ʼಪುತ್ತೂರಿನಲ್ಲಿ ಸಂಘಟನಾತ್ಮಕವಾಗಿ ಬಿಜೆಪಿಯನ್ನು ಗಟ್ಟಿ ಮಾಡಲು ಅವಕಾಶʼ ಅಟಲ್ ವಿರಾಸತ್ ಪೂರ್ವಭಾವಿ ಸಭೆಯಲ್ಲಿ ಸತೀಶ್ ಕುಂಪಲ

0


*ವಾಜಪೇಯಿ ಅವರು ಬಿಜೆಪಿಯೂ ಆಡಳಿತಕ್ಕೆ ಬರಬಹುದೆಂಬ ಧೈರ್ಯ ತುಂಬಿದವರು – ಕ್ಯಾ| ಬ್ರಿಜೇಶ್ ಚೌಟ

ಪುತ್ತೂರು: ನವಂಬರ್ 19ರಂದು ಪುತ್ತೂರಿನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ಧಿ ಜಿಲ್ಲಾ ಕಾರ್ಯಕ್ರಮ ’ಅಟಲ್ ವಿರಾಸತ್’ ನಡೆಯಲಿದೆ. ಜಿಲ್ಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕರ್ತರು, ಅಭಿಮಾನಿಗಳು, ಅಟಲ್‌ಜಿ ಅವರ ಅಭಿಮಾನಿಗಳನ್ನು ಭಾಗವಹಿಸುವಂತೆ ಮಾಡಬೇಕು. ಪುತ್ತೂರಿನಲ್ಲಿ ಸಂಘಟನಾತ್ಮಕವಾಗಿ ಬಿಜೆಪಿ ಗಟ್ಟಿಯನ್ನಾಗಿಸಲು ಇದು ಒಂದು ಅವಕಾಶ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಹೇಳಿದರು.


ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ನ.19ರಂದು ನಡೆಯುವ ಅಟಲ್ ವಿರಾಸತ್ ಕಾರ್ಯಕ್ರಮವನ್ನು ಉದ್ದೇಶಿಸಿ ಕಲ್ಲೇಗ ಭಾರತ್‌ ಮಾತಾ ಸಮುದಾಯ ಭವನದಲ್ಲಿ ನ.7ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಪೂರ್ವವಾಗಿ ಪುತ್ತೂರಿನ ಚಟುವಟಿಕೆ ನೋಡಿದಾಗ ಬಿಜೆಪಿ ಪುತ್ತೂರಿನಲ್ಲಿ ಎಷ್ಟು ಗಟ್ಟಿಯಾಗಿದೆ ಎಂಬುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಗ್ರಾಮ, ಬೂತ್‌ಗಳಲ್ಲಿ ಪೂರ್ವ ಭಾವಿ ಸಿದ್ಧತಾ ಸಭೆ ನಡೆದಿರುವುದು ತಿಳಿದು ಬಂದಿದೆ. ಪುತ್ತೂರಿಗೆ ಶಕ್ತಿ ತರಿಸಲು ಜಿಲ್ಲೆಯ ನಾಯಕರು, ಜನಪ್ರತಿನಿಧಿಗಳು ಇರುತ್ತಾರೆ. ಈ ನಿಟ್ಟಿನಲ್ಲಿ ಒಂದು ನಿಮಿಷವನ್ನೂ ವ್ಯರ್ಥ ಮಾಡುವಂತಿಲ್ಲ ಎಂದರು.


ಗ್ರಾಮ ಗ್ರಾಮಗಳ ಅಭಿವೃದ್ದಿಗೆ ಆರಂಭದ ಹೆಜ್ಜೆ ಇಟ್ಟವರು:
ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಗ್ರಾಮ ಗ್ರಾಮಗಳ ಅಭಿವೃದ್ಧಿಗೆ ಆರಂಭದ ಹೆಜ್ಜೆ ಇಟ್ಟವರು. ಇವತ್ತು ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಮುಂದುವರಿಸುತ್ತಿದ್ದಾರೆ. ವಾಜಪೇಯಿ ಅವರು ಈ ದೇಶಕ್ಕೆ ಹೊಸತನ ಕೊಟ್ಟವರು. ಶಾಲೆಗಳಿಗೆ ಮೂಲಭೂತ ಸೌಕರ್ಯ ಸಿಗಲು ವಾಜಯಪೇಯಿ ಅವರು ಕಾರಣ. ಮನೆ ಮನೆಗೆ ಅನಿಲ ಸಂಪರ್ಕ ಸಹಿತ ಸಾವಿರಾರು ಯೋಜನೆಗಳನ್ನು ಅವರು ನೀಡಿದ್ದಾರೆ. ಆದರೆ ಇವತ್ತು ರಾಜ್ಯದಲ್ಲಿ ರಾಜ್ಯ ಸರಕಾರಕ್ಕೆ ರಸ್ತೆ ಅಭಿವೃದ್ಧಿ ಬಿಡಿ ಗುಂಡಿ ಮುಚ್ಚಲು ಹಣವಿಲ್ಲದಂತಾಗಿದೆ ಎಂದರು. ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶದಾದ್ಯಂತ 150 ಸ್ಥಳಗಳಲ್ಲಿ ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡುವ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿದೆ ಎಂದರು.

ವಿಧಾನ ಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ಪುತ್ತೂರಿನ ಪ್ರಭಾರಿ ಸುನಿಲ್ ಆಳ್ವ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಗರಸಭೆ ಸದಸ್ಯೆ ಗೌರಿ ಬನ್ನೂರು ವಂದೇ ಮಾತರಂ ಹಾಡಿದರು. ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ವಂದಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here