳು ಪುತ್ತೂರಿಗೆ ಬರುವಂತೆ ಮಾಡಿರುವುದೇ ಮೆಚ್ಚತಕ್ಕ ವಿಚಾರ. ಯಾಕೆಂದರೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕುಳಿತು ಯಾವುದೋ ಒಂದು ಕ್ಷೇತ್ರದ ಬಗೆಗೆ ಭರವಸೆಯೊಂದನ್ನು ನೀಡುವುದಕ್ಕೂ ಆ ಕ್ಷೇತ್ರಕ್ಕೇ ಹೋಗಿ ಸಹಸ್ರ ಸಹಸ್ರ ಮಂದಿಯ ಮಧ್ಯೆ ೞಮಾಡಿಯೇ ತೀರುತ್ತೇನೆೞ ಎಂದು ಮಾತು ಕೊಡುವುದಕ್ಕೂ ವ್ಯತ್ಯಾಸವಿದೆ. ಜತೆಗೆ, ಮುಖ್ಯಮಂತ್ರಿಗಳು ಬಂದಾಗ, ಹಾಗೆ ಬಂದಿರುವ ಪ್ರದೇಶಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗೆಗೆ ಅವರ ಗಮನ ಸೆಳೆಯುವುದಕ್ಕೆ, ಅನುದಾನ ಪೀಕುವುದಕ್ಕೂ ಅನುಕೂಲವೆನಿಸುತ್ತದೆ.

ಅಶೋಕ್ ರೈ ಅವರನ್ನು ಟೀಕಿಸುವುದಕ್ಕೆ ರಾಜಕೀಯವಾಗಿ ಹತ್ತಾರು ಕಾರಣಗಳಿರಬಹುದು. ಆದರೆ ಮೆಡಿಕಲ್ ಕಾಲೇಜಿನ ಕುರಿತಾದ ಅವರ ಪ್ರಾಮಾಣಿಕತೆ, ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕುರಿತಾದ ವಿಚಾರಗಳೆಡೆಗಿನ ಅವರ ಭಾವನಾತ್ಮಕ ಅಂತರಂಗ ಅನುಮಾನಾಸ್ಪದವೆನಿಸುತ್ತಿಲ್ಲ. ಅಶೋಕ ಜನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಸೇಡಿಯಾಪಿನಲ್ಲಿ ಹೆಜ್ಜೇನು ದಾಳಿಗೊಳಗಾಗಿ ಜೀವಕಳೆದುಕೊಂಡ ಮುಗ್ಧ ಹುಡುಗಿಯೊಬ್ಬಳ ಕುರಿತು ಪ್ರಸ್ತಾವನೆಗೈದು, ಅದೇ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ತನ್ನ ಪರಿಹಾರ ನಿಧಿಯಿಂದ ಐದು ಲಕ್ಷ ಒದಗಿಸಿಕೊಡುವ ಘೋಷಣೆ ಮಾಡುವಂತೆ ಮಾಡಿಸಿದ್ದೂ ಒಬ್ಬ ಶಾಸಕನಾಗಿ ಅವರ ಜನಪರ ಕಾಳಜಿಗೆ ಉದಾಹರಣೆ!

ಕಾರ್ಯಕ್ರಮದಲ್ಲಾದ ಗೊಂದಲಗಳಿಗೆ ಸ್ವತಃ ಅಶೋಕ್ ರೈ ಕ್ಷಮೆಯಾಚಿಸಿದ್ದಾರೆ. ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸಿದ್ದಾರೆ, ಇಬ್ಬರ ಆಸ್ಪತ್ರೆ ಖರ್ಚನ್ನೂ ಭರಿಸಿದ್ದಾರೆ. ಸುರಿದ ಮಳೆಯಲ್ಲಿ ಉಂಟಾದ ಉದ್ವಿಗ್ನತೆಯ ಸಂದರ್ಭದಲ್ಲಿ ತಾನೇ ಮಳೆಯಲ್ಲಿ ನೆನೆಯುತ್ತಾ, ಪಿಕಪ್ ಏರಿ ತನ್ನ ಕೈಲಾಗಬಹುದಾದ ಅಷ್ಟೂ ಪ್ರಯತ್ನ ನಡೆಸಿದ್ದಾರೆ. ಯಾವ ಸಂದರ್ಭದಲ್ಲೂ ಅಶೋಕ್ ರೈ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ, ಮತ್ತೊಬ್ಬರ ಮೇಲೆ ಗೂಬೆ ಕೂರಿಸಿಲ್ಲ. ಇದಕ್ಕಿಂತ ಹೆಚ್ಚು ಅವರಿನ್ನೇನು ಮಾಡಬಹುದು? ಏನು ಮಾಡಬೇಕಿತ್ತು?

