ಕಡಬ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಕೊಯಿಲದ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಕೊಯಿಲ ಗ್ರಾಮದ ನಿವೃತ್ತ ಸೈನಿಕರೋರ್ವರಿಗೆ ಮೊದಲಿನಿಂದಲೂ ಪರಿಚಯವಿದ್ದ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಮಹಿಳೆಯ ಬಳಿ ಪತ್ನಿಗೆ ಉದ್ಯೋಗದ ಬಗ್ಗೆ ಮಾತನಾಡಿದಾಗ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿನಮ್ಮಗಟ್ಟನ ಹಳ್ಳಿ ಗ್ರಾಮದ ವ್ಯಕ್ತಿಯೋರ್ವರನ್ನು ಪರಿಚಯಿಸಿದ್ದರು. ಅವರ ಬಳಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಸಂಸ್ಥೆಯಲ್ಲಿ ಉದ್ಯೋಗದ ಬಗ್ಗೆ ಮಾತನಾಡಿದಾಗ ರೂ 8 ಲಕ್ಷ ನೀಡಿದ್ದಲ್ಲಿ ಕೆ ಎಂಎಫ್ ನಲ್ಲಿ ಖಾಲಿ ಇದ್ದ ಹುದ್ದೆಯನ್ನು ಕೊಡಿಸುವುದಾಗಿ ತಿಳಿಸಿದ್ದು, ರೂ 5 ಲಕ್ಷ ಮೊದಲು ಹಾಗೂ ಹುದ್ದೆ ದೊರಕಿದ ನಂತರ 3 ಲಕ್ಷ ನೀಡಬೇಕೆಂದು ತಿಳಿಸಿದ ಕಾರಣ 2023ರ ಜುಲೈ 11 ರಂದು 2 ಲಕ್ಷ ರೂ ನೀಡಿದ್ದು, ನಂತರ ಆಗಸ್ಟ್ 22 ರಂದು ಮತ್ತೆ 3 ಲಕ್ಷ ರೂ ಹಣವನ್ನು ನೀಡಿದ್ದರು. ಹಣ ಪಡೆದುಕೊಂಡ ವ್ಯಕ್ತಿ ಬಳಿ ಕೆಲಸದ ಬಗ್ಗೆ ವಿಚಾರಿಸಿದಾಗ ಶೀಘ್ರದಲ್ಲಿ ನೇಮಕಾತಿ ಪತ್ರ ನೀಡುವುದಾಗಿ ತಿಳಿಸಿದ್ದು, ಆತನಲ್ಲಿ ಹಣವನ್ನು ಮರಳಿ ನೀಡುವಂತೆ ಕೇಳಿದಾಗ ಒಂದೆರಡು ಬಾರಿ ಹಣ ನೀಡುವುದಾಗಿ ತಿಳಿಸಿ, ಈವರೆಗೂ ಹಣ ಹಿಂತಿರುಗಿಸಿರುವುದಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ: 74/2025. ಕಲಂ: 420 IPC ಯಂತೆ ಪ್ರಕರಣ ದಾಖಲಾಗಿದೆ.
