ಸಾಕು ಪ್ರಾಣಿಗಳನ್ನು ಬೀದಿಗೆ ಬಿಟ್ಟರೆ ಕಠಿಣ ಕ್ರಮ- ನಿರ್ಣಯ
ಗ್ರಾಮ ಯೋಜನಾ ಪ್ರಾಧಿಕಾರ ರಚಿಸಲು ಸರಕಾರಕ್ಕೆ ಮನವಿ
ಪುತ್ತೂರು: ತಮ್ಮ ಮನೆಯಲ್ಲಿ ಸಾಕಲಾಗುವ ಯಾವುದೇ ಪ್ರಾಣಿಗಳನ್ನು ಕೂಡ ರಸ್ತೆಗೆ ಬಿಡಬಾರದು, ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಮನೆ ಮಾಲೀಕರ ಮೇಲೆ ಕಾನೂನು ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.ಆದ್ದರಿಂದ ಗ್ರಾಮಸ್ಥರು ಪಂಚಾಯತ್ನೊಂದಿಗೆ ಸಹಕರಿಸಬೇಕು ಎಂಬ ಮಹತ್ತರ ನಿರ್ಣಯವೊಂದನ್ನು ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನ.12 ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ಬೀದಿ ನಾಯಿಗಳ ಉಪಟಳದ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದು ಪೇಟೆ, ಜನ ನಿಬಿಡ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿತ್ತು ಅಲ್ಲದೆ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯವನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದು ಅಧಿಕಾರಿಗಳಿಗೆ ಬಿಟ್ಟಿದ್ದು ಎಂದು ಕೋರ್ಟ್ ಹೇಳಿತ್ತು ಇದರ ಬೆನ್ನಲ್ಲೆ ಒಳಮೊಗ್ರು ಗ್ರಾಪಂ ಮಹತ್ತರ ನಿರ್ಣಯವೊಂದನ್ನು ಕೈಗೊಂಡಿದ್ದು ಆರಂಭದಲ್ಲಿ ಗ್ರಾಮದ ಜನರು ತಮ್ಮ ಮನೆಯಲ್ಲಿ ಸಾಕುವ ನಾಯಿ, ಬೆಕ್ಕು, ಆಡು, ಕುರಿ, ದನ, ಎಮ್ಮೆ, ಕೋಣ ಇತ್ಯಾದಿ ಯಾವುದೇ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬಾರದು, ಸಾಕು ಪ್ರಾಣಿಗಳನ್ನು ಬೀದಿಗೆ ಬಿಟ್ಟರೆ ಮತ್ತು ಅವುಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಆ ಪ್ರಾಣಿಯ ಮಾಲೀಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು ಮತ್ತು ದಂಡನೆ ವಿಧಿಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಪೇಟೆ, ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸುವುದು ಮತ್ತು ಮಾಧ್ಯಮಗಳ ಮೂಲಕ ಪ್ರಕಟಣೆ ಕೊಡುವುದು ಎಂದು ಎಲ್ಲಾ ಸದಸ್ಯರ ಸರ್ವಾನುಮತ ಒಪ್ಪಿಗೆಯೊಂದಿಗೆ ನಿರ್ಣಯಿಸಲಾಯಿತು. ಬೀದಿ ನಾಯಿಗಳ ಉಪಟಳದ ಬಗ್ಗೆ ಸದಸ್ಯ ವಿನೋದ್ ಶೆಟ್ಟಿ ಮುಡಾಲರವರು ಸಭೆಯ ಗಮನಕ್ಕೆ ತಂದಿದ್ದರು.
