ಒಳಮೊಗ್ರು ಗ್ರಾ.ಪಂನಲ್ಲಿ ಸಮುದಾಯದತ್ತ ಸಾಂತ್ವನ ಅಭಿಯಾನ ಕಾರ್ಯಕ್ರಮ

0

ದ.31ರೊಳಗೆ ಒಳಮೊಗ್ರು ಗ್ರಾಮವನ್ನು ಕಸಮುಕ್ತ ಮಾದರಿ ಗ್ರಾಮ ಘೋಷಣೆ- ಸಂಕಲ್ಪ

ಪುತ್ತೂರು: ಕಸ ಮುಕ್ತ ಮನೆಯನ್ನಾಗಿಸುವ ಮೂಲಕ ಒಳಮೊಗ್ರು ಗ್ರಾಮವನ್ನು ದಶಂಬರ್ 31 ರೊಳಗೆ ಕಸ ಮುಕ್ತ ಮಾದರಿ ಗ್ರಾಮವನ್ನಾಗಿಸುವ ಘೋಷಣೆಯನ್ನು ತೆಗೆದುಕೊಳ್ಳಲಾಯಿತು. ನ.15 ರಂದು ಒಳಮೊಗ್ರು ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಜನಶಿಕ್ಷಣ ಟ್ರಸ್ಟ್ ಮಹಿಳಾ ಸಾಂತ್ವನ ಕೇಂದ್ರ ಪುತ್ತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆ ಇದರ ಸಹಯೋಗದಲ್ಲಿ ನಡೆದ ಸಮುದಾಯದತ್ತ ಸಾಂತ್ವನ ಅಭಿಯಾನ, ಕಸಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಮಾದರಿ ಗ್ರಾಮ ಸ್ವಯಂ ಘೋಷಣೆ ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಈ ಸಂಕಲ್ಪವನ್ನು ಮಾಡಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ, ಮಾಜಿ ಒಂಬುಡ್ಸ್‌ಮೆನ್, ಸ್ವಚ್ಛತಾ ಜಿಲ್ಲಾ ರಾಯಭಾರಿ ಶೀನ ಶೆಟ್ಟಿಯವರು ಮಾತನಾಡಿ, ಕಸದಲ್ಲಿ ಹಸಿ, ಒಣ ಕಸ, ಅಪಾಯಕಾರಿ ಕಸ ಹಾಗೂ ಮಹಾಅಪಾಯಕಾರಿ ಎಂಬ ಕಸಗಳಿದ್ದು ಇವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡುವುದು ಅತೀ ಅವಶ್ಯಕವಾಗಿದೆ.ಹಸಿ ಕಸವನ್ನು ಕಾಂಫೋಸ್ಟ್ ಮಾಡುವ ಮೂಲಕ ಸಸಿಗಳಿಗೆ ಹಾಕಬಹುದು, ಒಣ ಕಸವನ್ನು ಹಣ ಕಸವನ್ನಾಗಿ ಮಾಡಬಹುದು ಆದರೆ ಅಪಾಯಕಾರಿ ಕಸವನ್ನು ಬಹಳ ಜಾಗೂರುಕತೆಯಿಂದ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಕಸ ಮುಕ್ತ ಗ್ರಾಮವಾಗಬೇಕಾದರೆ ಮೊದಲಿಗೆ ಕಸ ಮುಕ್ತ ಮನೆ ನಮ್ಮದಾಗಬೇಕು ಆದ್ದರಿಂದ ಪ್ರತಿಯೊಂದು ಮನೆಯಿಂದಲೂ ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರವನ್ನು ಪಡೆದುಕೊಳ್ಳುವ ಮೂಲಕ ಕಸ ಮುಕ್ತ ಮನೆಯಿಂದ ಕಸ ಮುಕ್ತ ಗ್ರಾಮ ನಿರ್ಮಾಣ ನಮ್ಮದಾಗಬೇಕು, ಆದ್ದರಿಂದ ದ.31 ರೊಳಗೆ ಅಥವಾ ಮಾರ್ಚ್ ತಿಂಗಳಾಂತ್ಯಕ್ಕೆ ಒಳಮೊಗ್ರು ಗ್ರಾಮವನ್ನು ‘ ಕಸ ಮುಕ್ತ ಗ್ರಾಮ’ ವನ್ನಾಗಿ ಮಾಡೋಣ ಇದಕ್ಕೆ ನಾವೆಲ್ಲರೂ ಬೆಂಬಲ ನೀಡೋಣ ಎಂದರು.


