ಪುತ್ತೂರು: ಕೆಮ್ಮಿಂಜೆಗೆ ತೆರಿಗೆ ಜಾಸ್ತಿ, ಸರ್ವೆ ಮುಂಡೂರಿಗೆ ತೆರಿಗೆ ಕಡಿಮೆ ಇದೆ, ಈ ರೀತಿಯ ತಾರತಮ್ಯ ಯಾಕೆ ಎಂದು ಬಾಬು ಕಲ್ಲಗುಡ್ಡೆ ಅವರು ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಅಧ್ಯಕ್ಷತೆಯಲ್ಲಿ ಅ.23ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಕಟ್ಟಡಗಳಿಗೆ, ಸರ್ವೆ ಮತ್ತು ಮುಂಡೂರಿಗಿಂತ ಕೆಮ್ಮಿಂಜೆಯಲ್ಲಿ ಜಾಸ್ತಿ ತೆರಿಗೆ ವಿಧಿಸಲಾಗುತ್ತಿದೆ, ಇದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಕೆಮ್ಮಿಂಜೆ ಗ್ರಾಮಾಂತರ ಪ್ರದೇಶವಾದರೂ ನಗರ ವ್ಯಾಪ್ತಿಗೆ ಸೇರಿದ ಸರ್ವೇ ನಂಬರ್ ರೀತಿಯಲ್ಲೇ ತೆರಿಗೆ ವಿಧಿಸಲಾಗುತ್ತಿದೆ, ಈ ರೀತಿಯ ತಾರತಮ್ಯವನ್ನು ಒಪ್ಪಲು ಸಾಧ್ಯವಿಲ್ಲ, ಇದರ ಬಗ್ಗೆ ಸೂಕ್ತ ನಿರ್ಧಾರ ಆಗಬೇಕು ಎಂದು ಅವರು ಹೇಳಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲರಿಗೂ ತೆರಿಗೆ ಪದ್ದತಿ ಒಂದೇ ರೀತಿಯಲ್ಲಿರಬೇಕು, ಒಂದೊಂದು ಗ್ರಾಮಕ್ಕೆ ಒಂದೊಂದು ರೀತಿಯ ತೆರಿಗೆ ವಿಧಿಸುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ 2022ರ ನಂತರ ಮನೆ ತೆರಿಗೆ ಸಂಗ್ರಹ ಹಾಗೂ ರಶೀದಿ ನೀಡುವಿಕೆ ಸಂಪೂರ್ಣ ಗಣಕೀಕೃತ ಆಗಿರುವುದರಿಂದ ಭೂ ಪರಿವರ್ತನೆ ಆಗಿ 9/11 ಆಗಿರುವ ಆಸ್ತಿಗಳಲ್ಲಿ ಇರುವ ಮನೆಗಳಿಂದ ಮಾತ್ರ ಮನೆ ತೆರಿಗೆ ಸಂಗ್ರಹ ಮಾಡಲು ತಂತ್ರಾಂಶದಲ್ಲಿ ಸಾಧ್ಯವಾಗುತ್ತಿದೆ. ಭೂ ಪರಿವರ್ತನೆ ಆಗಿ 9/11 ಆಗದ, ಭೂ ಪರಿವರ್ತನೆ ಆಗದ ಸ್ಥಳಗಳಲ್ಲಿ ಇರುವ, ಹಿಂದೆ ತೆರಿಗೆ ಸಂಗ್ರಹ ಮಾಡಲಾಗುತ್ತಿದ್ದ ಹಳೆಯ ಮನೆಗಳಿಂದ ತೆರಿಗೆ ಸಂಗ್ರಹ ಮಾಡಲು ಈಗ ಸಾಧ್ಯವಾಗುತ್ತಿಲ್ಲ. ಅಂತಹ ಅಸ್ತಿಗಳಿಂದ ತೆರಿಗೆ ಸಂಗ್ರಹ ಮಾಡಲು ಅಂತಹ ಆಸ್ತಿಗಳ ಮಾಲಕರ 11ಬಿ ದಾಖಲೆ ಮಾಡಿಸಿ ಅವರನ್ನು ತೆರಿಗೆ ಸಂಗ್ರಹ ವ್ಯಾಪ್ತಿಗೆ ತರುವ ಪ್ರಕ್ರಿಯೆ ಮುಂಡೂರು ಗ್ರಾ.