ಅನಧಿಕೃತ ಬ್ಯಾನರ್ ವಿರುದ್ಧ ಕಾರ್ಯಾಚರಣೆಗೆ ಇಳಿದ ಗ್ರಾಪಂ
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ನಿಂದ ಪರವಾನಗೆ ಪಡೆಯದೇ ಅಳವಡಿಸಿರುವ ಬ್ಯಾನರ್ಗಳ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದು ಈಗಾಗಲೆ ಸುಮಾರು 14 ಬ್ಯಾನರ್ಗಳ ವಿರುದ್ಧ ಅದನ್ನು ಅಳವಡಿಸಿದವರಿಗೆ ನೋಟೀಸ್ ನೀಡಲಾಗಿದೆ ಎಂಬ ವಿಚಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ರವರು ಸಭೆಗೆ ಮಾಹಿತಿ ನೀಡಿದರು. ನೋಟೀಸ್ಗೆ 15 ದಿನಗಳ ಕಾಲವಕಾಶ ನೀಡಲಾಗಿದ್ದು ಅದರೊಳಗೆ ಬಂದು ಪರವಾನಗೆ ಪಡೆದುಕೊಳ್ಳದೇ ಇದ್ದರೆ ಪಂಚಾಯತ್ನಿಂದಲೇ ಬ್ಯಾನರ್ಗಳನ್ನು ತೆರವುಗೊಳಿಸಲಾಗುವುದು ಎಂದು ನಿರ್ಣಯಿಸಲಾಯಿತು. ಈ ಬಗ್ಗೆ ಮಾತನಾಡಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಸಿಕ್ಕ ಸಿಕ್ಕ ಕಡೆಗಳಲ್ಲಿ ಪಂಚಾಯತ್ ಪರವಾನೆಗೆ ಇಲ್ಲದೆ ಬ್ಯಾನರ್ ಅಳವಡಿಸುವ ಸರಿಯಲ್ಲ, ಬ್ಯಾನರ್, ಬಂಟಿಗ್ಸ್, ಪತಾಕೆ ಇತ್ಯಾದಿಗಳನ್ನು ಅಳವಡಿಸುವ ಮುನ್ನ ಪಂಚಾಯತ್ ಪರವಾನೆಗೆ ಪಡೆದುಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ಪಂಚಾಯತ್ನಿಂದಲೇ ಬ್ಯಾನರ್ಗಳನ್ನು ತೆರವು ಮಾಡುವ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ನೆನೆಗುದಿಗೆ ಬಿದ್ದ ಚೆಲ್ಯಡ್ಕ ಸೇತುವೆ ಸಂಪರ್ಕ ರಸ್ತೆ ಕಾಮಗಾರಿ…!
ಚೆಲ್ಯಡ್ಕ ಸೇತುವೆ ಕಾಮಗಾರಿ ಮುಗಿದಿದ್ದರೂ ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲಸ ಅರ್ಧದಲ್ಲೇ ನಿಂತಿರುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದೆ ಎಂಬ ವಿಷಯವನ್ನು ಮಹೇಶ್ ರೈ ಕೇರಿ ಸಭೆಗೆ ಗಮನಕ್ಕೆ ತಂದರು. ಈ ಸೇತುವೆಯು ಬೆಟ್ಟಂಪಾಡಿ ಗ್ರಾಪಂ ವ್ಯಾಪ್ತಿಗೆ ಸೇರಿದ್ದರೂ ಈ ಸೇತುವೆಯ ಸದುಪಯೋಗ ಪಡೆಯುವವರು ಬಹುತೇಕ ಒಳಮೊಗ್ರು ಗ್ರಾಪಂಗೆ ಸೇರಿದವರು. ರಸ್ತೆ ಸಂಪರ್ಕ ಸರಿಯಾಗದೇ ಇರುವುದು ಮತ್ತು ಬಸ್ಸು ಸೌಕರ್ಯ ಇಲ್ಲದೆ ಇರುವುದರಿಂದ ಈ ಭಾಗದ ಜನರು ಗ್ರಾಪಂ ಅಧ್ಯಕ್ಷರು, ಸದಸ್ಯರುಗಳನ್ನು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಇದರಲ್ಲೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಬಸ್ಸು ಸಂಚಾರ ಇಲ್ಲದೆ ಇರುವುದರಿಂದ 250 ರೂಪಾಯಿಗಿಂತಲೂ ಹೆಚ್ಚು ಹಣ ಕೊಟ್ಟು ಬಾಡಿಗೆ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶೀಘ್ರವಾಗಿ ಸಂಪರ್ಕ ರಸ್ತೆ ಕೆಲಸ ಮುಗಿಸಿಕೊಡುವಂತೆ ಪಂಚಾಯತ್ನಿಂದ ಲೋಕೋಪಯೋಗಿ ಇಲಾಖೆಗೆ ಬರೆದುಕೊಂಡಿದ್ದೇವೆ ಅದು ಬಿಟ್ಟರೆ ಬೇರೆ ಯಾವುದೇ ವಿಷಯದಿಂದಲ್ಲ, ಈಗಾಗಲೇ ಶಾಸಕರು ಕೂಡ ಸೇತುವೆ ವೀಕ್ಷಣೆ ಮಾಡಿ ಹೋಗಿದ್ದಾರೆ ಆದ್ದರಿಂದ ಶೀಘ್ರವೇ ರಸ್ತೆ ಕೆಲಸ ಪ್ರಾರಂಭಿಸಿ ಈ ಭಾಗದ ಜನರಿಗೆ ಬಸ್ಸು ಸಂಚಾರ ವ್ಯವಸ್ಥೆ ಮಾಡಿಕೊಡುವಂತೆ ಮಹೇಶ್ ರೈ ಕೇರಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು, ಈಗಾಗಲೇ ಸೇತುವೆ ಕಾಮಗಾರಿಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ವೀಕ್ಷಣೆ ಮಾಡಿದ್ದು ದಶಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಿಕೊಡುವಂತೆ ಇಂಜಿನಿಯರ್ರವರಿಗೆ ಸೂಚನೆ ಕೂಡ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕುಟ್ಟಿನೋಪಿನಡ್ಕದಲ್ಲಿ ರಚಿಸಿದ ವೃತ್ತದಿಂದ ತೊಂದರೆ..?
