





ಬರಹ: ದೀಪಕ್ ಉಬಾರ್


ಉಪ್ಪಿನಂಗಡಿ: ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವಲಿಂಗಕ್ಕೆ ಬೇಸಗೆ ಕಾಲದಲ್ಲಿ ಅದರಲ್ಲೂ ಮುಖ್ಯವಾಗಿ ಶಿವರಾತ್ರಿ ಸಹಿತ ಮೂರು ಮಖೆ ಜಾತ್ರೆಗಳಲ್ಲಿ ವಿಶೇಷ ಪೂಜೆ ನಡೆಯುವುದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿ ವಿಧಾನ. ಆದರೆ ಕಳೆದ ಮೂರು ವರ್ಷಗಳ ಹಿಂದೆ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಿಸಿದ್ದರಿಂದ ಅಣೆಕಟ್ಟಿನ ಹಿನ್ನೀರು ಉಪ್ಪಿನಂಗಡಿಯ ಕೂಟೇಲು ತನಕ ಸಂಗ್ರಹಗೊಳ್ಳುವಂತಾಗಿದೆ. ಇದರ ಪರಿಣಾಮ ನದಿಯಲ್ಲಿನ ಉದ್ಭವ ಲಿಂಗವೂ ಜಲಾವೃತಗೊಂಡು ವರ್ಷಾವಧಿ ನಡೆಸಲಾಗುತ್ತಿದ್ದ ಪೂಜೆ ಪುನಸ್ಕಾರಗಳಿಂದ ವಿಮುಖವಾದಂತಾಗಿದೆ.






ಅನುಕೂಲ – ಅನಾನುಕೂಲ:
ಬಿಳಿಯೂರು ಅಣೆಕಟ್ಟಿನಲ್ಲಿ ನಾಲ್ಕು ಮೀಟರ್ ಎತ್ತರದ ಗೇಟು ಅಳವಡಿಸುವುದರಿಂದ ನದಿ ಪಾತ್ರದ ಕೆಲವೊಂದು ಕೃಷಿಕರಿಗೆ ಅನುಕೂಲವಾಗಿದೆ. ಅಂತರ್ಜಲವೂ ವೃದ್ಧಿಯಾಗಿದೆ. ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಕಾಣಿಸಿದಾಗ ಹೆಚ್ಚುವರಿ ಜಲ ಮೂಲವಾಗಿ ಈ ಅಣೆಕಟ್ಟಿನ ಹಿನ್ನೀರು ಬಳಕೆಯಾಗುತ್ತಿದೆ. ಆದರೆ ನೇತ್ರಾವತಿ ನದಿ ಗರ್ಭದಲ್ಲಿನ ಉದ್ಬವ ಲಿಂಗಕ್ಕೆ ವರ್ಷಂಪ್ರತಿ ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದ ಭಕ್ತ ಜನತೆಗೆ ಅತೀವ ನಿರಾಶೆ ಮೂಡಿದೆ. ದೇವಾಲಯದ ಜಾತ್ರೋತ್ಸವಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ನದಿಯೊಡಲಿನ ವಿಶಾಲ ಸ್ಥಳಾವಕಾಶ ಅಣೆಕಟ್ಟಿನ ಹಿನ್ನೀರಿನಿಂದಾಗಿ ಇಲ್ಲವಾಗಿದ್ದು, ಮಖೆ ಜಾತ್ರೋತ್ಸವಗಳು ಮೆರುಗನ್ನು ಕಳೆದುಕೊಳ್ಳಲು ಕಾರಣವಾಗಿದೆ. ಊರಿನ ಕೊಳಚೆ ನೀರು ವಸತಿ ಸಮುಚ್ಚಯಗಳ ತ್ಯಾಜ್ಯ ನೀರು ನೇರವಾಗಿ ನದಿಯ ಹಿನ್ನೀರನ್ನು ಸೇರುತ್ತಿರುವುದರಿಂದ ಬೇಸಗೆಯಲ್ಲಿ ರೋಗರುಜಿನಗಳು ಪ್ರಸಹರಿಸಲು ಕಾರಣವಾಗುತ್ತಿದೆ. ಅಲ್ಲದೇ, ದೇವಾಲಯದಲ್ಲಿ ನಡೆಸಿದ ಪ್ರಶ್ನಾ ಚಿಂತನೆಯಲ್ಲೂ ಉದ್ಭವ ಲಿಂಗಕ್ಕೆ ಪೂಜೆ ನಡೆಯದಿರುವುದು ಊರಿಗೆ ದೋಷ ಎಂಬುವುದಾಗಿ ತಿಳಿಯಲ್ಪಟ್ಟಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದೆರಡು ವರ್ಷಗಳಲ್ಲಿ ಉಪ್ಪಿನಂಗಡಿಯ ಅಭಿವೃದ್ಧಿಯಲ್ಲಿ ಹಾಗೂ ಜನರ ಜೀವನ ಶೈಲಿಯಲ್ಲಿ ಬಹಳಷ್ಟು ಹಿನ್ನಡೆಗಳು ಕಾಣಿಸತೊಡಗಿವೆ. ಈ ಎಲ್ಲಾ ಕಾರಣಗಳಿಂದ ಊರಿನ ಜಾತ್ರೆ ನಡೆಯುವ ವರೆಗೆ ಅಣೆಕಟ್ಟಿನ ಗೇಟಿನ ಗಾತ್ರವನ್ನು ತಗ್ಗಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿದೆ.
