ಆರೋಗ್ಯ ಕಾಪಾಡುವಲ್ಲಿ ಆತ್ಮವಿಶ್ವಾಸ ಮುಖ್ಯ – ಕೇಶವ ಅಮೈ
ಪುತ್ತೂರು: ಆರೋಗ್ಯ ನಮಗೆ ಮುಖ್ಯ. ಉತ್ತಮ ಆರೋಗ್ಯವನ್ನು ಗಳಿಸಲು ಆಹಾರ ಪದ್ಧತಿ, ಯೋಗ ಚಿಕಿತ್ಸೆ ಅಗತ್ಯತೆಯ ಜೊತೆಗೆ ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕೆಂದು ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರು ಹೇಳಿದರು.
ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಪುತ್ತೂರು ಮುಕ್ರಂಪಾಡಿಯಲ್ಲಿರುವ ಎಸ್.ಆರ್.ಕೆ ಲ್ಯಾಡರ್ಸ್ ಸಂಸ್ಥೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಹಾಗು ಆಯುಷ್ ಮಂತ್ರಾಲಯ ಭಾರತ ಸರಕಾರ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಬೆಂಗಳೂರು, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳು, ಭಾರತೀಯ ಯೋಗ ಮತ್ತು ಚಿಕಿತ್ಸಾ ಪದವೀಧರರ ಸಂಘದ ವತಿಯಿಂದ ನಡೆದ ಪ್ರಕೃತಿ ಚಿಕಿತ್ಸೆ ಮಾಹಿತಿ ಮತ್ತು ಚಿಕಿತ್ಸಾ ಶಿಬಿರವನ್ನು ಅವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮಗೂ ಒಂದು ಹಂತದ ವಯಸ್ಸಿನಲ್ಲಿ ಬಿಪಿ, ಶುಗರ್ ಬರುವುದು ಸಹಜ. ಆದರೆ ಅದನ್ನು ನಿಯಂತ್ರಣ ಮಾಡಬೇಕಾದ ಕುರಿತು ನಮ್ಮಲ್ಲಿನ ಆಹಾರ ಪದ್ಧತಿಯಲ್ಲಿ ಬದಲಾವಣೆ, ಯೋಗ ಮಾಡುವಂತೆ ವೈದ್ಯರು ತಿಳಿಸಿದ್ದಾರೆ. ಇದರ ಜೊತೆಗೆ ನಮ್ಮಲ್ಲಿ ಆತ್ಮವಿಶ್ವಾಸವೂ ಇರಬೇಕೆಂದು ಕೇಶವ ಅಮೈ ಅವರು ಹೇಳಿದರು.
ಪ್ರಕೃತಿ ಚಿಕಿತ್ಸಾಲಯದ ವೈದ್ಯ ಡಾ.. ಬಿ.ವಿ. ಕಾರ್ತಿಕ್ ಅವರು ಮಾತನಾಡಿ, ರೋಗ ಬಂದ ಮೇಲ ಔಷಧಿ ಪಡೆಯುವುದಕ್ಕಿಂತ ರೋಗ ಬಾರದ ಹಾಗೆ ಆರೋಗ್ಯದ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಹಲವು ಮಾರ್ಗಸೂಚಿಗಳನ್ನು ತಿಳಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ್ ಏನೆಕಲ್ಲು ಅವರ ಪುತ್ರಿ ನ್ಯಾಚೋರಪತಿ ಯೋಗಿಕ್ ಸಯನ್ಸ್ ಇದರ ಅಂತಿಮ ಪದವಿ ವಿದ್ಯಾರ್ಥಿನಿ ಅಮೃತ ಅವರು ಮಾತನಾಡಿ ಯೋಗದ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ವಿದ್ಯಾರ್ಥಿನಿ ಅನ್ವಿತಾ ಅವರು ಆಹಾರ ಪದ್ಧತಿಯ ಕುರಿತು ಮಾಹಿತಿ ನೀಡಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ್ ಏನೆಕಲ್ಲು ಸ್ವಾಗತಿಸಿ, ಮನೋಜ್ ವಂದಿಸಿದರು. ದಿನೇಶ್ ನೆಟ್ಟಣ ಕಾರ್ಯಕ್ರಮ ನಿರೂಪಿಸಿದರು.
