ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆಯು ಅ.27ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ಮಾತನಾಡಿ, ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿ ವಿಚಾರಗಳಲ್ಲಿಯೂ ಕೋರ್ಟ್‌ಗೆ ಹೋಗುವುದು ಅಸಾಧ್ಯ. ಕೆಲವರಿಗೆ ಪೊಲೀಸ್ ಠಾಣೆಗೂ ಹೋಗುವ ಭಯವಿರುತ್ತದೆ.ಇದಕ್ಕಾಗಿ ಮಹಿಳಾ ಸಾಂತ್ವನ ಕೇಂದ್ರವಿದ್ದು, ಇಲ್ಲಿ ಪ್ರಥಮ ಹಂತವಾಗಿ ನಾಲ್ಕು ಗೋಡೆಗಳ ಮಧ್ಯೆ ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಹದಿಹರೆಯದ ಮಕ್ಕಳಲ್ಲಿ ಬದಲಾವಣೆಗಳು ಆಗುತ್ತಿದು, ಪೋಷಕರು ಮಕ್ಕಳ ಬಗ್ಗೆ ನಿಗಾವಹಿಸಬೇಕು.ಹೆಣ್ಣು ಮಕ್ಕಳ ದೈಹಿಕ ಬದಲಾವಣೆಯ ಬಗ್ಗೆ ಗಮನಿಸಬೇಕು. ನಂತರ ಆಶಾ ಕಾರ್ಯಕರ್ತೆಯರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವುದು ಮಾತ್ರವಲ್ಲ ಅವರಲ್ಲಿ ಆಪ್ತವಾಗಿ ಮಾತನಾಡಬೇಕು.ಮಕ್ಕಳೊಂದಿಗೆ ಪೋಷಕರು ಕಾಲಾವಕಾಶ ನೀಡಬೇಕು ಎಂದ ಅವರು, ಯಾವುದೇ ದಾಖಲೆಗಳಿಲ್ಲದೇ ಮಕ್ಕಳನ್ನು ದತ್ತು ಪಡೆದುಕೊಳ್ಳುವಂತಿಲ್ಲ. ಕೌಟುಂಬಿಕ ಸಮಸ್ಯೆಗಳನ್ನು ಇಲಾಖೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಪಿಡಿಓ ನಾಗೇಶ್ ಎಂ ರವರು, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಂತ ನಿಧಿಯಲ್ಲಿ ಆರ್ಯಾಪು ಗ್ರಾ.ಪಂನಲ್ಲಿ ಅತೀ ಹೆಚ್ಚು ಅನುದಾನ ಬಳಕೆಯಾಗುತ್ತಿದೆ.ಮಹಿಳೆಯರ ಸ್ವ ಉದ್ಯೋಗಕ್ಕೆ ಪೂರಕವಾಗಿ ಆರ್ಯಾಪು ಗ್ರಾ.ಪಂನಲ್ಲಿ ಮಾತ್ರ ಹೊಲಿಗೆ ಯಂತ್ರ ವಿತರಿಸುತ್ತಿದೆ. ಸರಕಾರದ ಯೋಜನೆಗಳು ಸದುಪಯೋಗವಾಗಬೇಕು. ಆಯಾ ವಾರ್ಡ್‌ಗಳ ಸದಸ್ಯರು ಗುರುತಿಸಿದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಉಚಿತವಾಗಿ ವಿತರಿಸಲಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಉಚಿತವಾಗಿ ದೊರೆತಿದೆ ಎಂದು ಬಳಕೆ ಮಾಡದಿದ್ದಲ್ಲಿ ಅದನ್ನು ಹಿಂಪಡೆದು ಅವಶ್ಯಕತೆಯಿರುವವರಿಗೆ ವಿತರಿಸಲಾಗುವುದು ಎಂದರು.
ಅಂಚೆ ಇಲಾಖೆಯ ಆನಂದ ಗೌಡ ಅಂಚೆ ಇಲಾಖೆಯಲ್ಲಿರುವ ಉಳಿತಾಯ ಯೋಜನೆ ಹಾಗೂ ವಿಮೆಯ ಬಗ್ಗೆ ಮಾಹಿತಿ ನೀಡಿದರು.ಗ್ರಾಮಾಂತರ ಠಾಣೆ ಹೆಡ್ ಕಾನ್‌ಸ್ಟೇಬಲ್ ಶಾಲಿನಿ ಮಹಿಳಾ ದೌರ್ಜನ್ಯ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು.
15 ಮಂದಿಗೆ ಹೊಲಿಗೆ ಯಂತ್ರ ವಿತರಣೆ:
ಪಂಚಾಯತ್‌ನ ಸ್ವಂತ ನಿಧಿಯಲ್ಲಿ 15 ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ಸಭೆಯಲ್ಲಿ ವಿತರಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಗೀತಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸರಸ್ವತಿ, ರೇವತಿ, ಹರೀಶ್ ನಾಯಕ್, ಯತೀಶ್ ದೇವ, ಶ್ರೀನಿವಾಸ ರೈ, ಯಾಕೂಬ್ ಯಾನೆ ಸುಲೈಮಾನ್, ವಸಂತ ‘ಶ್ರೀದುರ್ಗ’, ಕಸ್ತೂರಿ, ಕಲಾವತಿ, ಗ್ರಾಮಾಂತರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋನಪ್ಪ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.