ಈ ನಡುವೆ ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಬಟ್ಟಲಿನಾಸೆಗೆ ಬಂದಿದ್ದಾರೆೞ ಎಂದು ಪುತ್ತೂರಿನ ಜನರನ್ನು ಸಾಮಾಜಿಕ ಮಾಧ್ಯಮದಲ್ಲಿ ಅವಮಾನಿಸುವುದು ಒಪ್ಪತಕ್ಕಂತಹದ್ದಲ್ಲ. ನಿಜ, ಉಚಿತವಾಗಿ ದೊರೆಯುವುದರ ಬಗೆಗೆ ಪುತ್ತೂರು ಅಂತಲ್ಲ, ಇಡಿಯ ಭಾರತದಲ್ಲೇ ಆಸಕ್ತಿ ಇದೆ. ಆ ಆಸಕ್ತಿಗೆ ಬಡವ – ಬಲ್ಲಿದನೆಂಬ ವ್ಯತ್ಯಾಸವೇನೂ ಇಲ್ಲ. ಎರಡು ಸೋಪಿನೊಂದಿಗೆ ಪೆನ್ನು ಉಚಿತ ಎಂದರೆ ಅದೇ ಸೋಪನ್ನು ಕೊಳ್ಳುವ ಬಹುದೊಡ್ಡ ವರ್ಗ ಇದೆ. ಅದರರ್ಥ ಅವರ ಮನೆಯಲ್ಲಿ ಪೆನ್ನಿಗೂ ಗತಿ ಇಲ್ಲ ಎಂದಲ್ಲ, ಉಚಿತದ ಬಗೆಗೆ ಇರುವ ಮೋಹ! ಇಂದು ಪುತ್ತೂರಿನಲ್ಲೇ ರಿಲಯನ್ಸ್, ಮೋರ್‌ನಂತಹ ಮಳಿಗೆಗಳಲ್ಲಿ ಜನಸಂದಣಿಯಾಗುತ್ತಿರುವುದಕ್ಕೆ ಕೇವಲ ಗುಣಮಟ್ಟವೊಂದೇ ಕಾರಣವಲ್ಲ, ಅದರ ಜತೆಗೆ ಹಲವು ವಸ್ತು ಕೊಳ್ಳುವಾಗ ಯಾವುದೋ ಒಂದಕ್ಕೆ ಇನ್ನೊಂದು ಉಚಿತ ಸಿಗುತ್ತದೆ,

ಭಾರೀ ದರ ಕಡಿತ ಇರುತ್ತದೆ ಎಂಬುದೂ ಹೌದು! ಮನೆಗಳಲ್ಲಿ ಇನ್ನೂರು ಯೂನಿಟ್‌ವರೆಗೆ ವಿದ್ಯುತ್ ಉಚಿತ ಎಂದಾಗ ಪಕ್ಷಾತೀತವಾಗಿ ಬಹುತೇಕರು ಮಾಡಿಸಿಕೊಂಡದ್ದು, ನಿರ್ಗತಿಕರು ಎಂಬ ಕಾರಣಕ್ಕಲ್ಲ, ಉಚಿತೞದ ಕುರಿತಾದ ಆಸಕ್ತಿಯಿಂದಾಗಿ! ಮದುವೆ, ಮುಂಜಿಯಂತಹ ಹಲವು ಕಾರ್ಯಕ್ರಮಗಳಿಗೆ, ಸಾಹಿತ್ಯ, ಧಾರ್ಮಿಕ ಸಮ್ಮೇಳನಗಳಿಗೆ ಹೋಗಿ ಉಚಿತ ಊಟ ಮಾಡಿಯೇ ಹೊರಬರುವುದು. ಹಾಗೆಂದು ಊಟಕ್ಕಾಗಿ ಹೋದರು ಎಂಬುದು ಎಷ್ಟು ಬಾಲಿಶವೆನಿಸುತ್ತದೋ, ಬಟ್ಟಲಿಗಾಗಿ ಹೋದರು ಎನ್ನುವುದೂ ಅಷ್ಟೇ ಬಾಲಿಶ. ಮುಖ್ಯಮಂತ್ರಿಗಳ ಭಾಷಣದಲ್ಲೂ ನಿರ್ಗತಿಕ ಪದ ಬಂದಿರುವ ಬಗೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಆಕ್ಷೇಪ ಸತ್ಯವೂ ಹೌದು. ಯಾಕೆಂದರೆ ಅಶೋಕ ಜನಮನಕ್ಕೆ ಬಂದವರು ಯಾರೂ ನಿರ್ಗತಿಕರಲ್ಲ. ಬದಲಾಗಿ ಅಶೋಕ್ ರೈ, ಸಿದ್ಧರಾಮಯ್ಯ ಅಥವ ತಮ್ಮ ನೇತಾರರನ್ನು ಕಾಣಲು ಬಂದಿರುವ ಅಭಿಮಾನಿಗಳು, ಸಾರ್ವಜನಿಕರು ಅಷ್ಟೆ.