ಮಾರ್ಚ್ ಮಧ್ಯಾಂತರದವರೆಗೆ ಗೇಟಿನ ಗಾತ್ರ ಇಳಿಸಿದರೆ:
ಅಣೆಕಟ್ಟು ಕಟ್ಟಿದ ಸದುದ್ದೇಶದ ಪಾಲನೆಯ ಜೊತೆಗೆ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಜನರ ಧಾರ್ಮಿಕ ನಂಬಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗೊಪಾಯವನ್ನು ಅನುಷ್ಠಾನಿಸಬೇಕೆಂದು ಸಾರ್ವಜನಿಕರಿಂದ ಅಗ್ರಹಗಳು ಕೇಳಿ ಬಂದಿದೆಯಲ್ಲದೆ, ಅನುಷ್ಠಾನ ಯೋಗ್ಯ ಸಲಹೆಗಳೂ ಲಭಿಸಿದೆ. ಅದರಂತೆ ಪ್ರತಿವರ್ಷದಂತೆ ಬಿಳಿಯೂರು ಅಣೆಕಟ್ಟಿನಲ್ಲಿ ಗೇಟು ಅಳವಡಿಸುವ ಸಮಯದಲ್ಲಿ ಸಾಮಾನ್ಯವಾಗಿ ಬಳಸುವ 4 ಮೀಟರ್ ಎತ್ತರದ ಗೇಟಿನ ಬದಲು ನದಿಯ ಹಿನ್ನೀರು ನೆಕ್ಕಿಲಾಡಿವರೆಗೆ ಮಾತ್ರ ಸಂಗ್ರಹಗೊಳ್ಳುವಷ್ಟು, ಎರಡು ಅಥವಾ ಮೂರು ಮೀಟರ್ ಎತ್ತರದ ಗೇಟನ್ನು ಅಳವಡಿಸಬೇಕು. ಈ ಬಾರಿ ಮೂರು ಮಖೆ ಜಾತ್ರೆಗಳು ಕೊನೆಗೊಳ್ಳುವ ಮಾರ್ಚ್ 12 ರ ಬಳಿಕ ಗೇಟನ್ನು ನಾಲ್ಕು ಮೀಟರ್‌ಗೆ ಎತ್ತರಿಸಿ ಬಳಿಕ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದ್ದ ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡುವಂತೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗೂ ಅಣೆಕಟ್ಟಿನ ಮೂಲ ಆಶಯವಾದ ಹಿನ್ನೀರು ಸಂಗ್ರಹದ ಗುರಿಯನ್ನೂ ಈಡೇರಿಸಿದಂತಾಗುತ್ತದೆ.