ಪಂ ಅಧ್ಯಕ್ಷರ, ಪಿಡಿಓ ಅವರ ಬೇಜವಾಬ್ದಾರಿಯಿಂದ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಈ ನಾಲ್ಕು ವರ್ಷಗಳಲ್ಲಿ ಅವರಿಗೆ ಈ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಿಲ್ಲ, ಇದರಿಂದ ಮನೆ ತೆರಿಗೆ ಪಾವತಿಸಿ ರಶೀದಿ ಪಡೆಯಲು ಸಾಧ್ಯವಾಗದ 200ಕ್ಕೂ ಹೆಚ್ಚು ಮನೆಗಳು ಗ್ರಾ.ಪಂ ವ್ಯಾಪ್ತಿಯಲ್ಲಿ ಇದ್ದು ಜನರು ಬ್ಯಾಂಕ್ ಸಾಲ ಪಡೆಯಲು, ಆಸ್ತಿ ಪಾಲುಪಟ್ಟಿ ಮಾಡಿಕೊಳ್ಳಲು, ಅಸ್ತಿ ಮಾರಾಟ ಮಾಡಲು ಪರದಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಕಮಲೇಶ್ ಎಸ್.ವಿ ಹೇಳಿದರು. ಈ ಎಲ್ಲ ಅಸ್ತಿಗಳು ತೆರಿಗೆ ವ್ಯಾಪ್ತಿಯಿಂದ ಬಿಟ್ಟು ಹೋದ ಅಸ್ತಿಗಳ ಪಟ್ಟಿಗೆ ಹೋಗಿರುವುದರಿಂದ ಪಂಚಾಯತ್ಗೆ ಕೂಡ 4 ವರ್ಷಗಳಲ್ಲಿ 10 ಲಕ್ಷ ರೂ. ಗಳಷ್ಟು ತೆರಿಗೆ ನಷ್ಟ ಆಗಿದೆ ಎಂದು ಅವರು ಹೇಳಿದರು.
ಎಂಆರ್ಎಫ್ ಘಟಕ: ಪರ-ವಿರೋಧ ಚರ್ಚೆ
ಎಂ.ಆರ್.ಎಫ್ ಘಟಕ ಸರ್ವೆ ಗ್ರಾಮದಲ್ಲಿ ಆಗಬೇಕಾಗಿತ್ತು, ಆದರೆ ಅದು ಕೆದಂಬಾಡಿಗೆ ಶಿಫ್ಟ್ ಆಗಲು ನಮ್ಮ ಪಂಚಾಯತ್ ಸದಸ್ಯರೇ ಕಾರಣ ಎಂದು ಸದಸ್ಯ ಕರುಣಾಕರ ಗೌಡ ಎಲಿಯ ಆರೋಪಿಸಿದರು. ಎಂಆರ್ಎಫ್ ಘಟಕ ನಮ್ಮ ಗ್ರಾಮದಲ್ಲಿ ಆಗುತ್ತಿದ್ದರೆ ಇಲ್ಲಿನ ಹಲವರಿಗೆ ಅದರಲ್ಲಿ ಕೆಲಸ ಸಿಗುತ್ತಿತ್ತು, ಆದರೆ ಕೆಲವು ಸದಸ್ಯರಿಂದಾಗಿ ಅದು ನಮ್ಮಲ್ಲಿಂದ ಕೆದಂಬಾಡಿಗೆ ಹೋಗುವಂತಾಯಿತು ಎಂದು ಅವರು ಹೇಳಿದರು.
ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ನಮ್ಮವರು ಕಸ ಹೆಕ್ಕುವ ಕೆಲಸಕ್ಕೆ ಹೋಗುವುದು ಬೇಡ, ಕಲಿತು ಒಳ್ಳೆಯ ಹುದ್ದೆಗೆ ಹೋಗಲಿ, ಅದಕ್ಕಾಗಿ ನಾವು ಪ್ರಯತ್ನ ಮಾಡುವ ಎಂದು ಹೇಳಿದರು. ಎಂಆರ್ಎಫ್ ಘಟಕದ ನಿಯಂತ್ರಣ ಕೆದಂಬಾಡಿ ಗ್ರಾ.ಪಂನವರಿಗೆ ಇಲ್ಲ, ಅದರ ನಿಯಂತ್ರಣ ಸ್ಥಳೀಯ ಗ್ರಾ.ಪಂಗೆ ಇಲ್ಲ ಎಂದು ಅವರು ಹೇಳಿದರು.
