ಪ್ರತಿಕ್ರಿಯಿಸಲು ನಿರಾಕರಿಸಿದ ಬಿ.ವೈ. ವಿಜಯೇಂದ್ರ
ಮನೆ ಮನೆಗೆ ಆಹ್ವಾನ ನೀಡಿದರೂ ನಮಗೆ ಆಹ್ವಾನ ಇರಲಿಲ್ಲ-ಪುತ್ತಿಲ
ಫೋನ್ ಮಾಡಿದರೂ ಕರೆ ಸ್ವೀಕರಿಸಿಲ್ಲ -ಬೊಟ್ಯಾಡಿ
ಗೊಂದಲ ನಿವಾರಣೆ ಆಗಲಿದೆ -ಉಜಿರೆಮಾರು
ಪುತ್ತೂರು:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ದಿ ಪ್ರಯುಕ್ತ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ನ.19ರಂದು ಪುತ್ತೂರುನಲ್ಲಿ ನಡೆದ ಜಿಲ್ಲಾ ಮಟ್ಟದ ‘ಅಟಲ್ ವಿರಾಸತ್’ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿಯ ಬಹುತೇಕ ಮುಖಂಡರು ಪಾಲ್ಗೊಂಡಿದ್ದರೂ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ,ಪರಿವಾರದ ಕೆಲ ಪ್ರಮುಖರು ಗೈರು ಹಾಜರಾಗಿದ್ದರು.ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಅಂತರ ಹೆಚ್ಚಾಗಿ ಮತ್ತೆ ಬಿರುಕು ಮೂಡಿದೆ ಎಂಬ ರಾಜಕೀಯ ಅಭಿಪ್ರಾಯಗಳಿಗೆ ಇದು ಪುಷ್ಟಿ ನೀಡಿದೆ.
ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಸಂಸದರಾದ ಕ್ಯಾ|ಬ್ರಿಜೇಶ್ ಚೌಟ, ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲೆಯ ಬಿಜೆಪಿ ಶಾಸಕರು,ಮಾಜಿ ಶಾಸಕರು, ಜಿಲ್ಲಾ ಮತ್ತು ಮಂಡಲ ಬಿಜೆಪಿ ಅಧ್ಯಕ್ಷರು,ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಪಕ್ಷದ ಹೆಚ್ಚಿನ ಪ್ರಮುಖರು ಪಾಲ್ಗೊಂಡಿದ್ದರು.ಆದರೆ ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾಗಿರುವ ಪರಿವಾರದ ಪ್ರಮುಖರಾಗಿರುವ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ ಸಹಿತ ಬಿಜೆಪಿಯಲ್ಲಿದ್ದು ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿರುವ ಕೆಲವು ಪ್ರಮುಖರ ಅನುಪಸ್ಥಿತಿ ಇತ್ತು.ಈ ಹಿಂದೆ ನಡೆದ ಮಾತುಕತೆಯ ಪರಿಣಾಮ ಪುತ್ತಿಲ ಪರಿವಾರ ಮತ್ತು ಬಿಜೆಪಿ ಒಂದಾಗಿದ್ದರೂ ಇದೀಗ ಮತ್ತೆ ಬಿರುಕು ಮೂಡಿದೆ. ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ನಡುವೆಯೇ ಅಟಲ್ ವಿರಾಸತ್‌ನಲ್ಲಿ ಅರುಣ್ ಪುತ್ತಿಲ ಮತ್ತು ಪರಿವಾರದ ಇತರ ಕೆಲ ಪ್ರಮುಖರ ಅನುಪಸ್ಥಿತಿ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಹುಟ್ಟಿಕೊಂಡಿದ್ದ ಪುತ್ತಿಲ ಪರಿವಾರ, ಬಿಜೆಪಿ ಮತ್ತು ಪರಿವಾರದ ಪ್ರಮುಖರ ನಿರಂತರ ಮಾತುಕತೆಯ ಪರಿಣಾಮವಾಗಿ, ಭಿನ್ನಾಭಿಪ್ರಾಯಗಳನ್ನು ಮರೆತು 2024ರ ಮಾರ್ಚ್ ತಿಂಗಳಲ್ಲಿ ಕೊನೆಗೂ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗಿತ್ತು.ರಾಜಕೀಯವಾಗಿ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗಿದ್ದರೂ ಪುತ್ತಿಲ ಪರಿವಾರ ಸಂಘಟನೆಯ ಕಾರ್ಯಚಟುವಟಿಕೆಗಳು ಪ್ರತ್ಯೇಕವಾಗಿ ನಡೆಯುತ್ತಲೇ ಬಂದಿದೆ.