ಪ್ಲಾಸ್ಟಿಕ ಸುಡದೆ, ಬಿಸಾಡದೆ ಜಾಗೃತೆ ವಹಿಸಿ
ಪ್ಲಾಸ್ಟಿಕ್ ಒಂದು ಅಪಾಯಕಾರಿ ಕಸವಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಸುಡಲು ಹೋಗಬೇಡಿ, ಇದರ ಹೊಗೆಯಿಂದ ಕ್ಯಾನ್ಸರ್‌ಕಾರಕ ಅಂಶಗಳು ಬಿಡುಗಡೆಯಾಗುತ್ತವೆ.ಈಗಾಗಲೇ ಪ್ರತಿಯೊಬ್ಬರ ದೇಹದಲ್ಲೂ ಕ್ಯಾನ್ಸರ್‌ಕಾರಕ ಅಣುಗಳು ಇರುವ ಸಾಧ್ಯತೆ ಇದೆ ಆದ್ದರಿಂದ ನಾವು ಕ್ಯಾನ್ಸರ್ ತಡೆಯೋಣ ಅಭಿಯಾನ ಮಾಡಬೇಕಾಗಿದೆ ಇದಕ್ಕಾಗಿ ಕಸ ಮುಕ್ತ ಮನೆ, ಪರಿಸರ, ಗ್ರಾಮ ನಮ್ಮದಾಗಬೇಕು ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಶೀನ ಶೆಟ್ಟಿ ಹೇಳಿದರು. ನಿಷೇಧಿತ ಪ್ಲಾಸ್ಟಿಕ್ ಅನ್ನು ಉತ್ಪಾದನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿದ್ದೇವೆ ಎಂದು ಅವರು ಹೇಳಿದರು.


ಸ್ವಚ್ಛತೆ ಎಂಬುದು ನಮ್ಮ ಮನಸ್ಸಿಗೆ ಬರಬೇಕು- ಕೃಷ್ಣ ಮೂಲ್ಯ
ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯರವರು ಮಾತನಾಡಿ, ಸ್ವಚ್ಛತೆ ಎಂಬುದು ನಮ್ಮ ಮನಸ್ಸಿಗೆ ಬಂದರೆ ಮಾತ್ರ ನಮ್ಮಲ್ಲಿ ಸ್ವಚ್ಛತೆ ಜಾಗೃತವಾಗುತ್ತದೆ. ಆದ್ದರಿಂದ ಕಸ ಮುಕ್ತ ಮನೆ, ಕಸ ಮುಕ್ತ ಗ್ರಾಮ ನಿರ್ಮಾಣ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಇದರು ಎಲ್ಲರ ಮನಸ್ಸಿನಲ್ಲಿ ಬರಬೇಕು ಎಂದು ತಿಳಿಸಿದರು. ಪೇಪರ್ ಕಪ್‌ನಲ್ಲಿ ಚಹಾ ಕುಡಿಯಬಾರದು ಎಂಬುದು ನಮ್ಮ ಮನಸ್ಸಿನಲ್ಲಿ ಬಂದರೆ ಮಾತ್ರ ಇದು ಸಾಧ್ಯವಾಗುತ್ತದೆ.


ಒಳಮೊಗ್ರು ಗ್ರಾಪಂ ಸದಸ್ಯೆ ಚಿತ್ರಾ ಬಿ.ಸಿಯವರು ಮಾತನಾಡಿ, ನಾವು ನಡೆದುಕೊಂಡು ಹೋಗುತ್ತಿದ್ದಾಗ ಎಲ್ಲಾದರೂ ಪ್ಲಾಸ್ಟಿಕ್ ಬಿದ್ದಿರುವುದು ಕಂಡು ಬಂದರೆ ಅದನ್ನು ಹೆಕ್ಕಿ ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗಿ ವಿಲೇವಾರಿ ಮಾಡಬೇಕು, ಮಕ್ಕಳಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು. ಸದಸ್ಯೆ ರೇಖಾ ಯತೀಶ್ ಮಾತನಾಡಿ, ಈಗಾಗಲೇ ಕಸ ಬಿಸಾಡಿದವರನ್ನು ಪತ್ತೆ ಹಚ್ಚಿ ದಂಡನೆ ವಿಧಿಸುವ ಕೆಲಸ ಕೂಡ ಮಾಡಿದ್ದೇವೆ ಎಂದರು. ಸದಸ್ಯ ಮಹೇಶ್ ರೈ ಕೇರಿ ಮಾತನಾಡಿ, ಸ್ವಚ್ಛತೆಯ ವಿಷಯದಲ್ಲಿ ಗ್ರಾಪಂನಿಂದ ಸತತ ಕೆಲಸಗಳು ನಡೆದಿದೆ ಎಂದರು. ಕುಂಬ್ರ ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈಯವರು ಸಲಹೆ ನೀಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಭಾಧ್ಯಕ್ಷ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಕಸ ಮುಕ್ತ ಮನೆ, ಕಸ ಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಬಹಳ ಅಗತ್ಯವಿದೆ. ಈಗಾಗಲೇ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರ ನಡೆಯುತ್ತಿದ್ದು ಎಲ್ಲರ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಪ್ರತಿ ಮನೆಯಿಂದಲೂ ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರವನ್ನು ಪಡೆದುಕೊಳ್ಳುವ ಮೂಲಕ ಗ್ರಾಮವನ್ನು ಕಸ ಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಪ್ರಯತ್ನ ಪಡುತ್ತೇವೆ ಎಂದು ತಿಳಿಸಿ ಗ್ರಾಮಸ್ಥರ ಸಹಕಾರ ಕೋರಿದರು. ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕಿ ನಳಿನಾಕ್ಷಿ ಸಂದರ್ಭೋಚಿತವಾಗಿ ಮಾತನಾಡಿದರು.


ಕಸ ಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಗ್ರಾಮ- ಸ್ವಯಂ ಘೋಷಣಾ ಪತ್ರ ಹಸ್ತಾಂತರ
ಗ್ರಾಮವನ್ನು ಕಸ ಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಆರಂಭದಲ್ಲಿ ಕಸ ಮುಕ್ತ ಗ್ರಾಮವನ್ನಾಗಿ ಮಾಡುವ ಸಂಕಲ್ಪವನ್ನು ಮಾಡಲಾಗಿದ್ದು ಇದರ ಆರಂಭದ ಹಂತವಾಗಿ ‘ಕಸ ಮುಕ್ತ ಮನೆ ಸ್ವಯಂ ಘೋಷಣಾ ಪತ್ರ’ವನ್ನು ಗ್ರಾಪಂನಿಂದ ಜನ ಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿಯವರಿಗೆ ಹಸ್ತಾಂತರ ಮಾಡಲಾಯಿತು.
ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ.ರವರು ಗ್ರಾಮವನ್ನು ಕಸ ಮುಕ್ತ ಗ್ರಾಮವನ್ನಾಗಿ ಮಾಡುವ ಕಾರ್ಯಕ್ರಮದ ಬಗ್ಗೆ ಮಾತನಾಡಿ ಸರ್ವರ ಸಹಕಾರವನ್ನು ಕೋರಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಅನುಗ್ರಹ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ, ಗ್ರಾಪಂ ಕಾರ್ಯದರ್ಶಿ ಜಯಂತಿ ಉಪಸ್ಥಿತರಿದ್ದರು.ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ರೇಖಾ ಯತೀಶ್, ಸುಂದರಿ ಪರ್ಪುಂಜ, ಶಾರದಾ ಆಚಾರ್ಯ, ಚಿತ್ರಾ ಬಿ.ಸಿ, ಶೀನಪ್ಪ ನಾಯ್ಕ, ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಬಿಂದು, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ದೀಪಿಕಾ, ಜತೆ ಕಾರ್ಯದರ್ಶಿ ಮಲ್ಲಿಕಾ ರೈ ಮಂದಾರ ಸೇರಿದಂತೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸುಗ್ರಾಮ ಜಾಗೃತಿ ವೇದಿಕೆ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು. ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಸ್ವಾಗತಿಸಿದರು. ಸುಗ್ರಾಮ ಸಂಯೋಜಕಿ ಕಾವೇರಿ ವಂದಿಸಿದರು. ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ನಿಶಾ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಲೋಕನಾಥ್, ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು.

