ಪುತ್ತೂರು: ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸುದಾನ ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಉತ್ಸವ “ಸುದಾನ ಲೂಮಿಯ 2025 – Spark the Spirit, Shine the Stage” ಕಾರ್ಯಕ್ರಮವು ಕಾಲೇಜಿನ ಎಡ್ವರ್ಡ್ ಕಾನ್ಫರೆನ್ಸ್ ಹಾಲ್ನಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಸುದಾನ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ರೆ.ವಿಜಯ್ ಹಾರ್ವಿನ್ ರವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ಲೂಮಿಯ” ಎಂಬ ಹೆಸರಿನ ಅರ್ಥವನ್ನು ವಿಶ್ಲೇಷಿಸಿ ಜ್ಞಾನ ಎಂಬ ಬೆಳಕಿನ ಮೂಲಕ ಯುವ ಮನಸ್ಸುಗಳನ್ನು ಬೆಳಗಿಸುವುದೇ ಈ ಉತ್ಸವದ ಮೂಲ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಅನಾವರಣಗೊಳಿಸಿ ಪ್ರದರ್ಶಿಸಲು ಇರುವಂತಹ ವೇದಿಕೆಗಳು ಅತ್ಯಂತ ಅಗತ್ಯವಿದೆ ಎಂದರು.
ಮುಖ್ಯ ಅತಿಥಿ, ಕಾಲೇಜಿನ ಸಂಚಾಲಕರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸ್ವಂತ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಯುವಶಕ್ತಿ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ ಎಂದರು.
ವೇದಿಕೆಯಲ್ಲಿ ಕಾಲೇಜು ಕೋಶಾಧಿಕಾರಿ ಆಸ್ಕರ್ ಆನಂದ್, ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಪ್ರಾಂಶುಪಾಲ ಸುಪ್ರೀತ್ ಕೆ.ಸಿ. ಹಾಗೂ ಕಾರ್ಯಕ್ರಮ ಸಂಯೋಜಕರಾದ ಗಣಿತ ಉಪನ್ಯಾಸಕಿ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.
ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು, ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕೌಶಲ್ಯಾಭಿವೃದ್ಧಿಯ ಜೊತೆಗೆ ಭವಿಷ್ಯದಲ್ಲಿ ಬೆಳವಣಿಗೆಗೆ ದಾರಿ ವಿಶಾಲವಾಗುತ್ತದೆ. ಸೋಲು–ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ ಎಂದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಜೀವನದ ಪ್ರತಿಯೊಂದು ಹೆಜ್ಜೆಯೂ ಒಂದೊಂದು ಪಾಠವಾಗಿದ್ದು, ಅದರ ಅನುಭವವನ್ನು ಮುಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಯಶಸ್ಸು ನಮ್ಮದೆ ಆಗುತ್ತದೆ ಎಂದರು.
ಗಣಿತ ಉಪನ್ಯಾಸಕಿ ಧನ್ಯಶ್ರೀ ಸ್ವಾಗತಿಸಿದರು. ಶ್ರೀಮತಿ ಪಲ್ಲವಿ ವರದಿಯನ್ನು ವಾಚಿಸಿ ಸ್ಪರ್ಧೆಗಳಲ್ಲಿ ವಿಜೇತರ ಹೆಸರನ್ನು ಘೋಷಿಸಿದರು. ಜೀವಶಾಸ್ತ್ರ ವಿಭಾಗದ ಶ್ರೀಮತಿ ಅಕ್ಷತಾ ಹಾಗೂ ರಸಾಯನಶಾಸ್ತ್ರ ವಿಭಾಗದ ಶ್ರೀಮತಿ ರಚನಾ ವಂದಿಸಿದರು. ವಾಣಿಜ್ಯ ವಿಭಾಗದ ಕುಮಾರಿ ಲತಾಶ್ರೀ ಹಾಗೂ ಆಂಗ್ಲ ಭಾಷಾ ವಿಭಾಗದ ಕು.ಮೆಲಿಷ ಪ್ರಿಯ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರು, ಸಂಘಟನಾ ತಂಡ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವದಿಂದ “ಸುದಾನ ಲೂಮಿಯ 2025″ ಉತ್ಸವವು ಯಶಸ್ವಿಯಾಗಿ ನೆರವೇರಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆ ಈ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣ ಮತ್ತು ಸ್ಮರಣೀಯಗೊಳಿಸಿತು.
ದಿನವಿಡೀ ನಡೆದ ವಿವಿಧ ಸಾಂಸ್ಕೃತಿಕ, ಬೌದ್ಧಿಕ ಹಾಗೂ ಸೃಜನಾತ್ಮಕ ಸ್ಪರ್ಧೆಗಳಲ್ಲಿ ಅನೇಕ ಪ್ರೌಢಶಾಲಾ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಭಾಗವಹಿಸಿ ತಮ್ಮ ಕಲಾತ್ಮಕತೆ, ಬೌದ್ಧಿಕ ಚಾತುರ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವದ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ನೀಡಿದರು. ವಿದ್ಯಾರ್ಥಿಗಳ ವೈವಿಧ್ಯಮಯ ಪ್ರದರ್ಶನಗಳು ಸಭಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ನೆನಪು ಮೂಡಿಸಿತು.
ಸನ್ಮಾನ..
ಈ ಸಂದರ್ಭದಲ್ಲಿ ಕಲ್ಲಡ್ಕ ವಸ್ತು ಸಂಗ್ರಹಾಲಯದ ಮಾಲಕರಾದ ಮಹಮ್ಮದ್ ಯಾಸಿರ್ ರವರಿಗೆ ಸನ್ಮಾನ ಸಲ್ಲಿಸಲಾಯಿತು.