ಉಪ್ಪಿನಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ 500ಕ್ಕಿಂತ ಹೆಚ್ಚು ಬಾಕಿ ಇರುವವರ ಹಾಗೂ ನೀರಿನ ಮೀಟರ್ ಹಾಳಾದವರು ಗ್ರಾ.ಪಂ.ನ ನೋಟೀಸ್ ತಲುಪಿದ ಒಂದು ವಾರದೊಳಗೆ ಅದನ್ನು ರಿಪೇರಿ ಮಾಡಿಸದಿದ್ದಲ್ಲಿ ಅಂತವರ ಕುಡಿಯುವ ನೀರಿನ ಸಂರ್ಪಕವನ್ನು ಕಡಿತಗೊಳಿಸಲು ಕ್ರಮವಹಿಸಬೇಕೆಂಬ ನಿರ್ಣಯ 34 ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ಗಳನ್ನು ಹಲವರು ಸರಿಯಾಗಿ ಗ್ರಾ.ಪಂ.ಗೆ ಪಾವತಿಸುತ್ತಿಲ್ಲ. ಇದರಿಂದ ಗ್ರಾಮದ ಅಭಿವೃದ್ಧಿಗೆ ಧಕ್ಕೆಯಾಗಿದೆ. ಆದ್ದರಿಂದ 500ರೂ.ಗಿಂತ ಮೇಲ್ಪಟ್ಟು ನೀರಿನ ಕರ ಬಾಕಿ ಉಳಿಸಿಕೊಂಡವರ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು ಹಾಗೂ ಇನ್ನು ಹಲವರ ನೀರಿನ ಮೀಟರ್ ಹಾಳಾಗಿದ್ದು, ಅಂಥವರಿಗೆ ಗ್ರಾ.ಪಂ. ನೋಟೀಸ್ ನೀಡಿದ ಒಂದು ವಾರದೊಳಗೆ ಅದನ್ನು ದುರಸ್ತಿಪಡಿಸದಿದ್ದಲ್ಲಿ ಅಂತವರ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಗ್ರಾ.ಪಂ. ಸದಸ್ಯ ಪ್ರಶಾಂತ್ ಎನ್. ಮಾತನಾಡಿ, ಗ್ರಾಮಕ್ಕೆ ಮಂಜೂರುಗೊಂಡ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಪಹಣಿಯಲ್ಲಿ ನಾಲ್ಕು ಸೆಂಟ್ಸ್ ಜಾಗ ಇದೆಯೆಂದು ಇದೆ. ಆದರೆ ನಕ್ಷೆಯಲ್ಲಿ ಮೂರು ಸೆಂಟ್ಸ್ ಮಾತ್ರ ನಮೂದಾಗಿದೆ. ಆದ್ದರಿಂದ ಈ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಿಕೊಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಬೇಕೆಂದು ಆಗ್ರಹಿಸಿದರು.
ರಸ್ತೆ ಕಾಂಕ್ರಿಟೀಕರಣ ಬಳಿಕವೇ ಮರಳು ಗಣಿಗಾರಿಕೆ ಅವಕಾಶ
ಉಪಾಧ್ಯಕ್ಷ ಹರೀಶ್ ಡಿ. ಮಾತನಾಡಿ, ದರ್ಬೆ- ಬೊಳಂತಿಲ ರಸ್ತೆ ಕಿರಿದಾಗಿದ್ದು, ನೇತ್ರಾವತಿ ನದಿಯಿಂದ ಮರಳು ತೆಗೆಯಲು ಜನವರಿ ತನಕ ಇಲಾಖೆಯು ಅನುಮತಿ ನೀಡಿದೆ. ಆದ್ದರಿಂದ ಮರಳು ಗಣಿಗಾರಿಕೆಯ ಪರವಾನಿಗೆಯನ್ನು ನವೀಕರಣ ಮಾಡುವ ಮೊದಲು ಇಲ್ಲಿ ರಸ್ತೆ ಅಗಲೀಕರಣವಾಗಿ ರಸ್ತೆಯನ್ನು ಕಾಂಕ್ರೀಟ್ ಕಾಮಗಾರಿಗೆ ಒಳಪಡಿಸಬೇಕು. ಅ ಬಳಿಕವೇ ಮರಳು ಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ಗಣಿ ಇಲಾಖೆಗೆ ಪತ್ರ ಬರೆಯಲು ಕೋರಿದರು.
