85 ರಾಣಿ ಅಬ್ಬಕ್ಕ ತುಳುವರ ಸ್ವಾಭಿಮಾನಕ್ಕೆ ಸಂಕೇತ: ಭಾಸ್ಕರ ರೈ ಕುಕ್ಕುವಳ್ಳಿ
ಬಂಟ್ವಾಳ : ‘ತುಳುನಾಡನ್ನು ಆಳಿದ 26 ಪ್ರಮುಖ ಜೈನ ರಾಜ-ರಾಣಿಯರಲ್ಲಿ 12ನೇಯವಳಾದ ಅಬ್ಬಕ್ಕ ಉಳ್ಳಾಲದಲ್ಲಿ ಸ್ವತಂತ್ರ ರಾಜಸತ್ತೆಯನ್ನು ನಡೆಸಿದವಳು. ಧರ್ಮ ನಿರಪೇಕ್ಷ ಆಡಳಿತ, ರಾಜಕೀಯ ನೈಪುಣ್ಯ, ಯುದ್ಧ ತಂತ್ರ ಮತ್ತು ಸ್ವಾತಂತ್ರ್ಯ ಪ್ರಿಯತೆಯ ಮೂಲಕ ರಾಷ್ಟ್ರದ ಗಮನಸೆಳೆದಿದ್ದ ಅವಳು ಪರಕೀಯ ಪೋರ್ಚುಗೀಸರಿಗೆ ಸಿಂಹ ಸ್ವಪ್ನವಾಗಿದ್ದಳು ತುಳುನಾಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಅಬ್ಬಕ್ಕ ರಾಣಿ ವಿದೇಶೀ ಶಕ್ತಿಗಳಿಗೆ ತಲೆಬಾಗದೆ ನಾಡ ರಕ್ಷಣೆಗಾಗಿ ಆತ್ಮಾರ್ಪಣೆ ಮಾಡಿದ ದಿಟ್ಟ ಮಹಿಳೆ’ ಎಂದು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ರೈ ಕುಕುವಳ್ಳಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ಕೆನರಾ ಇಂಜಿನಿಯರಿಂಗ್ ಕಾಲೇಜು (ಸ್ವಾಯತ್ತ) ಬಂಟ್ವಾಳ ಬೆಂಜನಪದವು ಸಹಯೋಗದಲ್ಲಿ ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ಜರಗಿದ 85ನೇ ಎಸಳಿನ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದರು. ‘ವ್ಯಾಪಾರದ ನೆಪವೊಡ್ಡಿ ಭಾರತದ ಮೇಲೆ ಅವ್ಯಾಹತವಾಗಿ ದಾಳಿ ನಡೆಸಿದ ವಿದೇಶೀ ವಸಾಹತುಶಾಹಿಯಿಗಳಾದ ಪೋರ್ಚುಗೀಸರ ವಿರುದ್ಧ ಸೆಣಸಾಡಿ, ಬೆಂಕಿಯ ಕೊಳ್ಳಿಗಳಿಂದ ಅವರ ನೌಕೆಗಳನ್ನು ಸುಟ್ಟು ಹಿಮ್ಮೆಟ್ಟಿಸಿದ ಅಬ್ಬಕ್ಕ ರಾಣಿ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬುದು ಐತಿಹಾಸಿಕ ಸತ್ಯ. ಅವಳಲ್ಲದೆ ಹೋಗಿದ್ದರೆ ಬ್ರಿಟಿಷರು ಭಾರತವನ್ನಾಳುವ ಕನಸು ಭಗ್ನವಾಗುತ್ತಿತ್ತು. ಶತಮಾನಗಳ ಕಾಲ ಈ ದೇಶವನ್ನು ಪೋರ್ಚುಗೀಸರೇ ಆಳುತ್ತಿದ್ದರು’ ಎಂದವರು ವಿಶ್ಲೇಷಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಎಂಐಟಿ ಮಣಿಪಾಲದ ಪ್ರಾಧ್ಯಾಪಕ ಡಾ.ವಾದಿರಾಜ ಗೋಪಾಡಿ ‘ಐದು ಶತಮಾನಗಳ ಹಿಂದೆ ಅಬ್ಬಕ್ಕ ರಾಣಿ ತೋರಿದ ಕೆಚ್ಚು ,ದೇಶಾಭಿಮಾನ ಇಂದಿನ ಯುವಕ ಯುವತಿಯರಿಗೆ ಸ್ಫೂರ್ತಿಯಾಗಬೇಕು. ಇತಿಹಾಸದ ಅರಿವನ್ನು ವಿಸ್ತರಿಸಿಕೊಳ್ಳಲು ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದರು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಎಚ್.ಆರ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಪರೀಕ್ಷಾ ನಿಯಂತ್ರಕ ಡೀನ್ ಡಾ.ಉದಯಕುಮಾರ್ ಕೆ. ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ಎಐ ತಂತ್ರಜ್ಞಾನದಿಂದ ಸಿದ್ಧಪಡಿಸಿದ ‘ಉಳ್ಳಾಲ ರಾಣಿ ಅಬ್ಬಕ್ಕ’ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಲಕ್ಷ್ಮೀ ಹೆಗ್ಡೆ ಪ್ರಾರ್ಥನೆ ಹಾಡಿದರು. ವಾಣಿ ಯು.ಎಚ್. ಕಾರ್ಯಕ್ರಮ ನಿರೂಪಿಸಿ, ಪ್ರಾಧ್ಯಾಪಕ ಸತೀಶ್ ಹೆಗ್ಡೆ ವಂದಿಸಿದರು. ಶಿಲ್ಪಾ ಬಿ. ಸಹಕರಿಸಿದರು.