ಪ್ರಕೃತಿದತ್ತ ಆರಾಧನಾ ಸ್ಥಳದ ಮಹತ್ವ ಉಳಿಸಿದರೆ ಎಲ್ಲರಿಗೂ ಶ್ರೇಯಸ್ಸು:
ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಉದ್ಭವ ಲಿಂಗಕ್ಕೆ ಅನಾದಿಕಾಲದಿಂದ ನಡೆಸಿಕೊಂಡು ಬರಲಾಗುತ್ತಿದ್ದ ಪೂಜೆ ಅಣೆಕಟ್ಟಿನ ಹಿನ್ನೀರಿನಿಂದಾಗಿ ನಿಂತಿರುವುದು ಭಕ್ತ ಜನತೆಯ ಮನಸ್ಸಿನಲ್ಲಿ ಅತೀವ ನೋವು ಮೂಡಿಸಿದೆ. ಮಾರ್ಚ್ ಮಧ್ಯಾಂತರದ ಅವಽಯಲ್ಲಿ ಗೇಟಿನ ಗಾತ್ರವನ್ನು ಇಳಿಸುವುದರಿಂದ ಹಾಗೂ ಬಳಿಕ ಗೇಟಿನ ಗಾತ್ರವನ್ನು 4 ಮೀಟರಿಗೆ ಏರಿಸುವುದರಿಂದ ಎಲ್ಲರಿಗೂ ಅನುಕೂಲಕರವೆನಿಸುತ್ತದೆ. ನದಿ ಗರ್ಭದಲ್ಲಿನ ಉದ್ಭವಲಿಂಗ ಪ್ರಕೃತಿದತ್ತ ಆರಾಧನಾ ಸ್ಥಳ. ಇಲ್ಲಿನ ಪೂಜೆ ಆತಂಕರಹಿತವಾಗಿ ನಡೆಯುವುದು ಎಲ್ಲರಿಗೂ ಶ್ರೇಯಸ್ಕರ. ಈ ನಿಟ್ಟಿನಲ್ಲಿ ಭಕ್ತ ಜನತೆ ಒಗ್ಗೂಡಿ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸಕರಿಗೆ ಮನವಿ:
ಶಿವರಾತ್ರಿ ಸಹಿತ ಮೂರು ಮಖೆ ಜಾತ್ರೆಗಳಲ್ಲಿ ವಿಶೇಷ ಪೂಜೆ ನಡೆಯುವುದನ್ನು ಮುಂದುವರೆಸಿಕೊಂಡು ಬರುವ ಸಲುವಾಗಿ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಕಟ್ಟಲಾದ ಅಣೆಕಟ್ಟಿನ ಗೇಟನ್ನು ತಗ್ಗಿಸಬೇಕೆಂದು ಉಪ್ಪಿನಂಗಡಿಯ ಟೀಂ ಅಘೋರ ತಂಡ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿಯನ್ನೂ ನೀಡಿತ್ತು. ಆ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈಯವರು, ಅನಾದಿಕಾಲದಿಂದಲೂ ಪರಂಪರಾಗತವಾಗಿ ಪೂಜಿಸಿಕೊಂಡು ಬರಲಾಗುತ್ತಿದ್ದ ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿನ ಉದ್ಭವ ಲಿಂಗಕ್ಕೆ ಅಣೆಕಟ್ಟಿನ ಹಿನ್ನೀರಿನಿಂದಾಗಿ ಪೂಜೆ ನಡೆಯದಿರುವುದು ದೋಷಕರ ಎಂದು ಪ್ರಶ್ನಾಚಿಂತನೆಯಲ್ಲಿ ಗೋಚರಿಸಿರುವುದು ಗಮನಕ್ಕೆ ಬಂದಿದೆ. ಜಾತ್ರೋತ್ಸವದ ಅವಧಿಯ ವರೆಗೆ ಅಣೆಕಟ್ಟಿನ ಗೇಟನ್ನು ತಗ್ಗಿಸಿ ಬಳಿಕ ಎತ್ತರಿಸುವ ಸಲಹೆಯ ಬಗ್ಗೆ ಸಾಧಕಬಾಧಕಗಳನ್ನು ಪರಿಶೀಲಿಸಿ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದರು.