ಕೇಂದ್ರ ಸರ್ಕಾರ ಕೃಷಿಕರಿಗೆ ನೀಡುವ ಕಿಸಾನ್ ಸಮ್ಮಾನ್ ನಿಧಿಯೂ ಉಚಿತವೇ, ರಾಜ್ಯಸರ್ಕಾರ ಕೊಡುವ ಗೃಹಲಕ್ಷ್ಮಿಯೂ ಉಚಿತವೇ! ಅವರು ಬಿಹಾರದಲ್ಲಿ ಘೋಷಿಸಿದ ಹತ್ತು ಸಾವಿರವೂ ಉಚಿತ, ಇವರು ಇಲ್ಲಿ ನೀಡುತ್ತಿರುವ ಬಸ್ ಪ್ರಯಾಣವೂ ಉಚಿತ. ಸರ್ಕಾರಗಳೇ ಹೀಗೆ ಉಚಿತ ಪರಿಕಲ್ಪನೆಯನ್ನು ಮನೆಮನೆಗೆ ತಲಪಿಸುತ್ತಿರುವಾಗ, ಅಶೋಕ್ ರೈ ತಾನು ಶಾಸಕನಾಗುವುದಕ್ಕಿಂತಲೂ ಎಷ್ಟೋ ಪೂರ್ವದಿಂದ ತನ್ನ ಟ್ರಸ್ಟ್ ಮೂಲಕ ನಡೆಸಿಕೊಂಡು ಬಂದ ಕಾರ್ಯಕ್ರಮವನ್ನು ಈಗ ಮುಂದುವರೆಸಿ, ಹಿಂದಿನಂತೆ ಉಚಿತ ಗಿಫ್ಟ್ ನೀಡಿದರೆ ಅದರಲ್ಲಿ ಆಕ್ಷೇಪಿಸುವಂತಹನೂ ಇಲ್ಲ. ಕಾರ್ಯಕ್ರಮಕ್ಕೆ ಹೋದವರನ್ನು ನಿಂದಿಸುವುದೂ ಸಲ್ಲ.

