ಪುತ್ತೂರು: ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರಕ್ಕೊಳಪಟ್ಟ ಗಾಣಿಗ ಸಮಾಜದ ಯುವ ಸಮುದಾಯವನ್ನು ಒಟ್ಟುಗೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಇದರ ವತಿಯಿಂದ ಅ.26ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ನಡೆದ ‘ಗಾಣಿಗ ಪ್ರೀಮಿಯರ್ ಲೀಗ್’ (ಜಿಪಿಎಲ್-2025) ಕ್ರಿಕೆಟ್ ಪಂದ್ಯಾಟವು ಸಂಜೆ ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಂಡಿತ್ತು.

ದುಬೈ ಉದ್ಯಮಿ ಶಿವಶಂಕರ ನೆಕ್ರಾಜೆಯವರ ಪ್ರಧಾನ ಪ್ರಾಯೋಜಕತ್ವದೊಂದಿಗೆ ನಡೆದ ಲೀಗ್ ಮಾದರಿಯಲ್ಲಿ ಪಂದ್ಯಾಟದಲ್ಲಿ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರ ವ್ಯಾಪ್ತಿಯ ಗಾಣಿಗ ಸಮುದಾಯ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪಾಟಾಳಿ ಪ್ಯಾಂಟರ‍್ಸ್ ಸುಳ್ಯ ವಿನ್ನರ್ ಆಗಿದೆ. ಗಾಣಿಗ ಟೈಟಾನ್ ವಿಟ್ಲ ರನ್ನರ್, ವಾಣಿಯನ್ ವಾರಿಯರ‍್ಸ್ ಪುತ್ತೂರು ಎರಡನೇ ರನ್ನರ್ ಹಾಗೂ ಪಾಟಾಳಿ ಚಾಲೆಂಜರ‍್ಸ್ ಮಂಗಳೂರು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಸುಳ್ಯ ಪಾಟಾಳಿ ಪ್ಯಾಂಟರ‍್ಸ್‌ನ ಮಹೇಶ್ ಮ್ಯಾನ್ ಆಪ್ ದ ಮ್ಯಾಚ್, ದೀಕ್ಷಿತ್ ಬೆಸ್ಟ್ ಬ್ಯಾಟ್ಸ್ ಮೆನ್, ವಿಟ್ಲ ಗಾಣಿಗ ಟೈಟಾನ್ ತಂಡ ಮಹೇಶ್ ಅಡ್ಕಾರ್ ಬೆಸ್ಟ್ ಬೌಲರ್, ಅಶ್ಚಥ್ ಪಾಟಾಳಿ ಕುದ್ದುಪದವು ಬೆಸ್ಟ್ ಕ್ಯಾಚರ್, ಮಂಗಳೂರು ತಂಡ ಸೂರಜ್ ಎಮರ್ಜಿಂಗ್ ಪ್ಲೇಯರ್, ಪಾಟಾಳಿ ಪ್ಯಾಂಟರ‍್ಸ್ ಸುಳ್ಯ ತಂಡದ ದೀಕ್ಷಿತ್ ಅತೀ ಹೆಚ್ಚು ಸಿಕ್ಸರ್ ಹಾಗೂ ಮ್ಯಾನ್ ಆಪ್ ದ ಸೀರಿಸ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ದೀಕ್ಷಿತ್ ಮಂಗಳೂರು, ಅವಿನಾಶ್ ಬಂಟ್ವಾಳ, ಪ್ರಕಾಶ್ ಬಂಟ್ವಾಳ, ನವೀನ್ ಬಂಟ್ವಾಳ ತೀರ್ಪಗಾರರಾಗಿ ಸಹಕರಿಸಿದ್ದರು. ಅಜೇಯ್‌ರಾಜ್ ಮಂಗಳೂರು ಹಾಗೂ ಕಿರಣ್ ಬಂಟ್ವಾಳ ವೀಕ್ಷಣೆ ವಿವರಣೆ ನೀಡಿದರು.
