ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ : ತಾ|ಅಮೆಚೂರು ಕಬಡ್ಡಿ ಅಸೋಸಿಯೇಷನ್ ನಿಂದ ಮೈಸೂರು ವಿಭಾಗ ತಂಡಕ್ಕೆ ಜೆರ್ಸಿ ಕೊಡುಗೆ

0

ಪುತ್ತೂರು:ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜರಗುವ 14ರ ವಯೋಮಿತಿಯ ರಾಜ್ಯಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವ ಪುತ್ತೂರಿನ ಬೆಥನಿ ಪ್ರೌಢಶಾಲೆಯ ಐವರು ಕ್ರೀಡಾಪಟು ವಿದ್ಯಾರ್ಥಿನಿಯರು ಪ್ರತಿನಿಧಿಸುವ ಮೈಸೂರು ವಿಭಾಗ ತಂಡಕ್ಕೆ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜೆರ್ಸಿ(ಕ್ರೀಡಾ ಸಮವಸ್ತ್ರ) ವಿತರಣೆ ಕಾರ್ಯಕ್ರಮವು ದರ್ಬೆ ಲಿಟ್ಲ್‌ ಫ್ಲವರ್ ಶಾಲೆಯ ಸಭಾಂಗಣದಲ್ಲಿ ನ.6 ರಂದು ಸಂಜೆ ನೆರವೇರಿತು.

ಬಾಲಕೃಷ್ಣ ರೈ, ರಝಾಕ್ ಬಿ.ಎಚ್ ಪ್ರಶಸ್ತಿಗೆ ಅರ್ಹರು-ಚಂದ್ರಹಾಸ ಶೆಟ್ಟಿ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಹಾಗೂ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಕಾರ್ಯಾಧ್ಯಕ್ಷರಾದ ಎನ್.ಚಂದ್ರಹಾಸ ಶೆಟ್ಟಿರವರು ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನು ವಿತರಿಸಿ ಮಾತನಾಡಿ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಲಕೃಷ್ಣ ರೈ ಪೊರ್ದಾಳ್ ರವರಿಗೆ ನಮ್ಮ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಅಭಿನಂದನೆಗಳು. ಬಾಲಕೃಷ್ಣ ರೈ ಹಾಗೂ ಅಮರ್ ಅಕ್ಬರ್ ಅಂತೋನಿ ಕ್ರೀಡಾ ಸಂಘಟಕ ರಝಾಕ್ ಬಿ.ಎಚ್ ರವರು ಪ್ರಶಸ್ತಿ ಪಡೆಯಲು ಅರ್ಹರಾದ ವ್ಯಕ್ತಿಗಳಾಗಿದ್ದಾರೆ. ಇದರಲ್ಲಿ ರಝಾಕ್ ರವರಿಗೆ ಈ ವರ್ಷ ಪ್ರಶಸ್ತಿ ಸಿಗದಿದ್ದರೂ ಮುಂದಿನ ವರ್ಷಗಳಲ್ಲಿ ಖಂಡಿತಾ ಪ್ರಶಸ್ತಿ ದೊರೆಯಲಿದೆ. ಯಾಕೆಂದರೆ ನಮ್ಮ ಕಂಬಳ ಕ್ಷೇತ್ರದಲ್ಲಿ ವಿಜೇತರಿಗೆ ಟ್ರೋಫಿ ನೀಡಲು ಆರಂಭಿಸಿರುವುದೇ ರಝಾಕ್ ರವರು. ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಜಯಶಾಲಿಗಳಾಗಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೆ ಹೆಸರನ್ನು ತರುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಲಿಟ್ಲ್‌ ಫ್ಲವರ್ ಶಾಲೆ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ-ಸಿಸ್ಟರ್ ಐರಿನ್ ವೇಗಸ್:
ದರ್ಬೆ ಲಿಟ್ಲ್‌ ಫ್ಲವರ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಐರಿನ್ ವೇಗಸ್ ಮಾತನಾಡಿ, ನಮ್ಮ ಶಾಲೆಯ ಯಶಸ್ಸಿಗೆ ಬೆನ್ನೆಲುಬಾಗಿ ಅಮೆಚೂರ್ ಅಸೋಸಿಯೇಷನ್ ಇದೆ. ವಿದ್ಯಾರ್ಥಿ ಕ್ರೀಡಾಪಟುಗಳ ಪರಿಶ್ರಮದ ಹಿಂದೆ ಬಾಲಕೃಷ್ಣ ರೈ ಪೊರ್ದಾಲ್ ಹಾಗೂ ವಿಲ್ಮಾ ಟೀಚರ್ ಶ್ರಮವಿದೆ. ಲಿಟ್ಲ್‌ ಫ್ಲವರ್ ಸಂಸ್ಥೆ ಸಮಾಜದಲ್ಲಿ ಒಳ್ಳೆಯ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಮುಂದಿನ ವರ್ಷಗಳಲ್ಲಿ ಶಾಲೆಯು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದು ಅದೆಷ್ಟೋ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ವಿಶ್ವದಲ್ಲಿ ತಾರೆಗಳಾಗಿ ಮಿಂಚುತ್ತಿದ್ದಾರೆ ಎಂದರು.