ಈ ಗಿಫ್ಟ್ ಕಾರ್ಯಕ್ರಮದಿಂದ ಅಶೋಕ್ ರೈಯವರು ರಾಜಕೀಯವಾದ ಲಾಭ ಪಡೆಯುತ್ತಿದ್ದಾರೆ ಎನ್ನುವವರೂ ಇದ್ದಾರೆ. ಉಚಿತ ಕೊಡುವುದು ಅಕಸ್ಮಾತ್ ರಾಜಕೀಯ ಲಾಭವಾಗಿ ಪರಿಣಮಿಸುತ್ತದೆ ಎನ್ನುವುದಾದರೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಹಾಗೆ ಹೇಳುವವರೆಲ್ಲಾ ತಮ್ಮ ತಮ್ಮ ಪಕ್ಷ ಹಾಗೂ ಅಭ್ಯರ್ಥಿಗಳ ಪರವಾಗಿ ಕಿಲ್ಲೆ ಮೈದಾನದ ಬಳಿ ನಿಂತು, ಹೋಗುವವರಿಗೆ ಬರುವವರಿಗೆ ಉಚಿತ ಗಿಪ್ಟ್ ಕೊಡಬಹುದು. ಹೇಗೂ ರಾಜಕೀಯ ಲಾಭ ಆಗುತ್ತದಲ್ಲಾ?!
ಶಾಸಕರೋ, ಮಂತ್ರಿಗಳೋ ತಪ್ಪೆಸಗಿದಾಗ ಅದನ್ನು ಸಾತ್ವಿಕವಾಗಿ ಖಂಡಿಸುವ ಅಧಿಕಾರ ಎಲ್ಲರಿಗೂ ಇದೆ. ಅಶೋಕ್ ರೈ ಕೂಡ ತಪ್ಪು ಹೆಜ್ಜೆ ಇಟ್ಟರೆ ಇಂತಹ ಖಂಡನೆಗೆ ಒಳಗಾಗಲೇಬೇಕು. ಹಾಗೆಂದು ಒಳ್ಳೆಯ ಸಂಗತಿಗಳನ್ನು ಹೇಳದೆ ಅಥವ ಪ್ರಜ್ಞಾಪೂರ್ವಕವಾಗಿ ಮರೆತು, ತಪ್ಪನ್ನಷ್ಟೇ ಗುರುತಿಸುವುದು ಟೀಕೆಯ ಮೌಲ್ಯಗಳನ್ನು ಕಡಿಮೆಯಾಗಿಸುತ್ತದೆ.

ಮೆಡಿಕಲ್ ಕಾಲೇಜು ಅಶೋಕ್ ರೈ ಅವರ ಆದ್ಯತೆ, ಪುತ್ತೂರಿನ ಅವಶ್ಯಕತೆ. ಪುತ್ತೂರಿಗರ ಕನಸು. ಅದರ ಸಾಕಾರಕ್ಕಾಗಿ ಬಗೆಬಗೆಯ ಪ್ರಯತ್ನದಲ್ಲಿ ಶಾಸಕರು ತೊಡಗಿಸಿಕೊಂಡಿದ್ದಾರೆ. ನಮ್ಮೆಲ್ಲರ ಪ್ರತಿನಿಧಿಯಾಗಿ ಮೆಡಿಕಲ್ ಕಾಲೇಜಿಗಾಗಿ ಎಡೆಬಿಡದೆ ಹೋರಾಡುವುದಕ್ಕೆ ಒಬ್ಬಾತ ನೇತಾರ ಸಿಕ್ಕಿದ್ದಾನೆ. ಓಡುವಾಗ ಗಮ್ಯ ತಲಪುವ ಧಾವಂತದಲ್ಲಿ ಶಾಸಕ ರೈ ಅವರು ತುಸು ಜಾರಿದರೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೇ ವಿನಃ ಕೈತಟ್ಟಿ ನಗಬಾರದು! ಅಷ್ಟಕ್ಕೂ ಈ ಬಾರಿಯ ಅಶೋಕ ಜನಮನ ಕಾರ್ಯಕ್ರಮ ಮೆಡಿಕಲ್ ಕಾಲೇಜಿನ ಸಾಕಾರವನ್ನೇ ಲಕ್ಷ್ಯವಾಗಿರಿಸಿಕೊಂಡಿತ್ತೆಂಬುದು ಅನೇಕರ ಗಮನಕ್ಕೂ ಬಂದಿರುತ್ತದೆ.


ಒಟ್ಟಿನಲಿ, ಪುತ್ತೂರಿನಲ್ಲೊಂದು ಮೆಡಿಕಲ್ ಕಾಲೇಜು ಆಗಬೇಕು ಎನ್ನುವ ಹಲವರ ಸದ್ಭಾವದ ಮಧ್ಯೆ, ಮೆಡಿಕಲ್ ಕಾಲೇಜು ಆಗಿಬಿಟ್ಟರೆ ಆ ಕೀರ್ತಿ ಅಶೋಕ್ ರೈ ಪಾಲಾಗುತ್ತದಲ್ಲಾ ಎಂಬ ಕೆಲವರ ನೋವು ಸಾರ್ವಜನಿಕರಿಗೆ ಭರಪೂರ ಮನರಂಜನೆ ಒದಗಿಸುತ್ತಿದೆ!

LEAVE A REPLY

Please enter your comment!
Please enter your name here