ಗೋಳಿತ್ತಡಿ-ಕುದುಲೂರು ರಸ್ತೆಯಲ್ಲಿ ಹೊಂಡಗುಂಡಿ : ಏಕಾಂಗಿಯಾಗಿ ಮಣ್ಣು ಹಾಕಿ ಗುಂಡಿ ಮುಚ್ಚಿದ ಇಸಾಕ್

0

ರಾಮಕುಂಜ: ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯ ಗೋಳಿತ್ತಡಿಯಿಂದ ಕುದುಲೂರು ವರೆಗಿನ ಸುಮಾರು ೪ ಕಿಮೀ ಉದ್ದದ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಕುದುಲೂರು ನಿವಾಸಿ ಇಸಾಕ್ ಅವರು ಸ್ವಯಂ ಪ್ರೇರಿತರಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಮಣ್ಣು ಹಾಕಿ ಹೊಂಡ ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ವೃತ್ತಿಯಲ್ಲಿ ಅಡಿಕೆ ಸುಳಿಯುವ ಕಾಯಕ ಮಾಡುವ ಈ ಯುವಕನ ಕಾರ್ಯವನ್ನು ಜನ ಮೆಚ್ಚಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿನ ಗುಡ್ಡದಲ್ಲಿರುವ ಮಣ್ಣನ್ನು ಅಗೆದು ಹೊಂಡಕ್ಕೆ ಹಾಕಿದ್ದಾರೆ. ಏಕಾಂಗಿಯಾಗಿ ಎರಡು ದಿನ ಈ ಕೆಲಸ ಮಾಡಿದ್ದು ರಸ್ತೆಯಲ್ಲಿ ಓಡಾಡುವ ಮಂದಿ ಕಾರ್ಯ ಮೆಚ್ಚಿಕೊಂಡು ಎಳನೀರು, ಚಹಾ, ತಿಂಡಿಗಳನ್ನು ನೀಡಿದ್ದಾರೆ ಎನ್ನುತ್ತಾರೆ ಇಸಾಕ್ ಅವರು. ಈ ರಸ್ತೆಗೆ ಹಲವು ಭಾರಿ ತೇಪೆ ಕಾರ್ಯ ನಡೆದರೂ ಮತ್ತೆ ಮತ್ತೆ ಹೊಂಡ ನಿರ್ಮಾಣವಾಗುವುದರಿಂದ ಸಂಚಾರ ಅಯೋಗ್ಯವಾಗಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಗೆ ಹಲವು ಬಾರಿ ತೇಪೆ ಕಾರ್ಯ ನಡೆಸಲಾಗಿದೆ. ಅಂತೆಯೇ ಕಳೆದ ಬೇಸಿಗೆಯಲ್ಲೂ ತೇಪೆ ಕಾರ್ಯ ನಡೆಸಲಾಗಿತ್ತು. ಬಳಿಕ ಮಳೆಗಾಲ ಪ್ರಾರಂಭದಲ್ಲೇ ತೇಪೆ ಮಾಡಿದ ಹೊಂಡದ ಹೊರತಾಗಿ ಬೇರೆ ಕಡೆ ಹೊಂಡ ನಿರ್ಮಾಣವಾಗಿದೆ. ಹೀಗಾಗಿ ರಸ್ತೆ ದುರಸ್ತಿಯಾದರೂ ಗುಂಡಿ ಮಾತ್ರ ಅಭಾದಿತವಾಗಿ ಸಂಚಾರ ದುಸ್ತರವಾಗಿದೆ.


ಗೋಳಿತ್ತಡಿಯಿಂದ ಏಣಿತ್ತಡ್ಕ, ಕುದುಲೂರು, ಕಕ್ವೆ, ಬುಡಲೂರು, ಕೊಲ್ಯ, ಸಬಳೂರು, ಪರಂಗಾಜೆ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪ್ರಗತಿಪಥ ಯೋಜನೆಯಡಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ೯ ರಸ್ತೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪಟ್ಟಿಯಲ್ಲಿ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ರಸ್ತೆಯ ತ್ರಿವೇಣಿ ಸರ್ಕಲ್ ತನಕದ ಸುಮಾರು ೩ ಕಿಮೀ ನಷ್ಟು ಉದ್ದದ ರಸ್ತೆಯನ್ನು ಸೇರಿಸಲಾಗಿದೆ. ಇನ್ನಷ್ಟೆ ಅನುಮೋದನೆ ಸಿಗಬೇಕಾಗಿದೆ ಎನ್ನುವ ಭರವಸೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ದೊರೆತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಗೋಳಿತ್ತಡಿಯಿಂದ ಕುದುಲೂರುವರೆಗೆ ಹೊಂಡ ಗುಂಡಿಗಳಿಂದಾಗಿ ವಾಹನ ಸವಾರಿ ಮಾಡಲು ತೊಂದರೆಯಾಗುತ್ತಿರುವುದನ್ನು ಮನಗಂಡು ಮಣ್ಣು ಹಾಕಿ ಮುಚ್ಚಲು ಮುಂದಾದೆ. ಈ ಕೆಲಸದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲ. ಜನರಿಗೋಷ್ಕರ ಒಳ್ಳೆಯ ಕಾರ್ಯ ಮಾಡಿದರೆ ದೇವರ ಅನುಗ್ರಹವಿರುತ್ತದೆ ಎನ್ನುವ ನಂಬಿಕೆಯಿದೆ. ಮಣ್ಣು ಸವೆದು ಹೊಗುವ ತನಕವಾದರೂ ಸುಗಮ ಸಂಚಾರಕ್ಕೆ ತೊಂದರೆಯಾಗದು ಎನ್ನುವ ತೃಪ್ತಿಯಿದೆ.
ಇಸಾಕ್ ಕುದುಲೂರು, ಹೊಂಡಮುಚ್ಚಿದ ಯುವಕ

ಈ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿರುವುದರಿಂದ ದಿನ ನಿತ್ಯ ಓಡಾಡುವ ವಾಹನ ಸವಾರರು ಪರಾದಾಡುತ್ತಿದ್ದಾರೆ. ಈ ಮದ್ಯೆ ಇಸಾಕ್ ಏಕಾಂಗಿಯಾಗಿ ಶ್ರಮದಾನದ ಮೂಲಕ ಹೊಂಡಕ್ಕೆ ಮಣ್ಣು ಹಾಕಿಮುಚ್ಚಿ ಮಾದರಿಯಾಗಿದ್ದಾರೆ. ಸಾರ್ವಜನಿಕ ಈ ಸೇವೆ ಎಲ್ಲರೂ ಮೆಚ್ಚಲೇಬೇಕಾದದ್ದು, ಆದಷ್ಟೂ ಬೇಗ ರಸ್ತೆ ಅಭಿವೃದ್ದಿಯಾಗಲಿ.
ಬಾಲಕೃಷ್ಣ ಬುಡಲೂರು, ಉದ್ಯಮಿ ಗೋಳಿತ್ತಡಿ

LEAVE A REPLY

Please enter your comment!
Please enter your name here