ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ದೊರೆಯುತ್ತಿದೆ: ಶಾಸಕ ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಸರಕಾರದ ಯೋಜನೆಗಳು ಬಡವರ ಪರ ಯೋಜನೆಗಳು, ಸರಕಾರದ ಪ್ರತಿಯೊಂದು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದ್ದು ಇದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಶಾಸಕರ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಗಾರೆ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಕಾರ್ಮಿಕ ಇಲಾಖೆಯಿಂದ ಎಲ್ಲಾ ಕಾರ್ಮಿಕ ವರ್ಗಕ್ಕೂ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಹಿಂದೆ ಗಾರೆ ಕಾರ್ಮಿಕರಿಗೆ ಪರಿಕರಗಳನ್ನೊಳಗೊಂಡ ಕಿಟ್ ವಿತರಣೆ ಮಾಡಲಾಗಿದ್ದು ಇದೀಗ ಅದೇ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ ನಡೆಯುತ್ತಿದೆ. ಬಡ ಕಾರ್ಮಿಕ ವರ್ಗದ ರಕ್ಷಣೆಯೇ ಸರಕಾರದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಕಾರ್ಮಿಕರಿಗೆ ಸರಕಾರದ ಸೌಲಭ್ಯವನ್ನು ನೀಡುತ್ತಿರಲಿಲ್ಲ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಡವರ್ಗದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
400 ಮಂದಿಗೆ ಕಿಟ್ ವಿತರಣೆ
ಕಾರ್ಯಕ್ರಮದಲ್ಲಿ 400 ಮಂದಿ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ ಮಾಡಲಾಯಿತು.ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಮತ್ತು ಕಾರ್ಮಿಕ ಕಾರ್ಡುಗಳನ್ನು ಹೊಂದಿರುವ ಎಲ್ಲಾ ಗಾರೆ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ ನಡೆಯಿತು.
ಗ್ಯಾರಂಟಿ ಯೋಜನೆ ಬದುಕು ಕಲ್ಪಿಸಿದೆ
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಬದುಕನ್ನು ಕಲ್ಪಿಸಿದೆ. ಪ್ರತೀ ಮನೆಗೂ ಈ ಸೌಲಭ್ಯ ದೊರಕಿರುವುದರಿಂದ ಸಂಕಷ್ಟದಲ್ಲಿರುವ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಗೃಹಜ್ಯೋತಿ, ಗೃಹಲಕ್ಷಿ, ಅನ್ನಭಾಗ್ಯ, ಯುವನಿದಿ, ಶಕ್ತಿ ಯೋಜನೆಗಳಿಂದಾಗಿ ಇಂದು ರಾಜ್ಯದಲ್ಲಿ ಜನರ ಬಡತನ ಕಡಿಮೆಯಾಗಿದೆ. ಇದುವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವ ಸರಕಾರವೂ ಇಂತಹ ಯೋಜನೆಗಳನ್ನು ಜಾರಿಗೆ ತಂದಿಲ್ಲ, ಇದು ಬಡವರ ಏಳಿಗೆಗಾಗಿ ಕಾಂಗ್ರೆಸ್ ಸರಕಾರ ಜಾರಿ ತಂದ ಯೋಜನೆಗಳಾಗಿದೆ ಎಂದು ಶಾಸಕರು ಹೇಳಿದರು.
ಪುತ್ತೂರಿಗೆ ಯಾಕೆ ಮೆಡಿಕಲ್ ಕಾಲೇಜು ತಂದಿಲ್ಲ?
ಪುತ್ತೂರಿನಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ ಪುತ್ತೂರಿಗೆ ಅವರು ಏನು ಕೊಡುಗೆಯನ್ನು ನೀಡಿದ್ದಾರೆ? ಉನ್ನತ ಹುದ್ದೆಗೇರಿದವರಿಗೆ ಪುತ್ತೂರಿಗೆ ಮೆಡಿಕಲ್ ಕಾಲೇಜು ತರಬಹುದಿತ್ತು. ಕರ್ನಾಟಕದ 22 ಜಿಲ್ಲೆಗಳಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆರಂಭವಾಗಿದೆ. ದ ಕ ಜಿಲ್ಲೆಯನ್ನು ಯಾಕೆ ಕಡೆಗಣಿಸಿದ್ದಾರೆ? ಈ ಹಿಂದೆ ಇಲ್ಲಿ ಅಧಿಕಾರದಲ್ಲಿದ್ದವರು ಪುತ್ತೂರನ್ನು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ರೀಲ್ ಬಿಟ್ಟದ್ದು ಮಾತ್ರ ಇನ್ನೇನು ಮಾಡಿದ್ದಾರೆ ಎಂದು ಶಾಸಕರು ಪ್ರಶ್ನಿಸಿದರು. ಮೆಡಿಕಲ್ ಕಾಲೇಜು ಅಶೋಕ್ ರೈ ಗೆ ಬೇಕಾಗಿಲ್ಲ, ಇಲ್ಲಿನ ಜನತೆಗೆ ಬೇಕಾಗಿ ನಾನು ಇಷ್ಟ ಹಠದಲ್ಲಿ ಅದನ್ನು ಮಂಜೂರು ಮಾಡಿಸಿದ್ದು, ಮೆಡಿಕಲ್ ಕಾಲೇಜು ಬಂದರೆ ಇಲ್ಲಿನ ಬಡವರಿಗೆ ಲಾಭವೇ ಹೊರತು ಅಶೋಕ್ ರೈ ಗೆ ಏನೂ ಲಾಭವಿಲ್ಲ. ಅಧಿಕಾರದಲ್ಲಿರುವಾಗ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ತರಬೇಕೆಂದು ಉದ್ದೇಶ ಇಟ್ಟುಕೊಂಡಿದ್ದೇನೆ ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.
ಮಕ್ಕಳಿಗೆ ಉದ್ಯೋಗ ಕೊಡಿಸಿ
ನಿಮ್ಮ ಮಕ್ಕಳಿಗೆ ಕಷ್ಟಪಟ್ಟು ವಿದ್ಯೆ ಕೊಡಿಸಿದ್ದೀರಿ ಅವರಿಗೆ ಉದ್ಯೋಗ ಸಿಗಬೇಕಾದರೆ ಇಲ್ಲಿ ಉದ್ಯಮಗಳು ಆರಂಭವಾಗಬೇಕು. ನಿಮ್ಮ ಮಕ್ಕಳು ಯಾರ್‍ಯಾರ್‍ದೋ ಹಿಂದೆ ಹೋಗಿ ಅವರ ಜೀವನ ಹಾಳಾಗದಂತೆ ನೋಡಿಕೊಳ್ಳಿ. ವಿದ್ಯೆ ಕಲಿತು ಉದ್ಯೋಗ ಸಿಗದೇ ಇದ್ದಾಗ ಆತ ಸಮಾಜದಲ್ಲಿ ಕೆಟ್ಟವರೊಂದಿಗೆ ಸಹವಾಸ ಬೆಳೆಸಿ ಸಮಾಜಘಾತುಕನಾಗುವ ಆತಂಕವಿದ್ದು ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ ಎಂದು ಶಾಸಕರು ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗಣಪತಿ ಹೆಗ್ಡೆ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಭಾರತ್ ಕಾರ್ಮಿಕ ಸಂಘದ ಅಧ್ಯಕ್ಷ ಅಶ್ರಫ್, ಬಿಎಂಎಸ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪುರಂದರ್ ರೈ, ನವಕರ್ನಾಕ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಶ್ ಉಪಸ್ಥಿತರಿದ್ದರು. ಗಣಪತಿ ಹೆಗ್ಡೆ ಸ್ವಾಗತಿಸಿದರು. ಶಾಸಕರ ಕಚೇರಿ ಸಿಬಂದಿಗಳಾದ ರಚನಾ, ವಿನೋದ್ ಕೊಳ್ತಿಗೆ, ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
