ರಾಮಕುಂಜ: ಕುಸಿತವಾಗುವ ಭೀತಿಯಲ್ಲಿದ್ದ ಕೊಯಿಲ ಗ್ರಾಮ ಪಂಚಾಯತಿ ಪಕ್ಕದಲ್ಲಿದ್ದ ಕೊಯಿಲ ಜನತಾ ಕಾಲೋನಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ತೆರವುಗೊಳಿಸಲಾಗಿದೆ.
1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆ ಮೂಲಕ ನಿರ್ಮಾಣವಾದ ಈ ಟ್ಯಾಂಕ್ 50 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕೊಯಿಲ ಜನತಾ ಕಾಲೋನಿ ಮತ್ತು ಪರಿಸರದ ಸುಮಾರು 40ಕ್ಕೂ ಅಧಿಕ ಮನೆಗಳಿಗೆ ಈ ಟ್ಯಾಂಕ್ ಮೂಲಕವೇ ನೀರು ಸರಬರಾಜು ಆಗುತ್ತಿತ್ತು. ಇಲ್ಲಿ ಮನೆ ನಿರ್ಮಾಣ ಆಗುತ್ತಿದ್ದಂತೆ ಮಣ್ಣು ತೆಗೆದ ಕಾರಣದಿಂದಾಗಿ ಧರೆ ಟ್ಯಾಂಕ್ನ ಸನಿಹಕ್ಕೆ ಬಂದು ನಿಂತಿತ್ತು. ಧರೆ ಟ್ಯಾಂಕ್ನಿಂದ ಕೇವಲ 8 ಅಡಿ ತನಕ ಕುಸಿತವಾಗಿತ್ತು. ಇದರಿಂದಾಗಿ ಆಗಾಗ್ಗೆ ಸುರಿಯುತ್ತಿದ್ದ ಭಾರೀ ಮಳೆಗೆ ಕುಸಿದು ಬೀಳುವ ಹಂತದಲ್ಲಿದ್ದು, ಈ ಟ್ಯಾಂಕ್ನ ಅಡಿಯಲ್ಲಿ 10ಕ್ಕೂ ಅಧಿಕ ಮನೆಗಳಿದ್ದು, ಮನೆ ಮಂದಿಯನ್ನು ಆತಂಕಕ್ಕೆ ಒಳಪಡಿಸಿತ್ತು. ಇದರ ಅಪಾಯದ ಬಗ್ಗೆ ಪಂಚಾಯತಿ ಆಡಳಿತ, ಕಂದಾಯ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು. ಪಂಚಾಯತಿ ಇದರ ತೆರವಿಗೆ ಟೆಂಡರು ಕರೆದಿದ್ದು, ಅದರಂತೆ ಇದರ ತೆರವು ಕಾರ್ಯ ತಿಂಗಳ ಹಿಂದೆ ಆರಂಭವಾಗಿ ಇದೀಗ ಪೂರ್ಣ ಪ್ರಮಾಣದಲ್ಲಿ ತೆರವು ಕಾರ್ಯ ನಡೆದಿದೆ.
