ಮನುಷ್ಯನ ಮನಸ್ಸು ಇದ್ದಂತೆ ಆತನ ಜೀವಿತ ಇರುತ್ತದೆ-ಡಾ.ಗಣೇಶ ಪ್ರಸಾದ್ ಮುದ್ರಾಜೆ
ನಮ್ಮ ಮನಸ್ಸಿಗೆ, ಆತ್ಮಕ್ಕೆ ಕೂಡ ಆರೋಗ್ಯ ಬೇಕು-ವಂ| ಲಾರೆನ್ಸ್ ಮಸ್ಕರೇನ್ಹಸ್
ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಲಯನ್ಸ್ ಇಂಟರ್ನ್ಯಾಶನಲ್ ಇವರ ಸಹಯೋಗದೊಂದಿಗೆ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನ್ಹಸ್ರವರು ಆರೋಗ್ಯ ಇದ್ದರೆ ಜೀವನ ಸಂತೋಷಭರಿತ. ನಾವು ಕೇವಲ ದೇಹಕ್ಕೆ ಮಾತ್ರ ಆರೋಗ್ಯ ಬೇಕು ಎಂದು ಯೋಚಿಸುತ್ತೇವೆ. ಆದರೆ ನಮ್ಮ ಮನಸ್ಸಿಗೆ, ಆತ್ಮಕ್ಕೆ ಕೂಡ ಉತ್ತಮ ಆರೋಗ್ಯ ಬೇಕು. ಸದೃಢ ಮನಸ್ಸು ಇದ್ದಲ್ಲಿ ಸದೃಢ ದೇಹವೂ ಇರುತ್ತದೆ ಎನ್ನುವುದನ್ನು ಗಮನಿಸಬೇಕು. ಕೆಟ್ಟದ್ದನ್ನು ಮಾಡಿದಾಗ ಶರೀರದ ಮೇಲೆ ಪರಿಣಾಮವಾಗುತ್ತದೆ. ಆದ್ದರಿಂದ ಪ್ರೀತಿ ನಮ್ಮ ಹೃದಯದಲ್ಲಿದ್ದಾಗ ಒಳ್ಳೆಯದನ್ನೇ ಮಾಡುತ್ತದೆ. ಆಗ ನಮ್ಮ ಮನಸ್ಸು ಆರೋಗ್ಯಕರವಾಗಿರುತ್ತದೆ. ಮನಸ್ಸು, ದೇಹ, ಆತ್ಮದ ಆರೋಗ್ಯ ಚೆನ್ನಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯದ ಕಡೆ ಗಮನ ನೀಡಿ ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ, ಮಾನಸಿಕ ತಜ್ಞ ಹಾಗೂ ನರರೋಗ ತಜ್ಞರಾದ ಡಾ.ಗಣೇಶ ಪ್ರಸಾದ್ ಮುದ್ರಾಜೆಯವರು ಮಾತನಾಡಿ ಮನುಷ್ಯನ ಮನಸ್ಸು ಇದ್ದಂತೆ ಆತನ ಜೀವಿತ ಇರುತ್ತದೆ ಎಂಬ ಮಾತಿದೆ. ಆರೋಗ್ಯ ಎಂದರೆ ಕೇವಲ ಶಾರೀರಿಕ ಮಾತ್ರವಲ್ಲ, ಬದಲಾಗಿ ಆಧ್ಯಾತ್ಮಿಕ, ಸಾಮಾಜಿಕ ಆರೋಗ್ಯವು ಮುಖ್ಯವಾಗಿದೆ. ಮನಸ್ಸಿಗೆ ಸಂಕಟವಾದರೆ ಅದು ಅವ್ಯಕ್ತವಾಗಿರುತ್ತದೆ. ಆದರೆ ಮನುಷ್ಯ ಆ ಅವ್ಯಕ್ತ ಭಾವನೆಯನ್ನು ಬೇರೆಯವರಲ್ಲಿ ಹಂಚಿಕೊಂಡಾಗ ಮಾತ್ರ ಅದು ತಕ್ಷಣಕ್ಕೆ ಪರಿಹಾರ ಸಿಗದಿದ್ದರೂ ಮನಸ್ಸು ಹಗುರವಾಗುತ್ತದೆ. ಅದೇ ರೀತಿ ಸಂತಸವನ್ನು ಹಂಚಿದಾಗ ಅದು ದ್ವಿಗುಣವಾಗುತ್ತದೆ. ಆದ್ದರಿಂದ ಮಾನಸಿಕ ತಜ್ಞನಾಗಿ ಸಮಾಜಕ್ಕೆ ಜಾಗೃತಿ ನೀಡುವುದು ನನ್ನ ಕರ್ತವ್ಯ ಎಂದರು. ಪರೀಕ್ಷಾ ಭಯ, ಹಿಸ್ಟೀರಿಯಾ, ಕೆಲವರಿಗೆ ಮಾನಸಿಕ ಒತ್ತಡದಿಂದ ಬರುವ ತಲೆನೋವು, ಋತುಸ್ರಾವದ ಸಮಸ್ಯೆಯಿಂದ ಬರುವ ಮಾನಸಿಕ ಅನಾರೋಗ್ಯ, Anxiety neurosis, ಖಿನ್ನತೆಯ ಲಕ್ಷಣಗಳನ್ನು ತಿಳಿಸಿದ ಅವರು ಅದಕ್ಕೆ ಸೂಕ್ತವಾದ ಪರಿಹಾರಗಳಾದ ಆಸ್ತಿಕ ನಂಬಿಕೆ, ಧ್ಯಾನ ಮಾಡುವುದು, ದೈನಂದಿನ ನಿದ್ರೆ, ಇತರರಲ್ಲಿ ವಿಶ್ವಾಸ ಇರಿಸಿಕೊಳ್ಳುವುದು ಇವುಗಳ ಕುರಿತು ವಿಚಾರ ಮಂಡಿಸಿದರು.
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷ ಅಂತೋನಿ ಒಲಿವೆರ, ಲಯನ್ಸ್ ಕ್ಲಬ್ ವಿಸ್ತರಣಾಧಿಕಾರಿ ಲ್ಯಾನ್ಸಿ ಮಸ್ಕರೇನ್ಹಸ್, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಕಾರ್ಯದರ್ಶಿ ಲೀನಾ ಮಚಾದೊ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ವೇತಾ ಕೆ, ಶಾಲಾ ಮುಖ್ಯೋಪಾಧ್ಯಾಯಿನಿ ರೋಸ್ಲಿನ್ ಲೋಬೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಿಗೆ ಶಾಲು ಹೊದಿಸಿ ಹಣ್ಣು ಹಂಪಲನ್ನು ನೀಡಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಅಂತೋನಿ ಒಲಿವೆರ ವಂದಿಸಿದರು. ಶಿಕ್ಷಕಿ ರೂಪಾ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು.