ಪುತ್ತೂರು: ಸವಣೂರು ಮೊಗರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪೋಷಕ-ಶಿಕ್ಷಕಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಫೀಕ್ ಎಂ.ಎ ವಹಿಸಿದ್ದರು. ಶಾಲಾ ನಾಯಕಿ ಫಾತಿಮಾ ಅಲ್ಫಾ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಪುಟಾಣಿಗಳು ಬಬಲ್ಸ್ ಊದುವುದರ ಮೂಲಕ ಉದ್ಘಾಟನೆಗೊಂಡಿತು. ಬೆಳ್ಳಾರೆ ಠಾಣೆಯ ಪೊಲೀಸ್ ಸಿಬ್ಬಂದಿ ಕು.ಪೂಜಾ ಅವರು ಮಕ್ಕಳ ಮೇಲಿನ ದೌರ್ಜನ್ಯ, ಪೋಕ್ಸೋ ಕಾಯಿದೆ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಧುಶ್ರೀ ಅವರು ಮಕ್ಕಳ ಆರೋಗ್ಯದ ರಕ್ಷಣೆ, ಕಾಳಜಿ, ಸರ್ಕಾರದಿಂದ ಮಕ್ಕಳ ಆರೋಗ್ಯಕ್ಕಾಗಿ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಸಹ ಶಿಕ್ಷಕರುಗಳಾದ ಜಾನಕಿ ಹಾಗೂ ಸವಿತಾ ಅವರು ಆರ್ ಟಿ ಇ ಕಾಯ್ದೆ ಹಾಗೂ ಕಲಿಕೆಗೆ ಪೂರಕವಾಗಿ ಸರಕಾರ ರೂಪಿಸಿರುವ ಕಲಿಕಾ ವಿಧಾನಗಳು ಮತ್ತು ಸರಕಾರದಿಂದ ಶಾಲೆಗೆ ಸಿಕ್ಕಿರುವ ಸವಲತ್ತುಗಳು, ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ ಸದಸ್ಯ ರಝಾಕ್ ಕೆನರಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶೋಧ, ಸದಸ್ಯರುಗಳಾದ ಕೇಶವ, ಪುಷ್ಪಾವತಿ, ಅಬ್ದುಲ್ಲ ಸೋಂಪಾಡಿ, ಪೋಷಕರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜ, ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಆಮಿನ ಐಫ ಬಳಗದವರು ಪ್ರಾರ್ಥಿಸಿದರು. ಎಲ್‌ಕೆಜಿ ತರಗತಿ ಶಿಕ್ಷಕಿ ಗಾಯತ್ರಿ ವಂದಿಸಿದರು. ಶಿಕ್ಷಕಿ ಕು.ದಯಾಮಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗುಲ್ಸನ್ ಕೌಸರ್ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾಭಿಮಾನಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.