ಕ್ಲಪ್ತ ಸಮಯದಲ್ಲಿ ಸಂಬಳ ನೀಡಬೇಕು:
ನೀರಿನ ಸಿಬ್ಬಂದಿಗಳಿಗೆ ಕ್ಲಪ್ತ ಸಮಯದಲ್ಲಿ ವೇತನ ಪಾವತಿ ಮಾಡಬೇಕೆಂದು ಕಮಲೇಶ್ ಎಸ್.ವಿ ಹೇಳಿದರು. ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಉತ್ತರಿಸಿ ಪಿಡಿಓ ಬದಲಾವಣೆ ಮೊದಲಾದ ಸಂದರ್ಭಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ವಿಳಂಬ ಆಗಿರಬಹುದು ಎಂದು ಹೇಳಿದರು.
ಪೈಪ್ ಜೋಡಿಸುವ ಮೆಷಿನ್ ತೆಗೆಯುವ ಯೋಗ್ಯತೆಯಿಲ್ಲವೇ?:
ಕೆಮ್ಮಿಂಜೆ ಗ್ರಾಮದ ಕೊರುಂಗು, ದಂಡ್ಯನಕುಕ್ಕು ಮೊದಲಾದ ಕಡೆ ನೀರಿನ ಪೈಪ್ ಆಗಾಗ ಕಡಿತಗೊಳ್ಳುವುದರಿಂದ ಭಾರೀ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಬಾಬು ಕಲ್ಲಗುಡ್ಡೆ ಹೇಳಿದರು. ಸಮಸ್ಯೆ ಬಗೆಹರಿಯಬೇಕಾದರೆ ಪೈಪ್ ಜೋಡಿಸುವ ಮೆಷಿನ್ ತೆಗೆಯಬೇಕು, ಆದರೆ ಆ ಯೋಗ್ಯತೆ ನಮ್ಮ ಪಂಚಾಯತ್ಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹದಗೆಟ್ಟ ರಸ್ತೆ ದುರಸ್ತಿ ಮಾಡಬೇಕು:
ರೆಂಜಲಾಡಿ-ಭಕ್ತಕೋಡಿ ರಸ್ತೆ ಹಾಗೂ ಕೂಡುರಸ್ತೆ-ತಿಂಗಳಾಡಿ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸವಾರರಿಗೆ ತೀವ್ರ ಸಮಸ್ಯೆ ಆಗುತ್ತಿದೆ, ಈ ಎರಡೂ ರಸ್ತೆಗಳನ್ನು ದುರಸ್ತಿ ಮಾಡಲು ಸರಕಾರಕ್ಕೆ ಬರೆಯಬೇಕು ಎಂದು ಕರುಣಾಕರ ಗೌಡ ಎಲಿಯ ಹೇಳಿದರು.
ರುದ್ರಭೂಮಿ ನಿರ್ವಹಣೆಗೆ ಸಿಬ್ಬಂದಿ ನೇಮಕ ಚರ್ಚೆ:
ಮುಂಡೂರು ಗ್ರಾ.ಪಂ ಅಧೀನದಲ್ಲಿರುವ ರುದ್ರಭೂಮಿ ನಿರ್ವಹಣೆಗೆ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡುವ ಬಗ್ಗೆ ಮತ್ತು ಅವರಿಗೆ ನೀಡುವ ವೇತನದ ಬಗ್ಗೆ ಚರ್ಚೆ ನಡೆಯಿತು. ಕಮಲೇಶ್ ಎಸ್.ವಿ ಮಾತನಾಡಿ ಕೇವಲ ಸ್ಮಶಾನ ನಿರ್ವಹಣೆಗೆ ಮಾತ್ರ ಬಳಸಿಕೊಳ್ಳುವ ಬದಲು ಸ್ವಚ್ಛತೆ ನಿರ್ವಹಣೆಗೂ ಅವರನ್ನು ಬಳಸಿಕೊಂಡು ನಿರ್ದಿಷ್ಟ ಸಂಬಳ ನಿಗದಿಪಡಿಸುವುದು ಉತ್ತಮ ಎಂದು ಹೇಳಿದರು. ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಮಾತನಾಡಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಮುಂಡೂರು ರುದ್ರಭೂಮಿಯಲ್ಲಿ ಶವ ಸಂಸ್ಕಾರದ ವ್ಯವಸ್ಥೆಗಳು ಪೂರ್ಣಗೊಂಡಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟನೆ ಹೊರಡಿಸಬೇಕೆಂದು ಸದಸ್ಯ ಉಮೇಶ್ ಗೌಡ ಅಂಬಟ ಹೇಳಿದರು.