ಬಿಜೆಪಿಯೊಂದಿಗೆ ವಿಲೀನ:
2024ರ ಮಾ.16ರಂದು ಅರುಣ್ ಕುಮಾರ್ ಪುತ್ತಿಲ ಅವರು ಮಂಗಳೂರಿನಲ್ಲಿ ಬಿಜೆಪಿ ಸದಸ್ಯತ್ವ ಪಡೆದುಕೊಂಡು ಅಧಿಕೃತವಾಗಿ ಮಾತೃಪಕ್ಷಕ್ಕೆ ವಾಪಸಾಗಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಪುತ್ತಿಲ ಅವರಿಗೆ ಪಕ್ಷದ ಶಾಲು ಹೊದಿಸಿ ಅಧಿಕೃತವಾಗಿ ಪಕ್ಷಕ್ಕೆ ಸ್ವಾಗತಿಸಿ,ಪುತ್ತಿಲ ಪರಿವಾರ ಸಂಘಟನೆಯ ಸದಸ್ಯರ ಸಮ್ಮುಖದಲ್ಲಿ ಪಕ್ಷದ ಸದಸ್ಯತ್ವ ರಶೀದಿಯನ್ನು ಹಸ್ತಾಂತರಿಸಿದ್ದರು.ಬಳಿಕದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರದ ಆಗಿನ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನ ಮತ್ತು ಪುತ್ತಿಲ ಪರಿವಾರದ ಪ್ರಮುಖರಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ ಅವರಿಗೆ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಅನಿಲ್ ತೆಂಕಿಲ ಅವರಿಗೆ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು.ಆ ಬಳಿಕ ಎಲ್ಲರೂ ಸೇರಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮತ್ತೆ ದೂರ-ದೂರ:
ಇದೀಗ ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಪುತ್ತಿಲ ಪರಿವಾರದ ಪ್ರಮುಖರು ಬಿಜೆಪಿಯಿಂದ ದೂರ ಉಳಿದಿರುವುದು ವಿವಿಧ ಸಂದರ್ಭಗಳಲ್ಲಿ ಬೆಳಕಿಗೆ ಬಂದಿದೆ.ಪುತ್ತೂರು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿದ್ದು ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿರುವ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ ಮತ್ತು ಅನಿಲ್ ತೆಂಕಿಲ ಅವರು ಕಳೆದ ಮೂರ‍್ನಾಲ್ಕು ತಿಂಗಳಿನಿಂದ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರೆ.ಅರುಣ್ ಕುಮಾರ್ ಪುತ್ತಿಲ ಅವರೂ ಪಕ್ಷದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡಿಮೆಯಾಗಿತ್ತು.
ಶ್ರೀನಿವಾಸ ಕಲ್ಯಾಣೋತ್ಸವದ ಬಳಿಕ ಮುಂದಿನ ನಿರ್ಧಾರ:
ತಮ್ಮನ್ನು ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸದೆ ಕಡೆಗಣಿಸಲಾಗುತ್ತಿದೆ ಎಂದು ಇತ್ತೀಚೆಗೆ ರಾತ್ರಿ ವೇಳೆ ದಿಢೀರ್ ಸಭೆ ಸೇರಿ ಅಸಮಾಧಾನ ಹೊರ ಹಾಕಿದ್ದ ಪುತ್ತಿಲ ಪರಿವಾರದ ಪ್ರಮುಖರು, ನ.29,30ರಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ತನಕ ತಟಸ್ಥರಾಗಿದ್ದು ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವ ಕುರಿತು ನಿರ್ಧರಿಸಿದ್ದ ವಿಚಾರ ವರದಿಯಾಗಿತ್ತು.‘ಅಟಿಲ್ ವಿರಾಸತ್’ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ, ಪತ್ರಿಕಾಗೋಷ್ಟಿ ಸಂದರ್ಭವೂ ಪುತ್ತಿಲ ಪರಿವಾರದ ಪ್ರಮುಖರಾಗಿರುವ ಬಿಜೆಪಿಯ ಮೂವರು ಪ್ರಧಾನ ಕಾರ್ಯದರ್ಶಿಗಳು ಗೈರಾಗಿದ್ದರು.ನ.19ರಂದು ಪುತ್ತೂರಿನಲ್ಲಿ ನಡೆದ, ಸ್ವತ: ಪಕ್ಷದ ರಾಜ್ಯಾಧ್ಯಕ್ಷರೇ ಭಾಗವಹಿಸಿದ್ದ ಅಟಲ್ ವಿರಾಸತ್ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿಯೇ ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ಮುಖಂಡರು ಗೈರು ಹಾಜರಾಗಿರುವುದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.
ಪರಿವಾರದ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರು ಭಾಗಿ:
ಪುತ್ತಿಲ ಪರಿವಾರದ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ,ಸಾಮೂಹಿಕ ವಿವಾಹವಾಗುವ ವಧು-ವರರ ತಾಂಬೂಲ ಶಾಸ್ತ್ರ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಸಹಿತ ಕೆಲವರು ಭಾಗವಹಿಸಿದ್ದರು.ಪರಿವಾರದ ಕಚೇರಿ ನವೀಕರಣದ ವೇಳೆ ಬಿಜೆಪಿಯ ಹಿರಿಯರಾದ ಮಾಜಿ ಮಂಡಲಾಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ ಅವರು
ಭಾಗವಹಿಸಿದ್ದರು.