ಜಾಗೃತಿ ಫಲಕ ಅಳವಡಿಸಲಿ
ನೆಕ್ಕಿಲಾಡಿ- ಬೊಳಂತಿಲದವರೆಗೆ ಹೆದ್ದಾರಿ ಕಿರಿದಾಗಿದ್ದು, ದಿನನಿತ್ಯ ಅಪಾಯ, ಅವಘಡಗಳು ಇಲ್ಲಿ ಸಂಭವಿಸುತ್ತಿವೆ. ಆದ್ದರಿಂದ ಇಲ್ಲಿ ಹಾಗೂ ಶಾಲಾ ವಠಾರದ ಬಳಿಯಲ್ಲಿ ಜಾಗೃತಿ -ಲಕಗಳನ್ನು ಹಾಕಲು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲು ಸದಸ್ಯರು ಆಗ್ರಹಿಸಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ಸಿ.ಸಿ. ಕ್ಯಾಮರಾವನ್ನು ತ್ಯಾಜ್ಯ ಬಿಸಾಡುವ ಆಯಕಟ್ಟಿನ ಜಾಗಕ್ಕೆ ಸ್ಥಳಾಂತರಿಸಲು ಸದಸ್ಯೆ ಸ್ವಪ್ನ ಆಗ್ರಹಿಸಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ಮುಂದೆ ಬಂದಿರುವ ಕುರಿತು ಗ್ರಾ.ಪಂ. ಪಿಡಿಒ ರವಿಚಂದ್ರ ಅವರು ಸಭೆಯ ಗಮನಕ್ಕೆ ತಂದಾಗ, ಕೆಲವೊಂದು ಷರತ್ತು ವಿಧಿಸಿ ಒಪ್ಪಿಗೆ ನೀಡುವಂತೆ ಸದಸ್ಯರು ಸೂಚಿಸಿದರು. ಗ್ರಾ.ಪಂ.ನ ಹಸಿ ಕಸವನ್ನು ಬನ್ನೂರು ಸಿಎನ್ಜಿ ಘಟಕಕ್ಕೆ ಸಾಗಾಟ ಮಾಡಲು ತೀರ್ಮಾನಿಸಿ ಈ ಬಗ್ಗೆ ನಗರಸಭೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಬೊಳ್ಳಾರು, ಆನೆಪಲ್ಲ, ಕರುವೇಲು ಬಳಿಯಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದರೂ ಸ್ಥಳೀಯ ನಿವಾಸಿಗಳ ಸಂಪರ್ಕ ರಸ್ತೆಯನ್ನು ಕಡಿತಗೊಳಿಸಿ ಸಮಸ್ಯೆ ಉಂಟು ಮಾಡಿರುವುದನ್ನು ಸಭೆಯ ಗಮನಕ್ಕೆ ತಂದ ಗ್ರಾ.ಪಂ. ಸದಸ್ಯ ರಮೇಶ್ ನಾಯ್ಕ, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು.
ಸಭೆಯಲ್ಲಿ ಸದಸ್ಯರಾದ ಹರೀಶ್ ಕೆ., ವಿಜಯಕುಮಾರ್, ಎ. ರತ್ನಾವತಿ, ವೇದಾವತಿ, ಗೀತಾ ಉಪಸ್ಥಿತರಿದ್ದರು. ಸಹಾಯಕ ಲೆಕ್ಕಾಧಿಕಾರಿ ದೇವಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು.
