ನ.22: ಸವಣೂರಿನಲ್ಲಿ ಪುತ್ತೂರು, ಕಡಬ ತಾಲೂಕಿನ ಗ್ರಾ.ಪಂ ಸದಸ್ಯರಿಗೆ, ಸಿಬ್ಬಂದಿಗಳಿಗೆ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ ’ ಬೊಲ್ಪು-2025-26’

0

ಪುತ್ತೂರು: ದ.ಕ.ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ಅಂತರ್ ತಾಲೂಕು ಕ್ರೀಡಾಕೂಟ ಸಂಘಟನಾ ಸಮಿತಿ, ಗ್ರಾಮ ಪಂಚಾಯತ್ ಸವಣೂರು ಇದರ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗು ಸಿಬ್ಬಂದಿಗಳಿಗೆ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟವು ’ಬೊಲ್ಪು 2025-26’ ಎಂಬ ಹೆಸರಿನಲ್ಲಿ ನ.22ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಆರೋಗ್ಯ ಮತ್ತು ಸೌಹಾರ್ದಕ್ಕೆ ಒತ್ತುಕೊಟ್ಟು ಈ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು ಆ ಮೂಲಕ ಎಲ್ಲಾ ಪಂಚಾಯತ್‌ಗಳ ಕಾರ್ಯವೈಖರಿಯನ್ನು ಹಂಚಿಕೊಳ್ಳಲು ಒಂದು ಅವಕಾಶ ಸಿಗಲಿದೆ. ಅಲ್ಲದೆ ಕ್ರೀಡಾ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಇಲ್ಲಿ ಪ್ರದರ್ಶನಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಗ್ರಾ.ಪಂ ಕಾರ್ಯವೈಖರಿ ಪ್ರತಿ ನಾಗರಿಕರಿಗೂ ತಿಳೀಸಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವಾಗಲಿದೆ ಎಂದವರು ಹೇಳಿದರು.


ಪಂಚಾಯತ್ ಸದಸ್ಯ ಗಿರಿಶಂಕರ ಸುಲಾಯ ಅವರು ಮಾತನಾಡಿ ಕಡಬ ಮತ್ತು ಪುತ್ತೂರು ತಾಲೂಕು ಜೊತೆಯಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಸೇರಿ ಕಡಬದಲ್ಲಿ 420 ಮಂದಿ, ಪುತ್ತೂರು ತಾಲೂಕಿನಲ್ಲಿ 500 ಮಂದಿ ಒಟು ಸುಮಾರು 1ಸಾವಿರ ಮಂದಿ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಯೋಮಾನದ ಮಿತಿಯಲ್ಲಿ ಸ್ಪರ್ಧೆ ನಡೆಯಲಿದೆ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡೆಸೆತ, ಚಕ್ರ ಎಸೆತ, ಈಟಿ ಎಸೆತ, ಹಗ್ಗಜಗ್ಗಾಟ, ರಿಲೇ ಸ್ಪರ್ಧೆಯಲ್ಲಿದೆ. ಸುಮಾರು 800 ಪದಕ ಮತ್ತು ಪ್ರಶಸ್ತಿ ವಿತರಣೆ ನಡೆಯಲಿದ್ದು, ಒಟ್ಟು ಕಾರ್ಯಕ್ರಮಕ್ಕೆ ಸುಮಾರು 6ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದನ್ನು ಪಂಚಾಯತ್ ಮೂಲಕ ಭರಿಸಲಾಗುವುದು. ಈ ನಡುವೆ ಪಂಚಾಯತ್‌ಗಳಿಗೆ ಮನವಿ ಪತ್ರವನ್ನೂ ನೀಡಿದ್ದೇವೆ ಎಂದ ಅವರು ಬೆಳಗ್ಗೆ ಗಂಟೆ 9ಕ್ಕೆ ಕ್ರೀಟಾಕೂಟ ಆರಂಭಗೊಳ್ಳಲಿದೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.


ಉದ್ಘಾಟನೆ:
ಕಾರ್ಯಕ್ರಮದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ನೆರವೇರಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕ್ರೀಡಾಕೂಟದ ಉದ್ಘಾಟನೆ ಮಾಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಧ್ವಜಾರೋಹಣ ಮಾಡಲಿದ್ದಾರೆ. ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಧ್ವಜವಂದನೆ ನೆರವೇರಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಸಹಿತ ಹಲವಾರು ಮಂದಿ ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗಿರಿಶಂಕರ ಸುಲಾಯ ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸವಣೂರು ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ಕೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ವಸಂತ ಶೆಟ್ಟಿ, ಸದಸ್ಯರಾದ ತೀರ್ಥರಾಮ ಕೆಡೆಂಜಿ, ರಫೀಕ್ ಎಂ.ಎ, ಅಬ್ದುಲ್ ರಜಾಕ್ ಕೆನರಾ, ಶೀನಪ್ಪ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here