ಮನೆ ಮನೆಗೆ ಆಹ್ವಾನ ನೀಡಿದರೂ ನಮಗೆ ಆಹ್ವಾನ ಇರಲಿಲ್ಲ
ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ.ಮನೆ ಮನೆಗೆ ಕಾರ್ಯಕರ್ತರು ಹೋಗಿ ಎಲ್ಲರಿಗೂ ಆಹ್ವಾನ ನೀಡಿದರೂ ನಮ್ಮ ಮನೆಗೆ ಯಾರೂ ಬಂದಿಲ್ಲ.ಆಹ್ವಾನ ಇಲ್ಲದೆ ಹೋಗುವುದು ಸರಿಯಲ್ಲ ಎಂದು ಹೋಗಿಲ್ಲ.ಇದರ ನಡುವೆ ಅಟಲ್‌ಜೀ ಅವರ ಜನ್ಮಶತಾಬ್ದಿಯಂಗವಾಗಿ ಪಾಣಾಜೆಯಲ್ಲಿ ಸುಮಾರು ಒಂದುಕಾಲು ಲಕ್ಷ ರೂಪಾಯಿ ವೆಚ್ಚದಲ್ಲಿ ಬಡವರೊಬ್ಬರಿಗೆ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡುವ ಕಾರ್ಯಕ್ರಮ ಮಾಡಿದ್ದೆವು.ಆ ಕಾರ್ಯಕ್ರಮಕ್ಕೆ ಸಂಘ ಪರಿವಾರದ ಹಿರಿಯರು ಆಗಮಿಸಿದ್ದರು.ಅವರಲ್ಲಿಯೇ ಪಕ್ಷದ ಕೆಲವರು ‘ಯಾಕೆ ಹೋದದ್ದು’ ಎಂದು ಪ್ರಶ್ನಿಸಿದ್ದಾರೆ.ಈ ಹಿಂದೆ ವಿಹಿಂಪ ಕಟ್ಟಡ ಶಿಲಾನ್ಯಾಸದ ಸಂದರ್ಭದಲ್ಲಿಯೂ ಗೊಂದಲ ಉಂಟಾಗಿತ್ತು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸುನಿಲ್ ಕುಮಾರ್ ಅವರು ನೀಡಿದ್ದ ಭರವಸೆಯಂತೆ ಸುಮ್ಮನಿದ್ದೆವು.ನಾವು ಸಂಘಟನೆ ಮಾಡುವವರು ಹೊರತು ಒಡೆಯುವವರಂತೂ ಅಲ್ಲ
ಅರುಣ್ ಕುಮಾರ್ ಪುತ್ತಿಲ
ಸಂಚಾಲಕರು,ಪುತ್ತಿಲ ಪರಿವಾರ ಸೇವಾ ಟ್ರಸ್ಟ್
ಪ್ರತಿಕ್ರಿಯೆಗೆ ಬಿವೈವಿ ನಿರಾಕರಣೆ
ಅಟಲ್ ವಿರಾಸತ್ ಸಭಾಕಾರ್ಯಕ್ರಮದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದ ವೇಳೆ ಮಾಧ್ಯಮದವರು ‘ಅರುಣ್ ಕುಮಾರ್ ಪುತ್ತಿಲ ಗೈರು ಹಾಜರಿ’ ಕುರಿತು ಅವರನ್ನು ಪ್ರಶ್ನಿಸಿದರು.ಆದರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.
ಫೋನ್ ಮಾಡಿದರೂ ಕರೆ ಸ್ವೀಕರಿಸಿಲ್ಲ
ಅಟಲ್ ವಿರಾಸತ್ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಕಾರ್ಯಕ್ರಮಕ್ಕೆ ಬಿಜೆಪಿ ಪ್ರಮುಖರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರೆ ಮಾಡಿದ್ದಾರೆ.ಆದರೆ ಅವರು ಕರೆ ಸ್ವೀಕರಿಸುತ್ತಿರಲಿಲ್ಲ.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರ ಸಮ್ಮುಖದಲ್ಲಿ ನಾನೇ ಕರೆ ಮಾಡಿದರೂ ಅರುಣ್ ಕುಮಾರ್ ಪುತ್ತಿಲ ಕರೆ ಸ್ವೀಕರಿಸಲಿಲ್ಲಕಿಶೋರ್ ಕುಮಾರ್ ಬೊಟ್ಯಾಡಿ ಸಂಚಾಲಕರು,ಅಟಲ್ ವಿರಾಸತ್
ಗೊಂದಲ ನಿವಾರಣೆ ಆಗಲಿದೆ
ಪುತ್ತೂರಿನಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಬೇಕು ಅನ್ನುವುದು ನಮ್ಮೆಲ್ಲರ ಉದ್ದೇಶ.ಸಣ್ಣ ಪುಟ್ಟ ಗೊಂದಲ ಇರುವುದು ನಿಜ.ಪಕ್ಷದ ವರಿಷ್ಠರು ಅದನ್ನು ಸರಿ ಮಾಡುವ ವಿಶ್ವಾಸ ಇದೆ
-ದಯಾನಂದ ಶೆಟ್ಟಿ ಉಜಿರೆಮಾರು ಅಧ್ಯಕ್ಷರು, ಬಿಜೆಪಿ ಗ್ರಾಮಾಂತರ ಮಂಡಲ
