ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

0

ಪುತ್ತೂರು: ಕ್ರೀಡೆ ಎಂದರೆ ಅದು ಕೇವಲ ಸ್ಪರ್ಧೆಯಲ್ಲ ಅದೊಂದು ಶಿಸ್ತು, ಅದೊಂದು ಶಕ್ತಿ ಅದೊಂದು ಸಮನ್ವಯ ಹೀಗಾಗಿ ನಿಜವಾದ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿದರೆ ಅವನು ದೇಶದ ಸಂಪತ್ತಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಟ್ಲದ ವಿಠ್ಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾ ಕೂಟದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ದೈಹಿಕ ಮತ್ತು ಮಾನಸಿಕ ಸ್ಥಿರತೆಗೆ ಸಹಕಾರಿಯಾದ ಕ್ರೀಡೆಯಲ್ಲಿ ಗೆದ್ದಾಗ ಸಂಭ್ರಮಿಸುತ್ತಾ, ಸೋತಾಗ ಸೋಲಿನ ಕಾರಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಹೊಸತನವನ್ನು ರೂಢಿಸಿಕೊಳ್ಳಬೇಕು ಎಂದರು.


ಗೌರವ ಅತಿಥಿಗಳಾಗಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರತಿಭಾವಂತ ಕ್ರೀಡಾಪಟು ಆದರ್ಶ್ ಎಸ್ ಪಿ ಮಾತನಾಡಿ ಕ್ರೀಡಾಪಟುಗಳ ಜೀವನ ಸುಲಭದ್ದಲ್ಲ. ಅವರ ಸಾಧನೆಯ ಹಿಂದೆ ಅಪಾರವಾದ ಪರಿಶ್ರಮವಿರುತ್ತದೆ ಅನೇಕ ಸಿಹಿ-ಕಹಿ ಘಟನೆಗಳಿರುತ್ತವೆ. ಸಾಧನಾ ಪಥದಲ್ಲಿ ಎದುರಾಗುವ ಎಡರು-ತೊಡರುಗಳನ್ನು ಮೆಟ್ಟಿ ನಿಲ್ಲುವುದು ನಿಜವಾದ ಸವಾಲಾಗಿರುತ್ತದೆ ಎಂದರು.


ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಎಷ್ಟೇ ಹಣವಿದ್ದರೂ ಅದರಿಂದ ಆರೋಗ್ಯವನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆರೋಗ್ಯವಿಲ್ಲದಿದ್ದರೆ ಜೀವನ ವ್ಯರ್ಥ. ಕ್ರೀಡೆಗಳಿಂದ ಮತ್ತು ಸೂಕ್ತ ಶಾರೀರಿಕ ಚಟುವಟಿಕೆಗಳಿಂದ ಉತ್ತಮ ಅರೋಗ್ಯವನ್ನು ಹೊಂದುವುದು ಸಾಧ್ಯ ಎಂದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಶುಭ ಹಾರೈಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ಎಲ್ಲಾ ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವವಿರಬೇಕು. ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದರು. ವಿವಿಧ ಭಾಗಗಳ ವಿವಿಧ ಜನರೊಡನೆ ಬೆರೆಯುವ ಅವಕಾಶವನ್ನು ನೀಡುವ ಕ್ರೀಡಾಕೂಟಗಳು ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದರು.


ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಆಕರ್ಷಕ ಪಥ ಸಂಚಲನವನ್ನು ಮಾಡಿದ ತಂಡಗಳನ್ನು ಗುರುತಿಸಿ ಗೌರವಿಸಲಾಯಿತು. ಇದರಲ್ಲಿ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಾಗೂ ಎಂಸಿಎ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕದ ಸಾಧನೆಯನ್ನು ಮಾಡಿದ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸಿ ಜ್ಯೊತಿಯನ್ನು ಬೆಳಗಿದರು. ಸುಮಂತ್ ಸ್ವಾಗತಿಸಿ, ಅನೂಷಾ.ಎ ವಂದಿಸಿದರು. ಎಂಸಿಎ ವಿಭಾಗದ ಡಾ.ರಾಜೇಶ್ವರಿ.ಎಂ ಹಾಗೂ ಪ್ರೊ.ನೀಮಾ.ಎಚ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here