ರಸ್ತೆ ಬದಿ ಹುಲ್ಲು ತೆರವು: ಅಭಿನಂದನೆ ಸಲ್ಲಿಕೆ
ಕಮಲೇಶ್ ಎಸ್.ವಿ ಮಾತನಾಡಿ ಕಲ್ಪಣೆಯಿಂದ ಭಕ್ತಕೋಡಿ ವರೆಗೆ ರಸ್ತೆ ಬದಿಯಲ್ಲಿ ಬೃಹದಾಕಾರದಲ್ಲಿ ಬೆಳೆದಿದ್ದ ಹುಲ್ಲು, ಪೊದೆಗಳನ್ನು ಸಂತೋಷ್ ಕಲ್ಪಣೆ ಮತ್ತು ತಂಡದವರು ತೆರವುಗೊಳಿಸಿರುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಹೇಳಿ ‘ಸುದ್ದಿ ವೆಬ್ಸೈಟ್ ವರದಿ’ಯನ್ನು ಸಭೆಯಲ್ಲಿ ಓದಿದರು. ನಮ್ಮ ಪಂಚಾಯತ್ ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ, ಅವರಿಗೆ ನಾವು ಅಭಿನಂದನೆ ಸಲ್ಲಿಸಬೇಕು ಎಂದು ಅವರು ಹೇಳಿದರು. ಇದು ನಿಜವಾಗಿಯೂ ನಮಗೆ ನಾಚಿಕೆಗೇಡು, ಏಕೆಂದರೆ ಗ್ರಾ.ಪಂನಿಂದ ಅಂತಹ ಕೆಲಸಗಳು ಆಗುತ್ತಿಲ್ಲ ಎಂದು ಅವರು ಹೇಳಿದರು. ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಮಾತನಾಡಿ ಆ ಯುವಕರು ರಸ್ತೆ ಬದಿ ಸ್ವಚ್ಛಗೊಳಿಸುವ ವಿಷಯ ತಿಳಿದಿದೆ, ನನ್ನಲ್ಲಿ ಹೇಳಿದ್ದಾರೆ, ಅವರಿಗೆ ಏನಾದರೂ ಕೊಡುವ ಅಂತ ನಾನು ಹೇಳಿದ್ದೇನೆ ಎಂದು ಹೇಳಿದರು. ಗ್ರಾಮದ ಹಲವು ಕಡೆ ರಸ್ತೆಯನ್ನು ಹುಲ್ಲು ಆಕ್ರಮಿಸಿಕೊಂಡು ಸಮಸ್ಯೆಯಾಗುತ್ತಿದೆ ಎಂದು ಕರುಣಾಕರ ಗೌಡ ಎಲಿಯ ಹೇಳಿದರು.ಕಮಲೇಶ್ ಎಸ್.ವಿ ಮಾತನಾಡಿ ಸಣ್ಣ ಜೆಸಿಬಿ ಮೂಲಕ ರಸ್ತೆ ಬದಿಯ ಹುಲ್ಲು, ಪೊದೆಗಳನ್ನು ತೆಗೆಯಬೇಕು, ಮೆಷಿನ ಮೂಲಕ ಮಾಡಿದರೆ ಕೆಲವೇ ದಿನದಲ್ಲಿ ಮತ್ತೆ ಹುಲ್ಲು ಬೆಳೆಯುತ್ತದೆ, ಸಣ್ಣ ಜೆಸಿಬಿ ಮೂಲಕ ಗ್ರಾ.ಪಂ ವತಿಯಿಂದ ಆ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಸದಸ್ಯೆ ದೀಪಿಕಾ ಅವರಿಂದ ಭೋಜನ ಕೂಟ:
ಸದಸ್ಯೆ ದೀಪಿಕಾ ಚಂದ್ರಶೇಖರ್ ಕಲ್ಲಗುಡ್ಡೆ ಅವರು ಸದಸ್ಯರಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮದ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು. ಚಿಕನ್, ಫಿಶ್ ಖಾದ್ಯಗಳನ್ನು ಒಳಗೊಂಡ ಭರ್ಜರಿ ಭೋಜನ ನೀಡಿದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ಮಹಮ್ಮದ್ ಆಲಿ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ದುಗ್ಗಪ್ಪ ಕಡ್ಯ, ಅರುಣ ಎ.ಕೆ, ರಸಿಕಾ ರೈ ಮೇಗಿನಗುತ್ತು, ಕಮಲ, ವಿಜಯ ಕರ್ಮಿನಡ್ಕ, ದೀಪಿಕಾ ಸಿ.ಕೆ, ಪ್ರೇಮಾ ಎಸ್, ಸುನಂದ ಉಪಸ್ಥಿತರಿದ್ದರು. ಪಿಡಿಓ ಜಗದೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಸೂರಪ್ಪ ವರದಿ, ಅರ್ಜಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.