ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ ಸುಭಾಷ್ ರೈ ಬೆಳ್ಳಿಪ್ಪಾಡಿ
ಪುತ್ತೂರು: ಬನ್ನೂರು ಅಲುಂಬುಡದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ರೋಟರಿ ಕ್ಲಬ್ ಸ್ವರ್ಣ ಪುತ್ತೂರು ಇದರ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಭಾರತಾಂಬೆಯ ಮುಂದೆ ದೀಪ ಪ್ರಜ್ವಲಿಸಿ, ಭಾರತಮಾತೆ ಹಾಗೂ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಬಳಿಕ ಮಾತನಾಡಿದರು. ಆಂಗ್ಲ ಭಾಷೆ ವ್ಯಾಮೋಹದಿಂದಾಗಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಇತರ ರಾಜ್ಯದ ಜನರು ಆಯಾ ರಾಜ್ಯದ ಭಾಷೆಯನ್ನು ಬಿಟ್ಟುಕೊಡದೆ ಮಾತನಾಡುತ್ತಾರೆ. ನಾವು ಅವರಲ್ಲಿ ಅವರ ರಾಜ್ಯದ ಭಾಷೆಯಲ್ಲಿ ಸಂವಹನ ಮಾಡುತ್ತೇವೆ. ಇದು ಸಲ್ಲದು. ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನವಿದ್ದು, ನಾವು ನಮ್ಮ ಭಾಷೆಯಲ್ಲಿ ಮಾತನಾಡುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಶಾಲಾ ನಿರ್ದೇಶಕ, ನ್ಯೂಸ್ ಪುತ್ತೂರು ಚಾನೆಲ್ ನಿರ್ದೇಶಕ ಸೀತಾರಾಮ ಕೇವಳ ಅವರು ಮಾತನಾಡಿ, ಸಮೃದ್ಧವಾದ ಕನ್ನಡವು ಉಳಿಯ ಬೇಕಾದರೆ, ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಬೇಕು ಎಂದರು.
ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿ ಕನ್ನಡವು ನಮ್ಮ ರಾಜ್ಯದ ಆಡಳಿತ ಭಾಷೆ, ವ್ಯವಹಾರಕ್ಕೆ ಇತರ ಭಾಷೆ ಅನಿವಾರ್ಯವಾದರೂ ಕನ್ನಡವನ್ನು ಹೆಚ್ಚೆಚ್ಚು ಬಳಸಬೇಕು ಎಂದರು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಅವರು ಮಾತನಾಡಿ ಶ್ರೇಷ್ಠವಾದ ಕನ್ನಡ ಭಾಷೆಯು ಬರವಣಿಗೆ ಮತ್ತು ಪದಪ್ರಯೋಗ ಒಂದೇ ರೀತಿಯಾಗಿದೆ. ಆಂಗ್ಲ ಭಾಷೆಯ ಉಚ್ಚಾರಣೆಯು ಕೆಲವು ಕಡೆ ಬರವಣಿಗೆಯಲ್ಲಿ ಇರುವಂತೆ ಇರುವುದಿಲ್ಲ. ಸುಂದರವಾದ ಕನ್ನಡ ಭಾಷೆಯ ವರ್ಣಮಾಲೆಯು ವೈಜ್ಞಾನಿಕವಾಗಿಯೂ ಶ್ರೇಷ್ಠತೆಯನ್ನು ಮೆರೆದಿದೆ ಎಂದರು.
ಶಾಲಾಡಳಿತ ಸಮಿತಿ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಇತಿಹಾಸ ಅತ್ಯಂತ ಹಳೆಯದು. ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡದ ಮಹತ್ವವನ್ನು ಎಲ್ಲರೂ ಮನನ ಮಾಡಿಕೊಳ್ಳಬೇಕು ಎಂದರು. ಶಿಕ್ಷಕಿ ಯಶುಭ ರೈ ಕನ್ನಡ ನಾಡು ನುಡಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ರಾಧಾ ನಾಡು ನುಡಿಯನ್ನು ಪ್ರತಿಪಾದಿಸುವ ಹಾಡನ್ನು ಹಾಡಿದರು.
ವಿದ್ಯಾರ್ಥಿಗಳಾದ ಅದ್ವಿಕ್ ಬಂಜನ್, ಗನ್ವಿತ್ ಮತ್ತು ಚವನ್ ಕನ್ನಡ ಭಾಷಣವನ್ನು ಮಾಡಿದರು. ರಾಜ್ಯೋತ್ಸವ ಬಗ್ಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮಧ್ಯೆ ಕನ್ನಡಕ್ಕೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಿ ಬಹುಮಾನ ವಿತರಿಸಲಾಯಿತು. ಮೈಸೂರಿನ ಸರಕಾರಿ ಸಹಾಯಕ ಅಭಿಯೋಜಕರಾದ ಜನಾರ್ಧನ ಬೆಟ್ಟಂಪಾಡಿ ಅವರು ಕೆ. ಎಸ್. ನಿಸಾರ್ ಅಹಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ” ಹಾಡನ್ನು ಪ್ರಸ್ತುತಪಡಿಸಿದರು. ಅವರಿಗೆ ಕನ್ನಡ ಶಾಲು ಅರ್ಪಿಸಿ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾದ ಪುತ್ತೂರು ನೋಟರಿ ನ್ಯಾಯವಾದಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಡಿಂಬಾಳ, ಪುತ್ತೂರು ರೋಟರಿ ಪೂರ್ವಾಧ್ಯಕ್ಷ ಸುಂದರ ರೈ ಬೊಳ್ಕಾಡಿ ಮತ್ತು ಪೋಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಆಡಳಿತ ಸಮಿತಿ ಸಂಚಾಲಕ ಎ. ವಿ. ನಾರಾಯಣ, ಉಪಾಧ್ಯಕ್ಷ ಉಮೇಶ ಮಲುವೇಳು, ಮುಖ್ಯ ಶಿಕ್ಷಕ ಅಮರನಾಥ್, ಶಾಲಾ ನಿರ್ದೇಶಕಿ ವನಿತಾ ಎ.ವಿ ಮುಂತಾದವರು ಉಪಸ್ಥಿತರಿದ್ದರು. ಪುಟಾಣಿಗಳಾದ ಚಾರ್ವಿ, ವಿಭಾ, ಆರುಷಿ ಮತ್ತು ರುಶಾಂಕ್ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಚಿತಾ ವಂದಿಸಿದರು. ಶಿಕ್ಷಕಿ ರೀಮಾ ಲೋಬೊ, ಪ್ರಕ್ಷುತಾ, ಹಿತಾಶ್ರೀ ಸಹಕರಿಸಿದರು. ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.