ಗ್ರಾಮದ ಕುಟ್ಟಿನೋಪಿನಡ್ಕದಲ್ಲಿ ರಸ್ತೆ ಮಧ್ಯೆ ವೃತ್ತವೊಂದನ್ನು ರಚಿಸಲಾಗಿದ್ದು ಇದರಿಂದ ವಾಹನ ತಿರುವು ಇತ್ಯಾದಿಗಳಿಗೆ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕ ಅರ್ಜಿಯ ಬಗ್ಗೆ ಚರ್ಚಿಸಲಾಯಿತು. ಈ ವೃತ್ತ ರಚನೆಗೆ ಪಂಚಾಯತ್ನಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ ಎಂದು ಪಿಡಿಓ ತಿಳಿಸಿದರು. ಸಾರ್ವಜನಿಕರಿಗೆ ತೊಂದರೆ,ಸಮಸ್ಯೆ ಆಗುತ್ತೆ ಎಂದಾದರೆ ವೃತ್ತವನ್ನು ಪಂಚಾಯತ್ನಿಂದಲೇ ತೆಗೆಯಬೇಕಾಗುತ್ತದೆ ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದು ಎಂದು ನಿರ್ಣಯಿಸಲಾಯಿತು.
ಕೈಕಾರದಲ್ಲಿ ಅಳವಡಿಸಿದ ಟಿಸಿಗೆ ಪಿಡಬ್ಲ್ಯೂಡಿ ಆಕ್ಷೇಪ…?
ಗ್ರಾಮ ಪಂಚಾಯತ್ನ ಕುಡಿಯುವ ನೀರಿನ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೈಕಾರದಲ್ಲಿ ಅಳವಡಿಸಿದ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಸಂಪರ್ಕ ನೀಡಲು ಪಿಡಬ್ಲ್ಯೂಡಿ ಅಧಿಕಾರಿಗಳು ಆಕ್ಷೇಪ ಮಾಡುತ್ತಿದ್ದಾರೆ ಎಂದು ಮಹೇಶ್ ರೈ ಕೇರಿ ತಿಳಿಸಿದರು. ರಸ್ತೆಯಿಂದ ಬಹಳಷ್ಟು ದೂರದಲ್ಲಿ ಟಿಸಿ ಅಳವಡಿಸಿದ್ದರೂ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳ ಬಳಿ ಮಾತನಾಡಿದರೂ ಪ್ರಯೋಜನ ಆಗಿಲ್ಲ. ಇದರಿಂದ ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ಅವರು ತಿಳಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ನಾಯಿಗೆ ಇಂಜೆಕ್ಷನ್ ಕೊಡುವ ಮುಂಚೆ ತಿಳಿಸಿ ಮಾರ್ರೆ…!?
ಗ್ರಾಪಂ ಸಹಕಾರದೊಂದಿಗೆ ಪಶು ವೈದ್ಯಾಕೀಯ ಆಸ್ಪತ್ರೆಯವರು ನಾಯಿಗಳಿಗೆ ಹುಚ್ಚು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಲಸಿಕಾ ಶಿಬಿರದ ಬಗ್ಗೆ ಸದಸ್ಯರುಗಳಿಗೇ ಮಾಹಿತಿ ನೀಡಿಲ್ಲ ಎಂದು ಶೀನಪ್ಪ ನಾಯ್ಕ ಮುಡಾಲ ಹೇಳಿದರು. ಈ ರೀತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡದೆ ಲಸಿಕಾ ಕಾರ್ಯಕ್ರಮ ಮಾಡಿರುವುದು ಸರಿಯಲ್ಲ, ಗ್ರಾಮದ ಜನರಿಗೆ ಮಾಹಿತಿ ತಲುಪುವುದು ಅತೀ ಅವಶ್ಯ ಎಂದರು.
ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ.ರವರು ಸಭೆಯ ಮುಂದಿಟ್ಟರು. ಈ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ದಾಖಲಿಸಿಕೊಳ್ಳಲಾಯಿತು. ಕಾರ್ಯದರ್ಶಿ ಜಯಂತಿಯವರು ನಿರ್ಣಯಗಳನ್ನು ದಾಖಲಿಸಿಕೊಂಡರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಚಿತ್ರಾ ಬಿ.ಸಿ, ಶಾರದಾ ಆಚಾರ್ಯ, ಸುಂದರಿ ಪರ್ಪುಂಜ, ನಳಿನಾಕ್ಷಿ, ವನಿತಾ ಕುಮಾರಿ, ರೇಖಾ ಯತೀಶ್ ಬಿಜತ್ರೆ, ಪ್ರದೀಪ್, ಲತೀಫ್ ಕುಂಬ್ರ, ಮಹೇಶ್ ರೈ ಕೇರಿ ಉಪಸ್ಥಿತರಿದ್ದರು. ಪಿಡಿಓ ಸುರೇಶ್ ಕೆ.ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು.
ಪಂಚಾಯತ್ ವ್ಯಾಪ್ತಿಯಲ್ಲಿ ‘ಗ್ರಾಮ ಯೋಜನಾ ಪ್ರಾಧಿಕಾರ’ ರಚನೆಯಾಗಲಿ…
ಸಾರ್ವಜನಿಕರಿಗೆ ಅತೀ ಅಗತ್ಯವಿರುವ 9/11 ಸೇರಿದಂತೆ ಎಲ್ಲಾ ದಾಖಲೆ ಪತ್ರಗಳು ಕೂಡ ನಗರ ಯೋಜನಾ ಪ್ರಾಧಿಕಾರದಲ್ಲಿ ಆಗುವುದರಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ತೊಂದರೆಗಳಾಗುತ್ತಿದೆ. ಇದನ್ನು ಮತ್ತೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ತರಬೇಕು ಎಂಬ ಆಗ್ರಹವನ್ನು ಸರಕಾರಕ್ಕೆ ಬಹಳಷ್ಟು ಸಲ ಪಂಚಾಯತ್ನಿಂದ ಮಾಡಲಾಗಿದೆ ಎಂದ ಮಹೇಶ್ ರೈ ಕೇರಿಯವರು, ಮುಂದಿನ ವರ್ಷಕ್ಕೆ ಪ್ರತಿ ಗ್ರಾಮ ಪಂಚಾಯತ್ನಲ್ಲಿ ‘ ಗ್ರಾಮ ಯೋಜನಾ ಪ್ರಾಧಿಕಾರ’ವನ್ನು ರಚಿಸಬೇಕು ಮತ್ತು ಎಲ್ಲಾ ದಾಖಲೆ ಪತ್ರಗಳನ್ನು ಗ್ರಾಮ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಎಂದು ಹೇಳಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ತಹಶೀಲ್ದಾರ್ ಇಲ್ಲದೆ ತೊಂದರೆ…!?
ಲೋಕಾಯುಕ್ತ ದಾಳಿಯ ವೇಳೆ ಓಡಿಹೋದ ಪುತ್ತೂರು ತಹಶೀಲ್ದಾರ್ ಇನ್ನೂ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ ಅವರ ಜಾಗಕ್ಕೆ ಮತ್ತೊಬ್ಬರಿಗೆ ಪ್ರಭಾರ ಅಧಿಕಾರ ನೀಡಲಾಗಿದ್ದು ಆದರೆ ಅಧಿಕಾರ ಪಡೆದುಕೊಂಡವರು ಸಾರ್ವಜನಿಕರ ದಾಖಲೆ ಪತ್ರಗಳಿಗೆ ಸಹಿ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಆದ್ದರಿಂದ ಪುತ್ತೂರಿಗೆ ಪರ್ಮನೆಂಟ್ ತಹಶೀಲ್ದಾರ್ ಅಗತ್ಯವಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವ ಎಂದು ಮಹೇಶ್ ರೈ ಕೇರಿ ತಿಳಿಸಿದರು. ಯಾವುದೇ ಅಧಿಕಾರಿ ಭ್ರಷ್ಟಾಚಾರ ಮಾಡಿದರೆ ಅಂತಹ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ತಿಳಿಸಿದರು.
‘ ಬೀದಿ ನಾಯಿಗಳ ಉಪಟಳದ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಮಾತನಾಡಿದ್ದು ಈ ಹಿನ್ನೆಲೆಯಲ್ಲಿ ಗ್ರಾಮದ ಜನತೆಗೆ ಪಂಚಾಯತ್ನಿಂದ ವಿಶೇಷ ಮನವಿ ಏನೆಂದರೆ ಯಾರು ಕೂಡ ತಮ್ಮ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡದೆ ಜಾಗೃತೆ ವಹಿಸಬೇಕು, ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.ಸಾರ್ವಜನಿಕರು ಪಂಚಾಯತ್ನೊಂದಿಗೆ ಸಹಕರಿಸಬೇಕಾಗಿ ವಿನಂತಿ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ
