ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಎಂ.ರವೀಂದ್ರ ಶೇಟ್, ಗೌರವ ಪ್ರಶಸ್ತಿಗೆ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆ

0

ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಯಕ್ಷಗಾನ ಕಲಾಪೋಷಕರಿಗಾಗಿ ನೀಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಈ ಬಾರಿ ಹಿರಿಯ ಸ್ವರ್ಣೋದ್ಯಮಿ ಎಂ.ರವೀಂದ್ರ ಶೇಟ್ ಆಯ್ಕೆಯಾಗಿದ್ದಾರೆ. ಅಲ್ಲದೆ ಯಕ್ಷಗಾನ ಆಟ ಕೂಟಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಿರಿಯ ಕಲಾವಿದರಿಗೆ ನೀಡುವ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ಹಿರಿ ತಲೆಮಾರಿನ ವೇಷಧಾರಿ ಬೋಳಾರ ಸುಬ್ಬಯ್ಯಶೆಟ್ಟಿ ಅವರಿಗೆ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ನವೆಂಬರ 23 ರಿಂದ 29ರವರೆಗೆ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2025’ ಹದಿಮೂರನೇ ವರ್ಷದ ನುಡಿ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.


ಎಂ.ರವೀಂದ್ರ ಶೇಟ್

ಚಿನ್ನಾಭರಣಗಳ ವ್ಯಾಪಾರದಲ್ಲಿ ದಂತಕಥೆಯಾಗಿರುವ ದಿ|ಸುಬ್ರಾಯ ಲಕ್ಷ್ಮಣ ಶೇಟ್ (ಎಸ್.ಎಲ್.ಶೇಟ್ ) 1947ರಲ್ಲಿ ಸ್ಥಾಪಿಸಿದ ‘ಎಸ್.ಎಲ್.ಶೇಟ್ ಡೈಮಂಡ್ ಹೌಸ್’ ಸಂಸ್ಥೆಯನ್ನು ಪ್ರಸ್ತುತ ಮುನ್ನಡೆಸುತ್ತಿರುವ ಅವರ ಪುತ್ರ ಎಂ.ರವೀಂದ್ರ ಶೇಟ್ ತಮ್ಮ ಉದ್ಯಮದೊಂದಿಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವರು. ಮಂಗಳೂರಿನ ಲೇಡಿಹಿಲ್ ನಲ್ಲಿ ಸುಸಜ್ಜಿತ ಮಳಿಗೆಯನ್ನು ಹೊಂದಿರುವ ಅವರು ಗ್ರಾಹಕರೊಂದಿಗೆ ಆತ್ಮೀಯ ಸಂಬಂಧವಿರಿಸಿಕೊಂಡಿರುವುದಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಓರ್ವ ಸಹೃದಯ ಕಲಾಪೋಷಕರಾಗಿ ಯಕ್ಷಗಾನ,ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉದಾರ ಪ್ರೋತ್ಸಾಹ ನೀಡುತ್ತಿದ್ದಾರೆ‌.

ಬೋಳಾರ ಸುಬ್ಬಯ್ಯ ಶೆಟ್ಟಿ
ಯಕ್ಷಗಾನ ಆಟ – ಕೂಟಗಳಲ್ಲಿ ಸದೀರ್ಘ ಕಾಲ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟರಿಗೆ ಈಗ 85ರ ಹರೆಯ. ಕಾಸರಗೋಡು ಜಿಲ್ಲೆಯ ಮೂಡಂಬೈಲಿನಲ್ಲಿ ದಿ. ತ್ಯಾಂಪಣ್ಣ ಶೆಟ್ಟಿ ಮತ್ತು ಮಾನಕ್ಕೆ ದಂಪತಿಗೆ 1940ರಲ್ಲಿ ಜನಿಸಿದ ಅವರು ಮುಂದೆ ಹೊಟೇಲ್ ವ್ಯಾಪಾರಕ್ಕಾಗಿ ಮಂಗಳೂರಿನ ಬೋಳಾರದಲ್ಲಿ ಬಂದು ನೆಲೆಸಿದರು. ಬೋಳಾರ ತಿಮ್ಮಯ್ಯ ಸುವರ್ಣರಿಂದ ಯಕ್ಷಗಾನ ನಾಟ್ಯ ಹಾಗೂ ಬೋಳಾರ ನಾರಾಯಣ ಶೆಟ್ಟರಲ್ಲಿ ಅರ್ಥಗಾರಿಕೆಯನ್ನು ಅಭ್ಯಸಿಸಿದರು. ಸುಂಕದಕಟ್ಟೆ, ಕದ್ರಿ, ಕರ್ನಾಟಕ, ಮಧೂರು, ಪುತ್ತೂರು, ಕುಂಟಾರು, ಬೆಂಕಿನಾಥೇಶ್ವರ ಮೇಳಗಳಲ್ಲಿ ಆರೂವರೆ ದಶಕಗಳ ಕಲಾಸೇವೆ ಮಾಡಿದ್ದಾರೆ. ಮಧು – ಕೈಟಭ, ಶುಂಭ, ಶೂರ್ಪನಖಿ, ಕಂಸ, ಕೌರವ, ಅರ್ಜುನ ಮೊದಲಾದ ಪೌರಾಣಿಕ ಪಾತ್ರಗಳಲ್ಲದೆ ತುಳು ಪ್ರಸಂಗಗಳ ಪೆರುಮಳ, ಕೊಡ್ಸರಾಳ್ವ, ತಿಮ್ಮಣ್ಣಾಜಿಲ ಪಾತ್ರಗಳೂ ಅವರಿಗೆ ಖ್ಯಾತಿ ತಂದಿವೆ.


ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ನವೆಂಬರ್ 23ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಜರಗುವ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಮತ್ತು ನ.29ರ ಸಮಾರೋಪ ಸಮಾರಂಭದಲ್ಲಿ ಯಕ್ಷಾಂಗಣ ಗೌರವ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದೆಂದು ಯಕ್ಷಾಂಗಣದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here