*ಅಂತರ್‌ಶಾಲಾ ಮಟ್ಟದಲ್ಲಿ 15 ವೈವಿಧ್ಯಮಯ ಸ್ಪರ್ಧೆಗಳು
*ಒಟ್ಟು 19 ಪ್ರೌಢಶಾಲೆಗಳಿಂದ 454 ಸ್ಪರ್ಧಾಳುಗಳ ಭಾಗವಹಿಸುವಿಕೆ
*ವಿದಿಶಾ 2K25 ಸಮಗ್ರ ಪ್ರಶಸ್ತಿ — ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ಪುತ್ತೂರು.
*ಪ್ರಥಮ ರನ್ನರ್‌ಅಪ್ ಪ್ರಶಸ್ತಿ — ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆ,ಪುತ್ತೂರು.
*ದ್ವಿತೀಯ ರನ್ನರ್‌ಅಪ್ ಪ್ರಶಸ್ತಿ –ಇಂದ್ರಪ್ರಸ್ಥ ವಿದ್ಯಾಲಯ,ಉಪ್ಪಿನಂಗಡಿ.
ಸೂಪರ್ ಸ್ಟಾರ್ ಪ್ರಶಸ್ತಿ– ಎಲ್ಲ ಸ್ಪರ್ಧೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆ — ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ಪುತ್ತೂರು
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ– ಜಯಂತ್ ನಡುಬೈಲು
ಅಕ್ಷಯ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಉದ್ಯೋಗಾವಕಾಶಗಳ ಲಭ್ಯತೆ — ಲೋಕೇಶ್ ಬೆತ್ತೋಡಿ
ಉತ್ತಮ ಸಂಸ್ಕಾರಯುತ ವಿದ್ಯಾಭ್ಯಾಸ– ಪಠ್ಯ-ಪಠ್ಯೇತರ ಚಟುವಟಿಕೆಗಳ ಮೂಲಕ ಕೌಶಲ್ಯಾಭಿವೃಧ್ದಿ — ಬಿ.ಎಲ್ ಜನಾರ್ದನ,ಆಲಂಕಾರು
ಪುತ್ತೂರು: ಮೌಲ್ಯಾಧಾರಿತ, ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ನವೀನ್ ಭಂಡಾರಿ ಅವರು ಅಂತರ್‌ಶಾಲಾ ಮಟ್ಟದ ಫೆಸ್ಟ್ ವಿದಿಶಾ 2K25 ನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನಾಂಗ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ತಮಗೆ ದೊರಕುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕಲಾವತಿ ಜಯಂತ್ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅಕ್ಷಯ ಸಂಸ್ಥೆ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುತ್ತಿದೆ ಎನ್ನುತ್ತಾ ಶುಭ ಹಾರೈಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ.ಪಕ್ಕಳ ಅವರು ಮಾತನಾಡಿ, ಅಕ್ಷಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ವೃತ್ತಿಪರ ಪದವಿಗಳು ಅವರ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತಿವೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಸ್ವಾಗತಿಸಿ ಉಪನ್ಯಾಸಕಿ ದೀಪಶ್ರೀ ವಂದಿಸಿದರು. ಉಪನ್ಯಾಸಕಿ ಪರಿಮಳಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಮೂಲಕ ಯುವ ಪೀಳಿಗೆಯ ಬದುಕನ್ನು ಹಸನಾಗಿಸುವುದು ಅಕ್ಷಯ ಶಿಕ್ಷಣ ಸಂಸ್ಥೆಯ ಉದ್ದೇಶ ಎಂದರು.
ಪುತ್ತೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಶ್ರೀ ಚೈತನ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ IIT — JEE/NEET ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ನಾವು ಒದಗಿಸಿಕೊಡುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್‌ನ ಪ್ರಾಂಶುಪಾಲ ಲೋಕೇಶ್ ಬೆತ್ತೋಡಿ ಅವರು ಮಾತನಾಡುತ್ತಾ ಅಕ್ಷಯ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಿವೆ. ಇಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.
ಇನ್ನೊಬ್ಬರು ಮುಖ್ಯ ಅತಿಥಿಗಳಾದ ಕಡಬ ಜ್ಞಾನ ಸುಧಾ ವಿದ್ಯಾಲಯದ ಕರೆಸ್ಪಾಂಡೆಂಟ್ ಬಿ. ಎಲ್ ಜನಾರ್ದನ ಆಲಂಕಾರು ಅವರು, ಉತ್ತಮ ಸಂಸ್ಕಾರಯುತ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಮುಂದೆ ಉತ್ತಮ ಪ್ರಜೆಗಳಾಗಿ ತಾವು ವಿದ್ಯಾಭ್ಯಾಸ ಪಡೆದ ಸಂಸ್ಥೆ, ಶಿಕ್ಷಕರು ಮತ್ತು ಹೆತ್ತವರ ಬಗ್ಗೆ ಪ್ರೀತಿ ಗೌರವ ಹೊಂದಿರುವ ಹೃದಯವಂತರಾಗಬೇಕು ಜೊತೆಗೆ ದೇಶವನ್ನೂ ಪ್ರೀತಿಸಬೇಕು ಅಂತಹ ವಿದ್ಯಾಭ್ಯಾಸ – ಕೌಶಲ್ಯಾಭಿವೃದ್ದಿ ತರಬೇತಿ ಅಕ್ಷಯ ಸಂಸ್ಥೆಯಲ್ಲಿ ಸಿಗುತ್ತಿದೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕಿ ಪವಿತ್ರ ಧನ್ಯವಾದ ಸಮರ್ಪಣೆ ಗೈದರು.ಉಪನ್ಯಾಸಕಿ ಸುಪ್ರಭಾ ನಿರೂಪಿಸಿದರು.