ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನ ಬಸ್‌ನಿಲ್ದಾಣದ ಬಳಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಭವನ ನಿರ್ಮಾಣವಾಗಲಿದ್ದು ಇದಕ್ಕೆ ಪ್ರತೀ ಬೂತ್ ಮಟ್ಟದ ಕಾರ್ಯಕರ್ತರಿಂದ,ನಾಯಕರಿಂದ ಹಣ ಸಂಗ್ರಹಿಸಿ ಭವನ ನಿರ್ಮಾಣ ಮಾಡುತ್ತೇವೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪುತ್ತೂರು ನಗರ ವಲಯ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೂಚನೆಯಂತೆ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ. ಈಗಾಗಲೇ ಜಾಗವನ್ನು ಖರೀದಿ ಮಾಡಲಾಗಿದೆ. ಡಿ.20 ಕ್ಕೆ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಲಿದೆ ಎಂದು ಶಾಸಕರುಹೇಳಿದರು.
ವಿಟ್ಲ- ಉಪ್ಪಿನಂಗಡಿಯಲ್ಲೂ ಕಾಂಗ್ರೆಸ್ ಭವನ
ವಿಟ್ಲ ಬ್ಲಾಕ್ ಕಾಂಗ್ರೆಸ್ ಭವನಕ್ಕೆ ಜಾಗ ನಿಗಧಿ ಮಾಡಲಾಗಿದೆ. ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ ಶೀಘ್ರದಲ್ಲೇ ಜಾಗ ಮಂಜೂರಾಗಲಿದೆ. ಉಪ್ಪಿನಂಗಡಿಯಲ್ಲೂ ಭವನ ನಿರ್ಮಾಣಕ್ಕೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದೆ ಎಂದು ಶಾಸಕರು ಹೇಳಿದರು.
ಕಾರ್ಯಕರ್ತರಿಗಾಗಿ ಭವನ
ಕಾಂಗ್ರೆಸ್ ಪಕ್ಷಕ್ಕಾಗಿ, ಪಕ್ಷದ ಕಾರ್ಯಕರ್ತರಿಗಾಗಿ ಭವನವನ್ನು ನಿರ್ಮಾಣ ಮಾಡಲಾಗುತ್ತದೆ. ಪಕ್ಷದ ಕಚೇರಿಗೆ ಬಂದ ಕಾರ್ಯಕರ್ತರು ಸುಲಭದಲ್ಲಿ ಕಚೇರಿಗೆ ಬರುವ ಹಾಗೆ ಬಸ್ ನಿಲ್ದಾಣದಲ್ಲೇ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕರು ಹೇಳಿದರು.
ಎರಡು ಅಂತಸ್ಥಿನ ಕಟ್ಟಡ
ನೂತನವಾಗಿ ನಿರ್ಮಾಣವಾಗಲಿರುವ ಕಾಂಗ್ರೆಸ್ ಭವನ ಎಂಟು ಸೆಂಟ್ಸ್ ಜಾಗದಲ್ಲಿ ಎರಡು ಅಂತಸ್ತು ಹಾಗೂ ಮೇಲ್ಚಾವಣಿ ಸಭಾಂಗಣವನ್ನಹ ಹೊಂದಿದೆ. ಸಭಾ ಕಾರ್ಯಕ್ರಮ ನಡೆಸಲು ಮೇಲ್ಛಾವಣಿ ಸಭಾಂಗಣ ಬಳಕೆಯಾಗಲಿದೆ. ತಳ ಅಂತಸ್ತಿನಲ್ಲಿ ಬಾಡಿಗೆ ಕೋಣೆ ನಿರ್ಮಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. 8000 ಚ ಅಡಿ ಕಟ್ಟಡ ನಿರ್ಮಾಣವಾಗಲಿದೆ.
ಸಭೆಯಲ್ಲಿ ವಾಗ್ದಾನ
ಸಭೆಯಲ್ಲಿ ಶಾಸಕ ಅಶೋಕ್ ರೈ , ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ,ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ರವರು ತಲಾ ಒಂದು ಲಕ್ಷ ಕಾಂಗ್ರೆಸ್ ಭವನಕ್ಕೆ ಸಭೆಯಲ್ಲಿ ವಾಗ್ದಾನ ಮಾಡಿದರು .ಒಟ್ಟು 7 ಲಕ್ಷದ 85,000 ಹಣ ಸಂಗ್ರಹವಾಯಿತು.
ಇದು ಐತಿಹಾಸಿಕ ದಿನ – ಕಾವು ಹೇಮನಾಥ ಶೆಟ್ಟಿ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಗೆ ಕಾಂಗ್ರೆಸ್ ಭವನ ನಿರ್ಮಾಣವಾಗುತ್ತಿರುವುದು ಇತಿಹಾಸ. ಒಂದು ಉತ್ತಮ ಜಾಗದಲ್ಲಿ ಈ ಭವನ ನಿರ್ಮಾಣವಾಗುತ್ತಿದೆ. ಅಶೋಕ್ ರೈ ಶಾಸಕರಾದ ಬಳಿಕ ಪುತ್ತೂರು ಅಭಿವೃದ್ದಿಯ ಜೊತೆಗೆ ಪಕ್ಷದ ಬಲವರ್ಧನೆಯೂ ಆಗುತ್ತಿದೆ. ಮುಂದಿನ ಚುನಾವಣೆಯನ್ನು ಮುಂದಿಟ್ಟು ನಾವು ಈಗಲೇ ಮತಭೇಟೆಯಲ್ಲಿ ತೊಡಗಿಸಿಕೊಳ್ಳಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಬ್ಲಾಕ್ ಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಪಕ್ಷದ ಕಾರ್ಯಕರ್ತರ ಭವನ- ಕೆ ಪಿ ಆಳ್ವ
ಪುತ್ತೂರಿನಲ್ಲಿ ಶಾಸಕರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನ ಕಾರ್ಯಕರ್ತರ ಭವನವಾಗಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಬಲಿಷ್ಟವಾಗಿ ಬೆಳೆಯುತ್ತಿದೆ. ಅಶೋಕ್ ರೈ ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ದಿ ಶರವೇಗದಲ್ಲಿ ಸಾಗುತ್ತಿದೆ. ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯ ಸಿಗುವ ವ್ಯವಸ್ಥೆ ಪುತ್ತೂರಲ್ಲಿ ನಿರ್ಮಾಣವಾಗಿದೆ. ಕಾಂಗ್ರೆಸ್ ಗೆದ್ದ ಬಳಿಕ ಪುತ್ತೂರು ಜನ ನೆಮ್ಮದಿಯಿಂದ ಇದ್ದಾರೆ ಎಂದು ಬ್ಲಾಕ್ ಅಧ್ಯಕ್ಣ ಕೆ ಪಿ ಆಳ್ವ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ವಿಟ್ಲ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಂ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ವಕ್ತಾರ ನ್ಯಾಯವಾದಿ ದುರ್ಗಾಪ್ರಸಾದ್ ರೈ, ಶಶಿಕಿರಣ್ ರೈ ನೂಜಿಬೈಲು, ಪುರುಷೋತ್ತಮ ರೈ ಕುರಿಯ, ಬಾಬು ಮರಿಕೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು ಉಪಸ್ಥಿತರಿದ್ದರು.