ಬಾಲಕೃಷ್ಣ ರೈರವರಿಗೆ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಲಭಿಸಲಿ-ಆಂಜನೇಯ ರೆಡ್ಡಿ:
ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ತಂಡ ಚೆನ್ನಾಗಿರಬೇಕಾದರೆ ಅದರ ಹಿಂದೆ ಉತ್ತಮ ತರಬೇತುದಾರರು ಇರಬೇಕಾಗುತ್ತದೆ. ಅದು ಇಲ್ಲಿ ಬಾಲಕೃಷ್ಣ ರೈರವರ ಮೂಲಕ ತಂಡ ಪ್ರಜ್ವಲಿಸುವಂತೆ ಮಾಡಿದೆ. ಪಂದ್ಯಾಟದಲ್ಲಿ ಕಾಮೆಂಟ್ ಮಾಡುವುದು ಸುಲಭ ಆದರೆ ಕ್ರೀಡೆಯಲ್ಲಿ ಆಟಗಾರರು ಪಡುವ ಪರಿಶ್ರಮವನ್ನು ಮನಗಾಣಬೇಕಿದೆ. ಅರ್ಹವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ರೈರವರಿಗೆ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಲಭಿಸುವಂತಾಗಲಿ ಎಂದರು.

ಬಾಲಕೃಷ್ಣ ರೈರವರ ಪರಿಶ್ರಮಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-ಶಿವರಾಮ ಆಳ್ವ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಪಂದ್ಯಾಟ ಸಮಿತಿ ಅಧ್ಯಕ್ಷ ಶಿವರಾಮ ಆಳ್ವ ಮಾತನಾಡಿ, ಕ್ರೀಡಾಪಟುಗಳಿಗೆ ಉತ್ತಮವಾದ ತರಬೇತಿ ನೀಡಿ ಅತ್ತ್ಯುತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಿದ್ದಾರೆ ಬಾಲಕೃಷ್ಣ ರೈರವರು ಜೊತೆಗೆ ಅವರ ಪರಿಶ್ರಮಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಒಲಿದು ಬಂದಿದೆ. ಹಾಗೆಯೇ ಮತ್ತೋರ್ವ ಪ್ರತಿಭೆ ರಝಾಕ್ ಬಿ.ಎಚ್ ರವರಿಗೂ ಕೂಡ ಪ್ರಶಸ್ತಿ ಒಲಿದು ಬರಲಿ ಎಂಬುದು ನಮ್ಮ ಆಶಯ. ಒಳ್ಳೆಯ ಜನಸ್ನೇಹಿ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿರುವ ಆಂಜನೇಯ ರೆಡ್ಡಿರವರು ಮತ್ತಷ್ಟು ವರ್ಷ ಪುತ್ತೂರಿನಲ್ಲಿ ಸೇವೆಗೈಯುವ ಅವಕಾಶ ಸಿಗಲಿ ಎಂದರು.

ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲುಗುತ್ತು, ಕೋಶಾಧಿಕಾರಿ ರಝಾಕ್ ಬಿ.ಎಚ್, ಕಬಡ್ಡಿ ಪೋಷಕ ಇಬ್ರಾಹಿಂ(ಇಬ್ಬ), ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ, ಶಶಿಕಿರಣ್ ರೈ ನೂಜಿ, ಪುರುಷೋತ್ತಮ ಕೋಲ್ಫೆ, ರಾಜೇಶ್ ರೈ, ಪ್ರವೀಣ್ ಶೆಟ್ಟಿ ಅಳಕೆಮಜಲು, ಸಿದ್ಧೀಕ್ ಕೆ.ಎಂ, ರಫೀಕ್ ಎಂ.ಕೆ, ಸತ್ಯನಾರಾಯಣ ರೈ, ಲಿಟ್ಲ್‌ ಫ್ಲವರ್ ಶಾಲೆಯ ಶಿಕ್ಷಕಿ ವಿಲ್ಮಾ ಡಿ’ಸೋಜರವರು ಉಪಸ್ಥಿತರಿದ್ದರು. ಲಿಟ್ಲ್‌ ಫ್ಲವರ್ ಶಾಲೆಯ ಶಿಕ್ಷಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ನ.11:ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಬಡ್ಡಿ..
ಬೆಂಗಳೂರಿನ ಬಸವೇಶ್ವರ ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬೆಂಗಳೂರು, ಗುಲ್ಬರ್ಗ, ಬೆಳಗಾವಿ, ಮೈಸೂರು ಹೀಗೆ ನಾಲ್ಕು ತಂಡಗಳು ಕಣದಲ್ಲಿದ್ದು ಪಂದ್ಯಾಟಗಳು ಲೀಗ್ ಮಾದರಿಯಲ್ಲಿ ನಡೆಯಲಿದೆ. ಉಡುಪಿಯ 5, ಪುತ್ತೂರು ಬೆಥನಿ ಶಾಲೆಯ 5, ವಿಟ್ಲದ 2 ವಿದ್ಯಾರ್ಥಿ ಕ್ರೀಡಾಪಟುಗಳು ಮೈಸೂರು ವಿಭಾಗದಿಂದ ರಾಜ್ಯಮಟ್ಟದ ಕಬಡ್ಡಿಯಲ್ಲಿ ಪ್ರತಿನಿಧಿಸಲಿದ್ದಾರೆ. ಬೆಥನಿಯ ಐವರು, ವಿಟ್ಲದ ಈರ್ವರು ಕ್ರೀಡಾಪಟುಗಳಿಗೆ ದರ್ಬೆ ಲಿಟ್ಲ್‌ ಫ್ಲವರ್ ಶಾಲೆಯಲ್ಲಿ ಬಾಲಕೃಷ್ಣ ರೈ ಪೊರ್ದಾಲ್ ರವರು ತರಬೇತಿ ನೀಡುತ್ತಿದ್ದಾರೆ.

 ಬೆಥನಿಯ ಐವರು..
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಉಡುಪಿಯ ಐವರು ಕ್ರೀಡಾಪಟುಗಳು ಭಾಗವಹಿಸಲಿದ್ದು ಅವರು ಉಡುಪಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉಳಿದ ಬೆಥನಿ ಶಾಲೆಯ ಐವರು ಕ್ರೀಡಾಪಟುಗಳಾದ ಜ್ಯುವೆನ್ನಾ ಡ್ಯಾಝಲ್ ಕುಟಿನ್ಹಾ, ಸನ್ನಿಧಿ, ಹಾರ್ದಿಕಾ, ಜೆನಿಟ ಸಿಂಧು ಪಸನ್ನ, ಫಾತಿಮತ್ ಶೈಮಾ, ಫಾತಿಮತ್ ಅಫ್ರಾ ಹಾಗೂ ಕೀರ್ತಿ, ಚೈತನ್ಯ(ವಿಟ್ಲ)ರವರು ಭಾಗವಹಿಸಲಿದ್ದಾರೆ. ಈ ಕ್ರೀಡಾಪಟುಗಳಿಗೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ರೂ.5 ಸಾವಿರ ನಗದನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಗೌರವ ಸಲಹೆಗಾರರಾಗಿ ಆಂಜನೇಯ ರೆಡ್ಡಿ..
ಸಮವಸ್ತ್ರ ವಿತರಣೆ ಬಳಿಕ ನಡೆದ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಸಭೆಯಲ್ಲಿ  ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿರವರನ್ನು ಅಸೋಸಿಯೇಷನ್ ನ ಗೌರವ ಸಲಹೆಗಾರರಾಗಿ ನೇಮಕ ಮಾಡಲಾಯಿತು. ಅಸೋಸಿಯೇಶನ್ ನ ಗೌರವಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿಯವರು ಆಂಜನೇಯ ರೆಡ್ಡಿರವರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಂಜನೇಯ ರೆಡ್ಡಿರವರು ಪುತ್ತೂರನ್ನು ಡ್ರಗ್ಸ್ ಮುಕ್ತ ಪುತ್ತೂರು ಮಾಡಲು ಸರ್ವರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here