ಪುತ್ತೂರು: 3 ವರ್ಷದ ಹಿಂದಿನ ಪೋಕ್ಸೋ ಪ್ರಕರಣ – ಆರೋಪಿಗೆ ಜೈಲು ಶಿಕ್ಷೆ

0

ಪುತ್ತೂರು: 3 ವರ್ಷದ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ದೌರ್ಜನ್ಯಕ್ಕೆ ಸಂಬಂಧಿಸಿ ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ಆರೋಪಿ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಚೇತನ್ ಹೆಚ್ ಬಿ ಅವರ ಆರೋಪ ಸಾಬೀತಾಗಿದ್ದು, ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


2022ರ ಜ.14ರಂದು ಆರೋಪಿ ಚೇತನ್ ಹೆಚ್ ಬಿ ಅವರು ಅಪ್ರಾಪ್ತ ಬಾಲಕಿಯೋರ್ವರನ್ನು ಏರ್‌ಟೆಲ್ ನೆಟ್‌ವರ್ಕ್ ತೋರಿಸುವ ನೆಪದಲ್ಲಿ ಆಕೆಯನ್ನು ಪುಸಲಾಯಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕುರಿತು ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸುಳ್ಯ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ ಆರ್ ರವರು ಪ್ರಕರಣದ ತನಿಖೆ ನಡೆಸಿ ಮಾನ್ಯ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಗ್ಗೆ ವಿವರವಾದ ಸಾಕ್ಷ್ಯ ನೀಡಿರುತ್ತಾರೆ. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣವನ್ನು ತನಿಖೆ ನಡೆಸಿ ಪ್ರಕರಣದಲ್ಲಿ ಒಟ್ಟು 14 ಸಾಕ್ಷಿಗಳನ್ನು ವಿಚಾರಿಸಿದೆ. ಬಾಲಕಿಯು ಆರೋಪಿ ವಿರುದ್ದ ಸವಿವರವಾದ ಹೇಳಿಕೆ ನೀಡಿದ್ದರು. ನ್ಯಾಯಾಧೀಶೆ ಸರಿತಾ ಡಿ. ಯವರು ಇತ್ತಂಡಗಳ ವಾದ ಆಲಿಸಿ ಆರೋಪಿಗೆ ಭಾ.ದಂ.ಸಂ. ಕಲಂ 354(ಎ) ಮತ್ತು ಪೋಕ್ಸೋ ಕಾಯ್ದೆ ಕಲಂ 12 ರಡಿ ಅಪರಾಧಕ್ಕೆ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ. 10ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿರುತ್ತಾರೆ. ದಂಡದ ಮೊತ್ತದಲ್ಲಿ ರೂ. 5ಸಾವಿರವನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಲಾಗಿದೆ. ನೊಂದ ಬಾಲಕಿಗೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 3570 ಯಡಿಯಲ್ಲಿ ರೂ. 30ಸಾವಿರವನ್ನು ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯವು ಆದೇಶಿಸಿದೆ. ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.

LEAVE A REPLY

Please enter your comment!
Please enter your name here