ಉದ್ಭವಲಿಂಗದ ಪೌರಾಣಿಕ ಹಿನ್ನೆಲೆ
ಪೌರಣಿಕ ಹಿನ್ನೆಲೆಯ ಪ್ರಕಾರ ದ್ವಾಪರಯುಗದಲ್ಲಿ ಕುರುಕ್ಷೇತ್ರ ಯುದ್ಧಾನಂತರ ಪಾಂಡವರಲ್ಲಿ ಅಸಂಖ್ಯಾತ ಜೀವ ಬಲಿಯಾದ ಬಗ್ಗೆ ಪಾಪ ಪ್ರಜ್ಞೆ ಕಾಡುತ್ತದೆ. ಈ ಬಗ್ಗೆ ಅವರು ಶ್ರೀ ಕೃಷ್ಣನಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಆಗ ಶ್ರೀ ಕೃಷ್ಣನು ರಾಜಸೂರ್ಯಧ್ವರ ಯಾಗವನ್ನು ಮಾಡುವಂತೆ ಹೇಳುತ್ತಾನೆ. ರಾಜಸೂರ್ಯಧ್ವರ ಯಾಗವನ್ನು ಮಾಡಲು ಪಾಂಡವರು ಸಂಕಲ್ಪಿಸುತ್ತಾರೆ. ಯಾಗ ನಿಮಿತ್ತ ಜರಗುವ ಅನ್ನಸಂತರ್ಪಣೆ ಬಳಿಕ ಯಾಗ ಮಂಟಪದ ಪರಿಶುದ್ಧತೆಯ ನೈರ್ಮಲ್ಯಕ್ಕಾಗಿ ಮಹೇಂದ್ರಗಿರಿಯಲ್ಲಿರುವ ದೇವ ಮೃಗವಾದ ಪುರುಷಮೃಗವನ್ನು ಬರ ಮಾಡಲು ಶ್ರೀ ಕೃಷ್ಣ ಸೂಚಿಸುತ್ತಾನೆ. ತ್ರೇತಾಯುಗದಲ್ಲಿದ್ದ ಹನುಮಂತ ವಾಯು ಕ್ಷೇತ್ರದಲ್ಲಿ ವೃದ್ಧಾಪ್ಯದಿಂದ ಬಳಲಿ ಪವಡಿಸಿರುತ್ತಾನೆ. ಶ್ರೀ ಕೃಷ್ಣನಿಂದ ನಿಯೋಜಿಸಲ್ಪಟ್ಟ ಭೀಮಸೇನ ಮಹೇಂದ್ರಗಿರಿಯೊಳಗೆ ಪ್ರವೇಶಿಸಿ ವಾಯುಮಾರ್ಗದಲ್ಲಿ ಸಂಚರಿಸುತ್ತಾನೆ. ಉದ್ಧವಾಗಿ ಚಾಚಿದ ಆತನ ಬಾಲವನ್ನು ದಾಟಿ ಮುಂದೆ ಸಾಗಲಾರದೇ ಭೀಮಸೇನ ಬಾಲವನ್ನು ಸರಿಪಡಿಸುವಂತೆ ಹನುಮಂತನಲ್ಲಿ ಕೇಳಿಕೊಳ್ಳುತ್ತಾನೆ. ಆಗ ಹನುಮನು ‘ನಾನು ಬಳಲಿರುವೆನು’ ನೀನೇ ನನ್ನ ಬಾಲವನ್ನು ಎತ್ತಿ ಹೋಗು ಎಂದು ತಿಳಿಸುತ್ತಾನೆ. ಭೀಮನು ತನ್ನ ಬಲವೆನ್ನೆಲ್ಲಾ ಪ್ರಯೋಗಿಸಿ ಬಾಲವನ್ನು ಎತ್ತಲು ಮುಂದಾಗುತ್ತಾನೆ. ಆದರೆ ಒಂದಿಂಚು ಕದಲದಿರುವುದನ್ನು ಕಂಡು ಸೋತ ಭೀಮನು ಹನುಮಂತನಲ್ಲಿ ನಿವೇದಿಸುತ್ತಾನೆ. ಆಗ ಅವರೊಳಗಡೆ ಸಂವಾದವೇರ್ಪಟ್ಟು ಇಬ್ಬರೂ ವಾಯು ಪುತ್ರರೆಂದು ತಿಳಿಯುತ್ತದೆ. ಭೀಮನು ಬಂದ ಉದ್ದೇಶವನ್ನು ತಿಳಿದು, ತನ್ನ ಬಾಲದ ರೋಮವನ್ನು ರಕ್ಷೆಯಾಗಿ ಕೊಟ್ಟು ಹನುಮಂತನು ಭೀಮ ಸೇನನನ್ನು ಹರಸಿ, ಕಳುಹಿಸಿಕೊಡುತ್ತಾನೆ. ಹೀಗೆ ಮಹೇಂದ್ರಗಿರಿಯನ್ನು ಸೇರಿದ ಭೀಮ, ಪುರುಷ ಮೃಗವನ್ನು ಭೇಟಿಯಾಗಿ ಬಂದ ಉದ್ದೇಶವನ್ನು ತಿಳಿಸುತ್ತಾನೆ. ಆಗ ದೇವಮೃಗವಾದ ಪುರುಷ ಮೃಗವು ಷರತ್ತನ್ನೊಡ್ಡುತ್ತದೆ. ಮನೋವೇಗದಿಂದ ಸಂಚರಿಸುವ ಪುರುಷ ಮೃಗದ ಷರತ್ತನ್ನು ಹನುಮಂತನ ಬಾಲದ ರೋಮದ ರಕ್ಷೆಯ ಆಧಾರದಲ್ಲಿ ಸ್ವೀಕರಿಸಿ ಭೀಮಸೇನ ತನ್ನ ನಿಶ್ಚಿತ ಗುರಿಯತ್ತ ಸಾಗುತ್ತಾನೆ. ಹಿಂಬಾಲಿಸಿದ ದೇವ ಮೃಗ ಬೆನ್ನಟ್ಟುತ್ತದೆ. ಆಪತ್ತಿಗೆ ಸಿಲುಕಿದಾಗ ಭೀಮ ಹನುಮ ರೋಮಗಳನ್ನು ಚೆಲ್ಲುತ್ತಾನೆ. ಆಗ ಒಂದೊಂದು ರೋಮದಲ್ಲೂ ಒಂದೊಂದು ಶಿವಲಿಂಗ ಉದ್ಭವವಾಗುತ್ತದೆ. ಶಿವಾರ್ಚನೆಯನ್ನು ಮಾಡದೇ ಪುರುಷಮೃಗ ಮುಂದೆ ಸಾಗದು. ಹೀಗೆ ಉಪ್ಪಿನಂಗಡಿಯ ಸಮೀಪಕ್ಕೆ ಬಂದಾಗ ದೇವ ಮೃಗದ ಕಬಂಧ ಬಾಹುವಿಗೆ ಸಿಲುಕುವ ಪ್ರಮೇಯ ಭೀಮನಿಗೆ ಎದುರಾಗುತ್ತದೆ. ಆಗ ಭೀಮಸೇನ ತನ್ನ ಕೈಗಳಲ್ಲಿ ಉಳಿದ ಸಹಸ್ರ ರೋಮಗಳನ್ನು ಚೆಲ್ಲುತ್ತಾನೆ. ಸಹಸ್ರ ರೋಮಗಳಿಂದ ಸಹಸ್ರಲಿಂಗಗಳು ಉದ್ಭವವಾಗುತ್ತದೆ. ಆದ್ದರಿಂದ ಇಲ್ಲಿಯ ಸನ್ನಿಽಗೆ ಸಹಸ್ರಲಿಂಗೇಶ್ವರ ಎಂಬ ಹೆಸರು ಬರುತ್ತದೆ. ದೇವಮೃಗವು ಸಹಸ್ರಲಿಂಗಗಳಿಗೆ ಶಿವಾರ್ಚನೆ ಮಾಡುವ ಸಮಯದಲ್ಲಿ ಭೀಮ ಸೇನನು ಯಾಗ ಮಂಟಪವನ್ನು ತಲುಪುತ್ತಾನೆ. ಹೀಗೆ ನಿರ್ಮಾಣಗೊಂಡ ಸಹಸ್ರಲಿಂಗಗಳು ಭೂತಳದಲ್ಲಿ ಇವೆಯೆಂದು ಪ್ರತೀತಿ ಇದೆ. ಅದರಲ್ಲಿ ಒಂದು ಲಿಂಗ ನದಿಯಲ್ಲಿದ್ದು ಅದುವೇ ನದಿಯಲ್ಲಿ ನೀರು ಕಡಿಮೆಯಾಗುವಾಗ ಕಾಣುವ ಉದ್ಭವ ಲಿಂಗವಾಗಿದೆ ಎನ್ನುತ್ತದೆ ಇತಿಹಾಸ.








