
ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಶಿರೋಡಿಯನ್ ತರವಾಡು ಮನೆಯ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ನ. 18 ಮತ್ತು 19 ರಂದು ತಂತ್ರಿಗಳಾದ ಶಿವಪ್ರಸಾದ್ ಶಾಂತಿ ಸರಪಾಡಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ನ. 18 ರಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಧರ್ಮದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಟೆ, ಧೂಮಾವತಿ, ವರ್ಣರ ಪಂಜುರ್ಲಿ, ಕೊರತಿ ಮೈಯಂತಿ, ರಾಜನ್ ಪೀಠ ಪ್ರತಿಷ್ಟಾ ಕಾರ್ಯಕ್ರಮ ನಡೆಯಿತು. ನಂತರ ಪಾನಕ ಪೂಜೆ, ರಕ್ತೇಶ್ವರಿ ಗುಳಿಗ ತಂಬಿಲ, ಸಂಜೆ ರಾಹುಗುಳಿಗ ತಂಬಿಲ ನಡೆದು, ಕಲ್ಲಾಳ್ತಗುಳಿಗ ದೈವದ ಕೋಲ ನೆರವೇರಿತು.
ಬಳಿಕ ಮೈಸಂದಾಯ, ಧೂಮಾವತಿ ವರ್ಣರ ಪಂಜುರ್ಲಿ ಭಂಡರ ತೆಗೆದು ಮೈಸಂದಾಯ ನೇಮ, ಧೂಮಾವತಿ ದೈವದ ನೇಮ ಹಾಗೂ ವರ್ಣರ ಪಂಜುರ್ಲಿ ದೈವದ ನೇಮೋತ್ಸವ ಜರಗಿತು.
ನ. 19 ರಂದು ಸಂಜೆ ಕೊರತಿ ಮತ್ತು ಮೈಯಂತಿ ದೈವದ ಕೋಲ ನಡೆದು ಬಳಿಕ ಧರ್ಮದೈವ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವದ ಭಂಡಾರ ಇಳಿಸಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಧರ್ಮದೈವ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು.
ಗೌರವಾರ್ಪಣೆ
ಇದೇ ವೇಳೆ ಕುಟುಂಬಸ್ಥರ ಪರವಾಗಿ ದೈವಜ್ಞ ಹಾಗೂ ತಂತ್ರಿ ಶಿವಪ್ರಸಾದ್ ಶಾಂತಿ ಸರಪಾಡಿಯವರಿಗೆ ಮತ್ತು ವಾಸ್ತು ಶಿಲ್ಪಿ ದಿವಾಕರ ಆಚಾರ್ಯ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ, ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು. ಕುಟುಂಬದ ಮುಖ್ಯಸ್ಥರಾದ ರಾಮಣ್ಣ ಪೂಜಾರಿ ಮತ್ತು ಕುಟುಂಬಿಕರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.