ಯುವಕರಿಗಾಗಿ ಕ್ರಿಕೆಟ್ ಪಂದ್ಯಾಟದ ಜೊತೆಗೆ ಸಮಾಜ ವಿದ್ಯಾರ್ಥಿಗಳಿಗಾಗಿ ಸಮುದಾಯದ ಎಲ್ಲಾ ಮಕ್ಕಳಿಗೂ ತಮ್ಮ ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆ ಪ್ರದರ್ಶಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ‘ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ’ಯಲ್ಲಿ ಸಮುದಾಯದ ನೂರಾರು ವಿದ್ಯಾರ್ಥಿಗಳು ನಾನಾ ವಿಜ್ಞಾನ ಮಾದರಿಗಳು ಪ್ರದರ್ಶಿಸಿದ್ದರು. ಜೊತೆಗೆ ಗಾಣಿಗ ಸಮುದಾಯದ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಪ್ರಚಾರ ಮಾಡುವ ದೃಷ್ಟಿಯಿಂದ ‘ವ್ಯವಹಾರ ಪ್ರದರ್ಶನ’ದಲ್ಲಿ ಸಮಾಜ ಬಾಂಧವರ 10ಕ್ಕೂ ಅಧಿಕ ವ್ಯವಹಾರ ಮಳಿಗೆಗಳೂ ಪಂದ್ಯಾಟದಲ್ಲಿ ವಿಶೇಷವಾಗಿತ್ತು.
ಗಣ್ಯರ ಭೇಟಿ:
ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಮಂದಿ ಮುಖಂಡರು ಆಗಮಿಸಿ ಕಾರ್ಯಕ್ರಮಗಳಿಗೆ ಶುಭಹಾರೈಸಿದರು.
ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮುದಾಯವನ್ನು ಯಾವ ರೀತಿಯಲ್ಲಿ ಜೋಡಿಸಿಕೊಂಡು ಸಮಾಜಕ್ಕೆ ಶಕ್ತಿ ನೀಡಬಹುದು ಎಂಬುದನ್ನು ಕ್ರಿಕೆಟ್ ಪಂದ್ಯಾಟ ಆಯೋಜನೆಯ ಮೂಲಕ ಗಾಣಿಗ ಸಮುದಾಯ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಕ್ರೀಡೆಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯಲು ವಿಜ್ಞಾನ ಮಾದರಿಯ ತಯಾರಿಕಾ ಸ್ಪರ್ಧೆ, ಸಮಾಜ ಬಾಂಧವರು ಆರ್ಥಿಕವಾಗಿ ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆಯುವ ಅದ್ಬುತ ಕಲ್ಪಣೆಯೊಂದಿಗೆ ಆಯೋಜನೆಯಾಗಿರುವುದು ಶ್ಲಾಘನೀಯವಾಗಿದ್ದು, ಸಮುದಾಯವನ್ನು ಶಕ್ತಿಯುತವಾಗಿ ಸಂಘಟಿಸಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕ್ರೀಡಾ ಕಾರ್ಯದರ್ಶಿ ರವಿಚಂದ್ರ ಬಟ್ರಕುಮೇರು ಮಾತನಾಡಿ, ಸಮುದಾಯದವರ ಎಲ್ಲರ ಪರಿಚಯವಾಗಬೇಕು, ಎಲ್ಲರೂ ಒಟ್ಟು ಸೇರಬೇಕೆಂಬ ಉದ್ದೇದಿಂದ ಸಮುದಾಯ ಬಾಂಧವರ ಒಗ್ಗಟ್ಟಿಗಾಗಿ ಪಂದ್ಯಾಟ ಆಯೋಜಿಸಲಾಗಿದೆ. ಇದಕ್ಕಾಗಿ ಎಲ್ಲರ ನೆಚ್ಚಿನ ಆಟವಾಗಿರುವ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇದು ಸಂಘಟಿತವಾಗಿ ಆಯೋಜನೆಯಾಗಿದ್ದು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ದಿನ ನಮ್ಮ ಜೀವನದ ಸಾರ್ಥಕ ದಿನವಾಗಿದೆ. ಪಂದ್ಯಾಟಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗೌರವಾರ್ಪಣೆ:
ಜಿಲ್ಲಾ ಸಂಘದ ವೆಬ್‌ಸೈಟ್‌ನ್ನು ಡಿಸೈನ್ ಮಾಡಿದ ದೀಕ್ಷಿತ್ ಬೆಳ್ಳಾರೆ, ಪಂದ್ಯಾಟದ ನೇತೃತ್ವದ ವಹಿಸಿದ್ದ ಜಿಲ್ಲಾ ಕ್ರೀಡಾಕಾರ್ಯದರ್ಶಿ ರವಿಚಂದ್ರ ಭಟ್ರುಕುಮೇರು, ಪ್ರಸಾದ್ ಕಲ್ಲರ್ಪೆ, ಹರೀಶ್‌ರಾಜ್, ದಿನೇಶ್ ಅಳಿಕೆ, ವಿಜೇತ್ ಬಿ.ಎಸ್. ಮಂಗಳೂರು, ಮನೋಹರ್ ಪುತ್ತೂರು, ಸಚಿನ್ ಕಲ್ಮಡ್ಕ, ತಂಡದ ಮ್ಹಾಲಕರಾದ ಹರೀಶ್ ಮಂಗಳೂರು, ರಾಧೇಶ್ ಸೀತಂಗೋಲಿ, ಚಂದ್ರಶೇಖರ ಉದಂತಡ್ಕ, ರಾಜೇಶ್, ಸುನಿಲ್‌ಕುಮಾರದ ವಾಟೆ, ದಿನೇಶ್ ಕುದ್ದುಪದವು, ಉದಯ ಕುಮಾರ್ ದಂಬೆ, ರಮೇಶ್ ಬಾಕಿತ್ತಿಮಾರ್ ಇವರುಗಳನ್ನು ಗೌರವಿಸಲಾಯಿತು.
ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಮ ಮುಗ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಪುತ್ತಿಲ ಪರಿವಾರ ಟ್ರಸ್ಟ್‌ನ ಕೋಶಾಧಿಕಾರಿ ರೂಪೇಶ್ ನಾೖಕ್, ರಬ್ಬರ್ ಬೋರ್ಡ್ ನಿವೃತ್ತ ಉಪ ಆಯುಕ್ತ ಬಾಲಕೃಷ್ಣ ಎಸ್., ಸುಳ್ಯ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಭಾಜನತೊಟ್ಟಿ, ನಿವೃತ್ತ ಯೋಧ ಸುಬ್ಬಪ್ಪ ಪಟ್ಟೆ, ಶಂಕರ ಪಾಟಾಳಿ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಶಂಕರ ಪಾಟಾಳಿ ಮೊಟ್ಟೆತ್ತಡ್ಕ, ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಯಂ.ಎ., ಗೂಡ್ಸ್ ವಾಹನ ಚಾಲಕ-ಮ್ಹಾಲಕ ಸಂಘದ ಅಧ್ಯಕ್ಷ ರಘುರಾಮ ಪಾಟಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು. ದಿನಕರ್ ಬಹುಮಾನ ವಿಜೇತರ ಪಟ್ಟಿ ಓದಿದರು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಭೋಜನವನ್ನು ಒದಗಿಸಲಾಗಿತ್ತು. ಮಕ್ಕಳು, ಮಹಿಳೆಯುರು, ವಯಸ್ಕರು, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಸೇರಿದಂತೆ ಸಾವಿರಾರು ಮಂದಿ ಸಮಾಜ ಬಾಂಧವರು ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.