ಪುತ್ತೂರು: ಪುತ್ತೂರು ತಾಲೂಕಿನ ನಗರ ನಿವಾಸಿ, ಜನತಾದಳದ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗರವರ ಮೇಲೆ ಸೆಕ್ಷನ್ 130ರ ಅಡಿಯಲ್ಲಿ ಸೇರಿಸಿರುವ ಕೇಸನ್ನು ಹಿಂಪಡೆಯಲು ಸೂಚಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಏನಿದೆ?:
ಪುತ್ತೂರು ತಾಲೂಕಿನ ನಗರ ಎಂಬಲ್ಲಿ ವಾಸ್ತವ್ಯವಿರುವ ಅಶ್ರಫ್ ಕಲ್ಲೇಗರನ್ನು ಪುತ್ತೂರು ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳು 5 ಲಕ್ಷ ರೂಪಾಯಿಗಳ ಬಾಂಡ್ ಹಾಗೂ ಜಾಮೀನು ಮುಚ್ಚಳಿಕೆ ನೀಡುವಂತೆ ಆದೇಶ ಮಾಡಿರುವುದು ಆಘಾತಕ್ಕೆ ಕಾರಣವಾಗಿದೆ. ಅಶ್ರಫ್ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕೋಮು ಸೌಹಾರ್ದಕ್ಕೆ ತನ್ನದೇ ಆದ ಸಹಾಯ ಹಸ್ತ ನೀಡಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ, ಸಹಕಾರಿ ಕ್ಷೇತ್ರದಲ್ಲಿ ನಿರಂತರವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಎಲ್ಲರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುವ ಅಶ್ರಫ್, ಯಾವತ್ತೂ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸಿಲ್ಲ . ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಿಮಿನಲ್ ಆರೋಪಗಳು ಇಲ್ಲ. ಅವರೊಬ್ಬ ಸಾಮಾಜಿಕ ಕಾರ್ಯಕರ್ತ. ಜನತಾ ಪಕ್ಷದಿಂದ ತೊಡಗಿ ಜನತಾದಳದವರೆಗೆ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿ ಸತತವಾಗಿ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಿರಿಯ ಮುಖಂಡರುಗಳ ಸ್ನೇಹಚಾರವಿದೆ. ರಾಜಕೀಯ ಪಕ್ಷದ ಮುಖಂಡನನ್ನು ಅದರಲ್ಲೂ ಅಧ್ಯಕ್ಷರನ್ನ ಸೆಕ್ಷನ್ 130 ಅಡಿಯಲ್ಲಿ ಬಾಂಡ್ ವಿಧಿಸುವ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿದೆ. ಅಶ್ರಫ್ ಅವರಿಗೆ ವಿನಾಕಾರಣ ವಿಧಿಸಲಾಗಿರುವ ಈ ಆದೇಶವನ್ನು ಪೊಲೀಸರ ವರದಿಯ ಮೇಲೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಇದು ರಾಜಕೀಯ ದ್ವೇಷಪೂರಿತವಾದಂತ ಕೃತ್ಯವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಗಮನಿಸಿ, ಕಡತಗಳನ್ನ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಎಂ.ಬಿ. ಸದಾಶಿವ ಮನವಿಯಲ್ಲಿ ಆಗ್ರಹಿಸಿದ್ದಾರೆ.