ಡೈಪರ್, ಪ್ಯಾಡ್, ಪ್ಯಾಂಪರ‍್ಸ್ ಕರಗಲು 800 ವರ್ಷ ಬೇಕು…!
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪ್ಯಾಂಪರ‍್ಸ್ ಬಳಕೆ ಹೆಚ್ಚುತ್ತಿದ್ದು ಇದು ಮಹಾ ಅಪಾಯಕಾರಿ ಕಸವಾಗಿದೆ. ಮಹಿಳೆಯರು ಬಳಸುವ ಪ್ಯಾಡ್, ಡೈಪರ್, ಪ್ಯಾಂಪರ‍್ಸ್ ಇತ್ಯಾದಿಗಳು ಮಣ್ಣಲ್ಲಿ ಕರಗಲು ಬರೋಬ್ಬರಿ 500 ರಿಂದ 800 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಶೀನ ಶೆಟ್ಟಿಯವರು ತಿಳಿಸಿದರು. ಈ ರೀತಿಯ ಪ್ಯಾಂಪರ‍್ಸ್, ಪ್ಯಾಡ್‌ಗಳು ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗಗಳನ್ನು ತರಬಲ್ಲವು ಆದ್ದರಿಂದ ಇದನ್ನು ಉಪಯೋಗಿಸುವುದನ್ನು ಕಡಿಮೆ ಮಾಡಬೇಕು ಮತ್ತು ಅನಿವಾರ‍್ಯವಾಗಿ ಉಪಯೋಗಿಸಿದರೆ ಅದನ್ನು ಭೂಮಿಗೆ ಬಿಸಾಡದೆ ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.


ಸುತ್ತೋಲೆ, ಕಾಟಾಚಾರಕ್ಕೆ ಸೀಮಿತವಾಗದೆ ನಿಜವಾದ ಸ್ವಚ್ಛತಾ ಕೆಲಸ ಆಗಿದೆ.
ಒಳಮೊಗ್ರು ಗ್ರಾಮ ಪಂಚಾಯತ್‌ನ ಬಗ್ಗೆ ಹೇಳಬೇಕಾದರೆ ತಾಲೂಕಿನಲ್ಲಿಯೇ ಉತ್ತಮ ಸ್ವಚ್ಛತಾ ಕೆಲಸ ಈ ಗ್ರಾಪಂನಿಂದ ನಡೆದಿದೆ. ಕೇವಲ ಸರಕಾರದ ಸುತ್ತೋಲೆಗೆ ಸೀಮಿತವಾಗದೆ, ಕೇವಲ ಕಾಟಾಚಾರಕ್ಕೆ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆದಿಲ್ಲ ಎಂದ ಶೀನ ಶೆಟ್ಟಿಯವರು, ಎಲ್ಲರ ಸಹಕಾರದೊಂದಿಗೆ ಗ್ರಾಮದಲ್ಲಿ ಅತ್ಯುತ್ತಮವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆದಿದೆ. ಅಧಿಕಾರಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಬಹಳ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಒಳಮೊಗ್ರು ಗ್ರಾಪಂಗೆ ತಾಲೂಕಿನಲ್ಲಿಯೇ ಒಂದು ಇತಿಹಾಸವಿದೆ.
ಒಳಮೊಗ್ರು ಗ್ರಾಮ ಪಂಚಾಯತ್ ಮತ್ತು ನನಗೆ ಸುಮಾರು 35 ವರ್ಷಗಳ ಒಡನಾಟವಿದೆ. ಈ ಗ್ರಾಮ ಪಂಚಾಯತ್‌ಗೆ ತಾಲೂಕಿನಲ್ಲಿಯೇ ಒಂದು ವಿಶೇಷ ಚರಿತ್ರೆ ಇದೆ ಎಂದ ಶೀನ ಶೆಟ್ಟಿಯವರು, ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಸ್ವಚ್ಛ ಗ್ರಾಮದ ಸಂಕಲ್ಪದೊಂದಿಗೆ ಈ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವುದು ತಾಲೂಕಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.


‘ ಒಳಮೊಗ್ರು ಗ್ರಾಮದಲ್ಲಿ ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಕಸ ಮುಕ್ತ, ನಶೆ ಮುಕ್ತ, ಹಿಂಸಾಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂಬ ಸಂಕಲ್ಪವನ್ನು ಮಾಡಿದ್ದು ಇದಕ್ಕೆ ಗ್ರಾಮಸ್ಥರ ಸಹಕಾರ ಅತೀ ಅಗತ್ಯವಿದೆ.ಪ್ರತಿಯೊಬ್ಬರು ಸಹಕಾರ ನೀಡುವಂತೆ ಮನವಿ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here