ನ.23ಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ಶಿಲಾನ್ಯಾಸ ಕಾರ್ಯಕ್ರಮ

0


ಪುತ್ತೂರು: ಇತಿಹಾಸ ಪ್ರಸಿದ್ಧಿ ಪಡೆದ ಬಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಯಾತ್ರಿನಿವಾಸ ಮತ್ತು ಅನ್ನಛತ್ರದ ನಿರ್ಮಾಣದ ಯೋಜನೆಗೆ ನ.23ರಂದು ಬೆಳಿಗ್ಗೆ ಗಂಟೆ 10ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ದಿ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಆಡಳಿತ ಸಮಿತಿ ಮತ್ತು ದೇಯಿ ಬೈದೇತಿ ಮೂಲಸ್ಥಾನ ಟ್ರಸ್ಟ್‌ನಿಂದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಮತ್ತು ಅನ್ನಛತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು. ಈಗಾಗಲೇ ಅದರ ನೀಲನಕಾಶೆ ಸಿದ್ದಗೊಂಡಿದೆ. ಕ್ಷೇತ್ರ ಸಮೀಪ 4 ಎಕ್ರೆ ಜಾಗ ಖರೀದಿಸಿ. ಅದರಲ್ಲಿ ಯಾತ್ರಿ ನಿವಾಸ ನಿರ್ಮಾಣ ಆಗಲಿದೆ. ಸುಮಾರು ರೂ. 7 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದೆ. ಅನ್ನಛತ್ರವು ಗೆಜ್ಜೆಗಿರಿ ಧರ್ಮಚಾವಡಿಯ ಎದುರು ಭಾಗದಲ್ಲಿ ನಿರ್ಮಾಣ ಆಗಲಿದೆ. ಯಾತ್ರಿ ನಿವಾಸದ ಶಿಲಾನ್ಯಾಸವನ್ನು ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಅವರು ನೆರವೇರಿಸಲಿದ್ದಾರೆ. ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಲಿದ್ದಾರೆ. ಕೇಂದ್ರದ ಮಂತ್ರಿ ಶ್ರೀಪಾದ ನಾಯ್ಕ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅಶೋಕ್ ಕುಮಾರ್ ರೈ ಸಹಿತ, ಜನಪ್ರತಿನಿಧಿಗಳು, ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.


ಅನುದಾನ ಹಂತಹಂತವಾಗಿ ಕ್ಷೇತ್ರಕ್ಕೆ ಬಳಕೆ
ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ ಅವರು ಮಾತನಾಡಿ ಶಾಸಕರ ಮತ್ತು ಸಹಾಯಕ ಕಮೀಷನರ್ ನೇತೃತ್ವದಲ್ಲಿ ಸರಕಾರದ ಹಂತದಲ್ಲಿ ರೂ. 2 ಕೋಟಿ ಹಣ ಮೀಸಲಿಡಲಾಗಿದೆ. ಆ ಅನುದಾನವನ್ನು ಹಂತ ಹಂತವಾಗಿ ಕ್ಷೇತ್ರಕ್ಕೆ ಬಳಕೆ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ದೇಯಿ ಬೈದೆತಿ ಕೋಟೆ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ನಾರಾಯಣ ಮಚ್ಚಿಮಲೆ, ದೇಯಿ ಬೈದೆತಿ ಕೋಟೆ ಚೆನ್ನಯ ಮೂಲಸ್ಥಾನ ಅಭಿವೃದ್ದಿ ಟ್ರಸ್ಟ್‌ನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.

ಯೋಚನೆ, ಯೋಜನೆ ತುಂಬಾ ಇದೆ
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪರವೂರು, ವಿದೇಶಗಳಿಂದಲೂ ಅನೇಕ ಮಂದಿ ಭಕ್ತರು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮೂಲಭೂತ ಸೌಕರ್ಯ ನೀಡುವ ಉದ್ದೇಶದಿಂದ ಯಾತ್ರಿ ನಿವಾಸ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ಯೋಜನೆ ಕೈಗೊಂಡಿದ್ದೇವೆ. ನಮ್ಮ ಯೋಚನೆ, ಯೋಜನೆ ತುಂಬಾ ಇದೆ. ಅದರಲ್ಲಿ ಮುಂದೆ ಧ್ಯಾನ ಮಂದಿರ, ಶ್ರೀ ತಾಯಿ ದೇಯಿ ಬೈದೆತಿ ಔಷಧ ವನದಲ್ಲಿ ಆಯುರ್ವೇದ ಅಸ್ಪತ್ರೆ ಸಹಿತ ಹಲವು ಯೋಜನೆ ನಮ್ಮ ಮುಂದಿದೆ. ಕ್ಷೇತ್ರದಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಒಂದು ವರ್ಷದಲ್ಲಿ ಆಗಲಿದೆ.
ಜಯಂತ ನಡುಬೈಲು ಗೌರವಾಧ್ಯಕ್ಷರು, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ

ಯಾತ್ರಿ ನಿವಾಸ
ಸುಮಾರು 60ಸಾವಿರ ಚದರ ಅಡಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದ್ದು, ಒಟ್ಟು 5 ಅಂತಸ್ತು ಇರಲಿದೆ. ನೆಲ ಮಹಡಿಯಲ್ಲಿ ಪಾಕಶಾಲೆ, ಮೇಲಂತಸ್ತಿನಲ್ಲಿ 20 ಕೊಠಡಿಗಳು, ಸಮುದಾಯಭವನ, ದೇಯಿ ಬೈದೆತಿ ಆಯುರ್ವೇದ ಸಂಶೋಧನಾ ಟ್ರಸ್ಟ್ ಬರಲಿದೆ. ಪ್ರಥಮ ಹಂತದಲ್ಲಿ 20 ಕೊಠಡಿಗಳು ನಿರ್ಮಾಣ ಆಗಲಿದೆ.
ಸಂಜೀವ ಪೂಜಾರಿ ಬಿರ್ವ ಅಧ್ಯಕ್ಷರು, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ದಿ ಟ್ರಸ್ಟ್

LEAVE A REPLY

Please enter your comment!
Please enter your name here