ಆರ್ಥಿಕತೆಯ ಸಂಪೂರ್ಣ ಮಾಹಿತಿ ಅರ್ಥಶಾಸ್ತ್ರದಲ್ಲಡಗಿದೆ :ಡಾ.ವಿಘ್ನೇಶ್ವರ ವರ್ಮುಡಿ
ಪುತ್ತೂರು: v ಅರ್ಥಶಾಸ್ತ್ರದಲ್ಲಿರುವ ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಯಾವ ವಸ್ತುಗಳನ್ನು ಯಾವ ಸಂದರ್ಭದಲ್ಲಿ ಖರೀದಿಸಬೇಕು ಹಾಗೂ ಯಾವ ಸಮಯದಲ್ಲಿ ಬೆಲೆ ಏರಿಕೆ ಹಾಗೂ ಇಳಿಕೆ ಉಂಟಾಗುತ್ತದೆ ಎಂಬುವುದನ್ನು ನಾವು ಅರ್ಥಶಾಸ್ತ್ರದಲ್ಲಿ ಅರಿತುಕೊಳ್ಳಬಹುದು.

ದೇಶದ ಅಭಿವೃದ್ಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆ ಅಪಾರ.ದೇಶದ ಆರ್ಥಿಕತೆಯಲ್ಲಿ ನಮ್ಮ ಜಿಲ್ಲೆಯು ದೇಶದ 8ನೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ವಿವೇಕಾನಂದ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಪೆರ್ಲ ನಲಂದಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಅರ್ಥಶಾಸ್ತ್ರ ಸಲಹಾ ಕೇಂದ್ರ ಮತ್ತು ಅರ್ಥಶಾಸ್ತ್ರ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡದ ಪಾತ್ರ ಎಂಬ ವಿಷಯದ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ನಿರ್ದೇಶಕ ಅಚ್ಯುತ ನಾಯಕ್ ಮಾತನಾಡಿ, ಪ್ರಶ್ನಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು. ಸಮಾಜಕ್ಕೋಸ್ಕರ,ದೇಶಕ್ಕೋಸ್ಕರ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಇಚ್ಛೆಯಿದ್ದರೆ ನಮ್ಮನ್ನು ನಾವು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು.ನಾವು ನಮ್ಮ ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಬೇಕು ಎಂದರು. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್,ಉಪಪ್ರಾಂಶುಪಾಲ ಪ್ರೊ.ಗಣರಾಜ ಭಟ್ ಅರ್ಥಶಾಸ್ತ್ರ ಸಂಘದ ಅಧ್ಯಕ್ಷೆ ತೃತೀಯ ಬಿ.ಎ ವಿದ್ಯಾರ್ಥಿನಿ ಅಕ್ಷತಾ, ಕಾರ್ಯದರ್ಶಿ ಮಧು ಕೆ.ಆರ್ ಹಾಗೂ ಜೊತೆ ಕಾರ್ಯದರ್ಶಿ ದ್ವಿತೀಯ ಬಿ. ಎ ವಿದ್ಯಾರ್ಥಿನಿ ಪವಿತ್ರಾ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಸ್ವಾಗತಿಸಿ, ಉಪನ್ಯಾಸಕ ಗೋವಿಂದ ಶರ್ಮ ವಂದಿಸಿ, ಚೈತನ್ಯ ಚಂದಪ್ಪ ನಿರೂಪಿಸಿದರು.