





ಉಪ್ಪಿನಂಗಡಿ: ವಿದ್ಯಾಭ್ಯಾಸವೆನ್ನುವುದು ಕೇವಲ ಹಣ ಗಳಿಕೆಯ ಉದ್ದೇಶಕ್ಕಷ್ಟೇ ಸೀಮಿತವಾಗಬಾರದು. ಶಿಸ್ತು, ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳುವುದು ನಮ್ಮ ಗುರಿಯಾಗಬೇಕು ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ತಿಳಿಸಿದರು.


ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆಯಡಿಯಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಮಾತನಾಡಿದ ಅವರು, ನಮ್ಮ ಸಂಘವು ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿಯ ಮೇಲೆ ವಿದ್ಯಾಶ್ರೀ ಯೋಜನೆಯನ್ನು ಹಮ್ಮಿಕೊಂಡಿದ್ದು, ನಾಳೆಯ ದಿನ ವಿದ್ಯಾರ್ಥಿಗಳು ಸಾಮಾಜಿಕ ಹಿತವನ್ನು ಬಯಸುವ ರೀತಿಯಲ್ಲಿ ಜೀವನವನ್ನು ನಡೆಸಬೇಕು. ಉತ್ತಮ ಗುಣ ನಡತೆಗಳನ್ನು ನಾವು ರೂಪಿಸಿಕೊಂಡಲ್ಲಿ ಪಡೆದ ವಿದ್ಯೆಗೆ ಮೌಲ್ಯಗಳು ಬರುತ್ತವೆ. ಇದರ ಜೊತೆಗೆ ಹೆತ್ತವರು ಕೂಡಾ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಅಧ್ಯಯನದ ಸಮಯದಲ್ಲಿ ದಾರಿ ತಪ್ಪದಂತೆ ಎಚ್ಚರದಿಂದ ಗಮನಿಸಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದರು.





ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಎಸ್., ನಿರ್ದೇಶಕರಾದ ರಾಜೇಶ್, ರಾಘವ ನಾಯ್ಕ್,ಸುಂದರ ಕೆ., ಶ್ರೀಮತಿ ಸಂಧ್ಯಾ, ಶ್ರೀಮತಿ ಗೀತಾ, ಈ ಸಂದರ್ಭದಲ್ಲಿ ಸಂಘದ ನೌಕರರು, ಸದಸ್ಯರು, ವಿದ್ಯಾರ್ಥಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು.. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀಮತಿ ಶೋಭಾ ಕೆ. ಸ್ವಾಗತಿಸಿದರು. ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ಪುಷ್ಪರಾಜ ಶೆಟ್ಟಿ ಎಚ್. ವಂದಿಸಿದರು. ಶಾಖಾ ವ್ಯವಸ್ಥಾಪಕ ಪ್ರವೀಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.










